ಬಿಬಿಎಂಪಿ ಚುನಾವಣೆಗೆ ಸಜ್ಜಾಗಿ: ಕೈ ನಾಯಕರಿಗೆ ಡಿಕೆಶಿ ಸೂಚನೆ

| Published : Jun 16 2024, 01:50 AM IST / Updated: Jun 16 2024, 07:13 AM IST

ಸಾರಾಂಶ

ವಿಳಂಬ ಮಾಡದೆ ಬಿಬಿಎಂಪಿ ಚುನಾವಣೆ ಮಾಡುತ್ತೇವೆ. ಅದಕ್ಕೆ ಸಿದ್ಧರಾಗಿ ಎಂದು ಕಾಂಗ್ರೆಸ್‌ ನಾಯಕರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

 ಬೆಂಗಳೂರು :  ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಶೀಘ್ರವೇ ಪ್ರಕಟವಾಗಲಿದೆ. ಈ ವೇಳೆಗೆ ಪಕ್ಷವನ್ನು ಸಜ್ಜುಗೊಳಿಸಿ ಪಾಲಿಕೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಅಗತ್ಯ ಚುನಾವಣಾ ಸಿದ್ಧತೆ ಮಾಡಿ’ ಎಂದು ಬಿಬಿಎಂಪಿ ವ್ಯಾಪ್ತಿಯ ಕಾಂಗ್ರೆಸ್ ನಾಯಕರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬಿಬಿಎಂಪಿ ವಿಭಜನೆ ನೆಪದಲ್ಲಿ ಚುನಾವಣೆ ವಿಳಂಬವಾಗುವುದಿಲ್ಲ. ಚುನಾವಣೆ ಬಳಿಕವೂ ವಿಭಜನೆ ಮಾಡಬಹುದು. ಹೀಗಾಗಿ ಬಿಬಿಎಂಪಿ ಚುನಾವಣೆಗೆ ಸಜ್ಜಾಗಿ. ಶತಾಯಗತಾಯ ಬಿಬಿಎಂಪಿಯಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಬೆಂಗಳೂರು ನಗರದ ಬ್ಲಾಕ್ ಕಾಂಗ್ರೆಸ್‌ ನಾಯಕರ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್‌, ‘ಪಾಲಿಕೆ ಚುನಾವಣೆ ಸಿದ್ಧತೆ ಬಗ್ಗೆ ಸಭೆ ಮಾಡಿದ್ದೇವೆ. ಪಾಲಿಕೆ ಚುನಾವಣೆ ಶೀಘ್ರವೇ ಪ್ರಕಟವಾಗಲಿದ್ದು, ಈ ವೇಳೆ ಪಕ್ಷ ಸಜ್ಜುಗೊಳಿಸಲು ಸೂಚಿಸಿದ್ದೇನೆ’ ಎಂದು ಹೇಳಿದರು.

ಇನ್ನು ಖಾಲಿ ಇರುವ ಪದಾಧಿಕಾರಿಗಳ ಹುದ್ದೆ ತುಂಬಲು, ನಿಷ್ಕ್ರಿಯರಾಗಿರುವ ಪದಾಧಿಕಾರಿಗಳ ಜಾಗಕ್ಕೆ ಬೇರೆಯವರನ್ನು ನೇಮಿಸುವಂತೆ ಸೂಚನೆ ನೀಡಿದ್ದೇನೆ. ಕೆಲಸ ಮಾಡದ ಪದಾಧಿಕಾರಿಗಳಿಗೆ ಒಂದು ತಿಂಗಳ ಕಾಲಾವಕಾಶ ನೀಡಿದ್ದೇವೆ. ತಿದ್ದಿಕೊಳ್ಳದಿದ್ದರೆ ಅವರನ್ನು ಬದಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೆಂಗಳೂರು ನಗರದಲ್ಲಿ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ನಾವು ಸೋತಿರಬಹುದು. ಆದರೆ ಪಾಲಿಕೆ ಚುನಾವಣೆಯಲ್ಲಿ ನಾವು ಚೇತರಿಸಿಕೊಳ್ಳುವ ವಿಶ್ವಾಸ ನನಗಿದೆ. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಬೇಕು ಎಂದು ನಾಯಕರಿಗೆ ಸೂಚಿಸಿದ್ದೇನೆ ಎಂದು ಶಿವಕುಮಾರ್‌ ತಿಳಿಸಿದರು.ಬಿಬಿಎಂಪಿ ವಿಭಾಗಿಸುವ ಬಗ್ಗೆ ಸಮಿತಿಯ ವರದಿ ಇದೆ. ಸದ್ಯಕ್ಕೆ 225 ವಾರ್ಡ್ ಮಾಡಲಾಗಿದ್ದು, ಚುನಾವಣೆ ನಂತರವೂ ಬಿಬಿಎಂಪಿ ವಿಭಜನೆ ಮಾಡಬಹುದು. ಈಗಲೇ ಮಾಡಬೇಕೆಂದೇನಿಲ್ಲ. ಹೀಗಾಗಿ ಚುನಾವಣೆ ಬಳಿಕ ವಿಭಜನೆ ಬಗ್ಗೆ ಪರಿಶೀಲಿಸಲಾಗುವುದು.-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ.

ಜಿಪಂ, ತಾಪಂ ಚುನಾವಣೆ ಮಾಡುತ್ತೇವೆ: ಡಿಸಿಎಂ

ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, ನ್ಯಾಯಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ನಾವು ಚುನಾವಣೆ ನಡೆಸಲೇಬೇಕು. ಬಿಬಿಎಂಪಿ, ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಸೇರಿದಂತೆ ಎಲ್ಲಾ ಚುನಾವಣೆ ಮಾಡಲು ಬದ್ಧವಾಗಿದ್ದೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಅಶೋಕ್‌ ಜೋಕರ್‌, ಸುಳ್ಳುಗಾರ: ಡಿಕೆಶಿ

‘ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌. ಅಶೋಕ್‌ ಒಬ್ಬ ಸುಳ್ಳುಗಾರ ಹಾಗೂ ಜೋಕರ್‌. ಕೇವಲ ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಜೋಕರ್‌ ರೀತಿ ಮಾತನಾಡುತ್ತಾರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ರಾಜ್ಯ ಸರ್ಕಾರ ಟ್ಯಾಂಕರ್‌ಗಳಿಂದ ಹಣ ವಸೂಲಿ ಮಾಡಿ ಹೈಕಮಾಂಡ್‌ಗೆ ಕಳುಹಿಸುತ್ತಿದೆ ಎಂಬ ಅಶೋಕ್‌ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಅಶೋಕ್ ಅವರು ಒಬ್ಬ ಸುಳ್ಳುಗಾರ ಮತ್ತು ಜೋಕರ್‌. ಅವರ ಹೇಳಿಕೆ ಸತ್ಯವಾಗಿದ್ದರೆ ಯಾವುದಾದರೂ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಿ. ತಮ್ಮ ಸರ್ಕಾರದ ಅವಧಿಯಲ್ಲಿ ಮಾಡಿದ ಅನುಭವವನ್ನು ಅವರು ಈಗ ಹೇಳುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.ನೀರಿನ ಅಭಾವದ ಕುರಿತು ಮಾತನಾಡಿ, ಬೆಂಗಳೂರಿನಲ್ಲಿ ಈಗ ನೀರಿನ ಸಮಸ್ಯೆ ಇಲ್ಲ. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದೆ ಎಂದಷ್ಟೇ ಹೇಳಿದರು.

ಪ್ರತಿದಿನ ಕುಡಿಯುವ ನೀರಿನ ಪರೀಕ್ಷೆ ಕಡ್ಡಾಯ:ಕಲುಷಿತ ನೀರಿನ ಬಗ್ಗೆ ಪ್ರತಿಕ್ರಿಯಿಸಿ, ಪ್ರತಿದಿನ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಪರೀಕ್ಷೆ ನಡೆಸಿ ಜನರಿಗೆ ನೀಡಲಾಗುತ್ತಿದೆ. ಕಾವೇರಿ, ಬೋರ್ ವೆಲ್ ನೀರನ್ನು ಸಹ ಪರೀಕ್ಷೆಗೆ ಒಳಪಡಿಸುತ್ತಿದ್ದು. ದಿನದ ವರದಿ ನನಗೂ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಪ್ರತಿದಿನವೂ ವರದಿ ನೀಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಅವರ ಪ್ರಕರಣದಲ್ಲಿ ದ್ವೇಷ ರಾಜಕಾರಣ ಎಂಬ ಬಿಜೆಪಿ ಆರೋಪಕ್ಕೆ, ಇದು ಕಾನೂನಿನ ಪ್ರಕ್ರಿಯೆ. ಬಿಜೆಪಿ ನಾಯಕರು ನಮ್ಮ ಹೆಸರು ಯಾಕೆ ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿದಿಲ್ಲ. ಇದರಲ್ಲಿ ನಮ್ಮ ಹಸ್ತಕ್ಷೇಪವಿಲ್ಲ ಎಂದು ಅವರಿಗೂ ಗೊತ್ತಿದೆ. ಆದರೂ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದರು.ಸುಳ್ಳಿಗೆ ಮತ್ತೊಂದು ಹೆಸರೇ ಬೊಮ್ಮಾಯಿ: ಡಿಕೆಶಿ ಕಿಡಿಸುಳ್ಳಿಗೆ ಮತ್ತೊಂದು ಹೆಸರೇ ಬೊಮ್ಮಾಯಿ ಅವರು ಎನ್ನುವಂತಾಗುತ್ತಿದೆ. ಭದ್ರಾ ಮೇಲ್ದಂಡೆ ವಿಚಾರದಲ್ಲಿ ಮತ್ತೆ ಮತ್ತೆ ಅದನ್ನು ಅವರು ಸಾಬೀತು ಮಾಡುತ್ತಿದ್ದಾರೆ. ಇದು ಆಗಬಾರದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲೇ ಭದ್ರಾ ಮೇಲ್ದಂಡೆ ಯೋಜನೆಯನ್ನು ಬಜೆಟ್ ಅಲ್ಲಿ ಅವರು ಸೇರಿಸಿಕೊಂಡರು. ಬೊಮ್ಮಾಯಿ ಅವರು ಸಹ ನೀರಾವರಿ ಸಚಿವರಾಗಿದ್ದವರು. ರಾಷ್ಟ್ರೀಯ ಯೋಜನೆ ಪ್ರಸ್ತಾವನೆ ಬಗ್ಗೆ ಏನೂ ಮಾಡಲಿಲ್ಲ ಎಂದು ತಿರುಗೇಟು ನೀಡಿದರು.