ಮಾಗಳ-ಕಲ್ಲಾಗನೂರು ಸೇತುವೆಗಾಗಿ ಎಂಥ ಹೋರಾಟಕ್ಕೂ ಸಿದ್ಧ-ಶಾಸಕ ಡಾ. ಚಂದ್ರು ಲಮಾಣಿ

| Published : Jan 04 2024, 01:45 AM IST

ಮಾಗಳ-ಕಲ್ಲಾಗನೂರು ಸೇತುವೆಗಾಗಿ ಎಂಥ ಹೋರಾಟಕ್ಕೂ ಸಿದ್ಧ-ಶಾಸಕ ಡಾ. ಚಂದ್ರು ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾಗಳ-ಕಲ್ಲಾಗನೂರು ಸೇತುವೆ ಯೋಜನೆ ಬೇರೆಡೆ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿರುವ ಸ್ಥಳೀಯರು, ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಹೇಳಿದ್ದಾರೆ. ಯೋಜನೆ ಸ್ಥಳಾಂತರಕ್ಕೆ ಪತ್ರ ಬರೆದಿರುವ ಸಚಿವ ಎಚ್.ಕೆ. ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೂವಿನಹಡಗಲಿ: ತಾಲೂಕಿನ ಮಾಗಳ-ಕಲ್ಲಾಗನೂರು ಮಧ್ಯೆ ಉದ್ದೇಶಿಸಿರುವ ಸೇತುವೆ ಸ್ಥಳಾಂತರಿಸಬೇಕೆಂಬ ಸಚಿವ ಎಚ್‌.ಕೆ. ಪಾಟೀಲ ಅವರ ಪತ್ರ, ಇಂದಿಗೂ ಡಿಸಿಎಂ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರಿಗೆ ಗೊತ್ತಿಲ್ಲ. ಯಾರೇ ಎಷ್ಟೇ ವಿರೋಧ ಮಾಡಿದರೂ ಇದೇ ಜಾಗದಲ್ಲೇ ಸೇತುವೆ ನಿರ್ಮಾಣಕ್ಕೆ ಹೋರಾಟ ರೂಪಿಸುತ್ತೇವೆ ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ತಾಲೂಕಿನ ಮಾಗಳ ಗ್ರಾಮದ 10 ಕೆರೆ ತುಂಬಿಸುವ ಯೋಜನೆಯ ಬಳಿ ಹೋರಾಟದ ರೂಪುರೇಷೆ ಸಭೆಯಲ್ಲಿ ಮಾತನಾಡಿದ ಅವರು, ಗದಗ ಜಿಲ್ಲಾ ಉಸ್ತುವಾರಿ ಸಚಿವರಿಗೆ ಯಾರೋ ಹಾದಿ ತಪ್ಪಿಸುವ ಕೆಲಸ ಮಾಡಿದ್ದಾರೆ, ಸಚಿವರ ಪತ್ರ ಬರೆದಿರುವ ಹಿಂದೆ ವೈಯಕ್ತಿಕ ಹಿತಾಸಕ್ತಿ ಅಡಗಿದೆ. ನಮ್ಮ ಬಿಜೆಪಿ ಸರ್ಕಾರದಲ್ಲಿ ಮಂಜೂರು ಮಾಡಿದ್ದ ಸೇತುವೆಯನ್ನು ಇವರ ಸ್ಥಳಾಂತರ ಮಾಡುತ್ತಿದ್ದಾರೆ. ಅವರಿಗೆ ಹೆಚ್ಚು ಆಸಕ್ತಿ ಇದ್ದರೆ ತುಂಗಭದ್ರಾ ನದಿ ಬಹಳ ಉದ್ದವಿದೆ. 2 ಕಿಮೀಗೆ ಒಂದು ಸೇತುವೆ ನಿರ್ಮಾಣ ಮಾಡಿಕೊಳ್ಳಲಿ. ಆಗಿರುವ ಕೆಲಸಕ್ಕೆ ಅಡ್ಡಿ ಯಾಕೆ ಹಾಕುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಮಾಗಳ-ಕಲ್ಲಾಗನೂರು ಸೇತುವೆಗೆ ಜಲಸಂಪನ್ಮೂಲ ಸಚಿವರನ್ನೇ ಕರೆದು ಶಂಕುಸ್ಥಾಪನೆ ಪೂಜೆ ಮಾಡಿಸುತ್ತೇವೆ. ಇದರಲ್ಲಿ ನಮ್ಮ ಸ್ವಹಿತಾಸಕ್ತಿ ಇಲ್ಲ, ಬಡ ಜನರಿಗೆ ಹಾಗೂ ರೈತರಿಗೆ ಅನುಕೂಲವಾಗುವಂತಹ ಕೆಲಸ ಮಾಡುತ್ತಿದ್ದೇವೆ. ದಯಮಾಡಿ ಸಚಿವ ಎಚ್‌.ಕೆ. ಪಾಟೀಲ ಅವರು ತಮ್ಮ ಪತ್ರ ಪಾಪಸ್‌ ಪಡೆದು, ಆಗುವ ಕೆಲಸಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.ಸಿಂಗಟಾಲೂರು ಏತ ನೀರಾವರಿ ಹಿನ್ನೀರಿನಲ್ಲಿ ಸಂತ್ರಸ್ತರಾಗಿರುವ ಜನರ ಅನುಕೂಲಕ್ಕಾಗಿ ಮಂಜೂರಾಗಿರುವ ಸೇತುವೆಯಾಗಿದೆ. ಆದರೆ ಹೊಳೆ ಇಟ್ಟಗಿ ಹಾಗೂ ಸಾಸಲವಾಡ ಗ್ರಾಮಸ್ಥರು ಸಂತ್ರಸ್ತರಲ್ಲ. ಈ ಭಾಗದ ರೈತರು ಸಾವಿರಾರು ಎಕರೆ ಭೂಮಿ, ಆಸ್ತಿಯನ್ನು ಕಡೆದುಕೊಂಡಿದ್ದಾರೆ. ಆ ಜನರ ಅನುಕೂಲವಾಗಲು ನಾವು ಎಲ್ಲ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದರು.ಶಾಸಕ ಕೃಷ್ಣನಾಯ್ಕ ಮಾತನಾಡಿ, ಮಾಗಳ-ಕಲ್ಲಾಗನೂರು ಸೇತುವೆ ಸ್ಥಳಾಂತರ ಮಾಡಲು ಪತ್ರ ಬರೆದಿರುವ ಸಚಿವ ಎಚ್‌.ಕೆ. ಪಾಟೀಲ ಅವರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ. ಸಚಿವ ಪತ್ರ ನೋಡಿ ನಮಗೆ ಆಶ್ಚರ್ಯವಾಗಿದೆ. ಅವರನ್ನು ಹಾದಿ ತಪ್ಪಿಸುವ ಜನರಿಂದ ಈ ಕೆಲಸವಾಗಿದೆ. ಹೊಳೆ ಇಟ್ಟಗಿ, ಸಾಸಲವಾಡ ಮಧ್ಯೆ ಹೇಗೆ ಸೇತುವೆ ನಿರ್ಮಾಣ ಮಾಡುತ್ತಾರೆ? ಎರಡು ಗ್ರಾಮಗಳು ನದಿಯಿಂದ ಆಚೆ ಇವೆ. ಹೂವಿನಹಡಗಲಿ ತಾಲೂಕಿನ ಯಾವ ಗ್ರಾಮದಲ್ಲಿ ನಿರ್ಮಾಣ ಮಾಡುತ್ತಾರೆ ಎಂಬ ಸ್ಪಷ್ಟ ಮಾಹಿತಿ ಪತ್ರದಲ್ಲಿ ಇಲ್ಲ ಎಂದರು.ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಡಿ. 4ರಂದು ನೀರಾವರಿ ಅಧಿಕಾರಿಗಳ ಸಭೆ ಕರೆದಿದ್ದಾರೆ. ಆ ವೇಳೆ ಅವರನ್ನು ಇಬ್ಬರೂ ಶಾಸಕರು ಭೇಟಿ ಮಾಡಿ ಅವರಿಗೆ ಸರಿಯಾದ ಮಾಹಿತಿ ನೀಡುತ್ತೇವೆ. ಅವರಿಂದಲೇ ಮತ್ತೆ ಮಂಜೂರು ಮಾಡಿಸುತ್ತೇವೆಂದು ಹೇಳಿದರು.ಸಿಂಗಟಾಲೂರು ಏತ ನೀರಾವರಿ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ಅಧಿಕಾರಿಯನ್ನು ನಿಯೋಜನೆ ಮಾಡುತ್ತಿಲ್ಲ, ಇದರಿಂದ ಬಡ ರೈತರು ರೋಸಿ ಹೋಗಿದ್ದಾರೆ, ಅತ್ತ ಕಚೇರಿಗೆ ಅಲೆದರೂ ಕೆಲಸ ಮಾಡಲು ಅಧಿಕಾರಿಗಳಿಲ್ಲ. ಅತ್ತ ಕಾಲುವೆಗಳು ಸೋರುತ್ತಿವೆ. ಅವುಗಳ ದುರಸ್ತಿಗೆ ಅನುದಾನ ನೀಡಿಲ್ಲ. ಆ ಕುರಿತು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಲಿ ಎಂದರು.ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿ, ಮಂಜೂರಾಗಿರುವ ಸೇತುವೆ ನಿರ್ಮಾಣ ಹಿಂದಿನ ಶಾಸಕ ಗೂಳಪ್ಪ ಉಪನಾಳರ ಕನಸು. ಅದನ್ನು ನನಸು ಮಾಡಲು ಎಲ್ಲರೂ ಶ್ರಮಿಸಬೇಕಿದೆ. ಸಚಿವ ಎಚ್‌.ಕೆ. ಪಾಟೀಲ ಅವರು ಈ ರೀತಿ ಕಲ್ಲು ಹಾಕುವ ಕೆಲಸ ಮಾಡದೇ, ನೂತನ ಶಾಸಕರಿಗೆ ಮಾರ್ಗದರ್ಶಕರಾಗಿ ಸಹಕಾರ ನೀಡಲಿ. ಈ ಕುರಿತು ನಿರಂತರ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ. ವಾರದೊಳಗೆ ಹೋರಾಟ ಸಮಿತಿ ರಚಿಸಿ ಉಗ್ರ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.ಹೇಮಂತ ವಕೀಲ, ಕೆ. ತವನಪ್ಪ ಮಾತನಾಡಿದರು, ಕೆ. ಸತ್ಯನಾರಾಯಣರೆಡ್ಡಿ, ಗ್ರಾಪಂ ಅಧ್ಯಕ್ಷೆ ಬಸವ್ವ, ಎಸ್‌.ಎಂ. ಕೂಡ್ಲಯ್ಯ, ಅರವಳ್ಳಿ ಮಹಾಂತೇಶ, ಟಿ. ಧರ್ಮರೆಡ್ಡಿ, ಯಳಮಾಲಿ ವಿರೂಪಾಕ್ಷಪ್ಪ, ಎ. ಜಯಕೀರ್ತಿ, ತೋಟರ ಮಲ್ಲಿಕಾರ್ಜುನ, ಕವಸರ ಮಂಜುನಾಥ, ಸುಭಾಷಗೌಡ ಪಾಟೀಲ, ಉಮೇಶಗೌಡ, ಸೇರಿದಂತೆ ಮಾಗಳ, ಹಿರೇಹಡಗಲಿ ಎಲ್ಲ ಗ್ರಾಪಂ ಸದಸ್ಯರು ಹಾಗೂ ಕಲ್ಲಾಗನೂರು, ಹೆಬ್ಬಾಳ, ತೊಳಲಿ ಸೇರಿದಂತೆ ಹತ್ತಾರು ಹಳ್ಳಿಯ ನೂರಾರು ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.