ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರಸಭೆ ಅಧ್ಯಕ್ಷನಾಗಿದ್ದ ವೇಳೆ ಭ್ರಷ್ಟಾಚಾರ ನಡೆಸಿದ್ದರೆ ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದು ಮಾಜಿ ಅಧ್ಯಕ್ಷ ಸಿ.ಗಿರೀಶ್ ಸವಾಲು ಹಾಕಿದರು.ನಿವೇಶನ ಹಂಚಿಕೆ, ಖಾತೆ ಬಿಡುಗಡೆ, ಇ-ಸ್ವತ್ತು ವಿತರಣೆಯಲ್ಲಿ ಅಕ್ರಮ ಮಾಡಿದ್ದೇನೆ ಎಂದು ಹಾಲಿ ಅಧ್ಯಕ್ಷ ಸಮೀವುಲ್ಲಾ ನನ್ನ ವಿರುದ್ಧ ಆಧಾರ ರಹಿತ ಅರೋಪ ಮಾಡಿದ್ದಾರೆ. ಈ ಸಂಬಂಧ ಸಿಬಿಐ ಸೇರಿದಂತೆ ಯಾವುದೇ ತನಿಖೆ ಎದುರಿಸಲು ಸಿದ್ಧನಿದ್ದೇನೆ. ನಾಲ್ಕು ಬಾರಿ ಸದಸ್ಯ, ಮೂರು ಬಾರಿ ಅಧ್ಯಕ್ಷರಾಗಿರುವ ತಾವು ಮಲ್ಲಪ್ಪ ಬಡಾವಣೆ, ರಾಜಶೇಖರ್ ಲೇಔಟ್ ನಿರ್ಮಾಣ, ದಾಖಲೆ ಕೊಡುವಲ್ಲಿ ಏನೇನು ಅಕ್ರಮ ಮಾಡಿದ್ದೀರಿ, ನಿಯಮ ಉಲ್ಲಂಘಿಸಿ ನಗರಸಭೆ ಸದಸ್ಯ ಜಿ.ಟಿ.ಗಣೇಶ್ ಅವರಿಗೆ ಇ-ಸ್ವತ್ತು ಕೊಟ್ಟವರು ಯಾರು ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಿ. ಅದನ್ನು ಬಿಟ್ಟು ಇನ್ನೊಬ್ಬರ ಮೇಲೆ ಗೂಬೆ ಕೂರಿಸಲು ಹೊರಟರೆ ನ್ಯಾಯಲಯದಲ್ಲಿ ಮಾನನಷ್ಟ ಮೊಕದ್ದಮ್ಮೆ ಹೂಡುವುದಾಗಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ೬೦ ಲಕ್ಷ ರು. ಕೊಟ್ಟಿದ್ದಾರೆಂದು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಅಷ್ಟು ದೊಡ್ಡಮೊತ್ತದ ಹಣ ಎಲ್ಲಿಂದ ಬಂತು, ಆದಾಯ ತೆರಿಗೆ ಪಾವತಿ ಮಾಡಲಾಗಿದೆಯೇ, ಕೊಟ್ಟವರನ್ನು ಬಿಟ್ಟು ನೀವೇಕೆ ಸ್ಪಷ್ಟನೆ ಕೇಳುತ್ತಿದ್ದೀರಿ, ಹಣಕ್ಕೂ ನಿಮಗೂ ಸಂಬಂಧವಿದೆಯೇ ಉತ್ತರಿಸಿ ಮಿಸ್ಟರ್ ಸಮೀವುಲ್ಲಾ, ಸುಕ್ಷೇತ್ರ ಯಾದಾಪುರ ಜೇನುಕಲ್ ಸಿದ್ದೇಶ್ವರ ಸ್ವಾಮಿ ಸನ್ನಿಧಿಗೆ ಕುಡಿಯುವ ನೀರು ಪೂರೈಕೆ ಮಾಡಲು ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಸಮೀವುಲ್ಲಾ ವಿರೋಧಿಸಿದ್ದನ್ನು ಜನರು ಮರೆತಿಲ್ಲ. ಅಧಿಕಾರದ ಆಸೆ ತೋರಿಸಿ ಹಲವರಿಗೆ ಮೋಸ ಮಾಡಿರುವುದು ಜಗಜ್ಜಾಹೀರಾಗಿದೆ. ಮಾಜಿ ಅಧ್ಯಕ್ಷ ಸಿದ್ದರಾಮಶೆಟ್ಟಿ, ದೇವಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸಿ ಶ್ರೀರಾಮನ ಜಪ ಮಾಡಿದರೆ ಪಾಪಕೃತ್ಯ ದೂರವಾಗದು. ನಗರದ ಸಮಗ್ರ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತೇವೆಯೇ ಹೊರತು ಅಡ್ಡಿಪಡಿಸುವ ಕೆಲಸ ಮಾಡುವುದಿಲ್ಲ ಎಂದರು.ನಗರದ ಜನರಿಗೆ ನೀವು ಮಾಡಿರುವ ಅನ್ಯಾಯದ ಕುರಿತು ಮಸೀದಿಯಲ್ಲಿ ಆಣೆ ಮಾಡಲು ಸಿದ್ಧನಿದ್ದೇನೆ. ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಬಲದೊಂದಿಗೆ ಸಂವಿಧಾನದ ಆಶಯದಂತೆ ಅಧಿಕಾರ ಪಡೆದು ಆಡಳಿತ ನಡೆಸಿದ್ದು ವಸೂಲಿ ಗಿರಾಕಿಗಳ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
ಮುಖಂಡ ಹರ್ಷವರ್ಧನ್‌ರಾಜ್ ಮಾತನಾಡಿ, ನಿಮ್ಮ ದೌರ್ಜನ್ಯ, ದಬ್ಬಾಳಿಕೆ ವಿರೋಧಿಸಿ ಬಂಡಾಯ ಸಾರಿದ ಏಳು ನಗರಸಭೆ ಸದಸ್ಯರ ರಾಜಕೀಯ ಜೀವನ ಹಾಳುಮಾಡಿದ್ದು ಸಮೀವುಲ್ಲಾನೇ ಹೊರತು ಬೇರ್ಯಾರೂ ಎಲ್ಲ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು. ಭ್ರಷ್ಟಾಚಾರ ವಿರೋಧಿ ಹೋರಾಟ ಹತ್ತಿಕ್ಕಲು ಅಟ್ರಾಸಿಟಿ ಕೇಸ್ ಹಾಕಲಾಗಿದೆ ಎಂದು ಶಿವನ್‌ರಾಜ್ ಆಕ್ರೋಶ ವ್ಯಕ್ತಪಡಿಸಿದರು.ಮುಖಂಡರಾದ ರಮೇಶ್ ನಾಯ್ಡು, ನಗರಸಭೆ ಸದಸ್ಯರಾದ ಮೇಲುಗಿರಿಗೌಡ, ಭಾಸ್ಕರ್, ರಮೇಶ್, ಗಣೇಶ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.