ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ಮತಕ್ಷೇತ್ರದಲ್ಲಿ ರಸ್ತೆ, ಚರಂಡಿಯಷ್ಟೇ ಅಭಿವೃದ್ಧಿ ಮಾಡಿಲ್ಲ. ನನ್ನ ಶಾಸಕತ್ವದ ಅವಧಿಯಲ್ಲಿ ಏನೇನು ಅಭಿವೃದ್ಧಿ ಕೆಲಸಗಳ ಆಗಿದೆ ಎಂಬುವುದರ ಸಂಪೂರ್ಣ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಬನ್ನಿ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಅವರಿಗೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಸವಾಲು ಹಾಕಿದರು.ನವನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಏನೇನು ಮಾಡಿನಿ, ಕ್ಷೇತ್ರದಲ್ಲಿ ಎಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂಬುವುದರ ಸಂಪೂರ್ಣ ಚರ್ಚೆಗೆ ನಾನು ಸಿದ್ಧನಿದ್ದೇನೆ. ಅವರು ಎಲ್ಲೇ ಕರೆದರೂ ಬಹಿರಂಗ ಚರ್ಚೆಗೆ ನಾನು ರೆಡಿಯಾಗಿದ್ದೇನೆ. ಚರಂತಿಮಠ ಚಿಲ್ಲರೇ ರಾಜಕಾರಣಿ ಅಲ್ಲ, ನೀನು ರಾಜಕೀಯ ಮಾಡಲು ಯೋಗ್ಯನಲ್ಲ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಬಿಜೆಪಿ ಎಂದೂ ಹಾಳು ಮಾಡಿಲ್ಲ. ಕಾರ್ಯಕರ್ತರಿಗೆ ಗೌರವ ಕೊಡುವ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ:ಬಾಗಲಕೋಟೆ ತೋಟಗಾರಿಕೆ ವಿವಿ ಸ್ಥಾಪನೆ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, 20 ಪ್ರಾಥಮಿಕ ಶಾಲೆ, 7 ಹೈಸ್ಕೂಲ್ ಸ್ಥಾಪನೆ, ಉರ್ದು ಶಾಲೆ ಕಟ್ಟಡ, ಆಶ್ರಯ ಯೋಜನೆಯಡಿ ಬಡವರಿಗೆ ಮನೆ ನಿರ್ಮಾಣ, ಕ್ಷೇತ್ರದಲ್ಲಿ ಸಾವಿರಾರು ರೈತರ ಲಕ್ಷಾಂತರ ಭೂಮಿ ಹಸಿರು ಮಾಡಲು ಏತ ನೀರಾವರಿ ಯೋಜನೆ ಜಾರಿಗೆ ತಂದಿದ್ದು, ಹೀಗೆ ಇನ್ನೂ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದು ಅಭಿವೃದ್ಧಿ ಅಲ್ಲವಾ ಎಂದು ಪ್ರಶ್ನಿಸಿದರು.
ಪೂಜಾರ ನಿರುದ್ಯೋಗಿ ರಾಜಕಾರಣಿ ಅಲ್ಲ:ಪಿ.ಎಚ್.ಪೂಜಾರ ನಿರುದ್ಯೋಗ ರಾಜಕಾರಣಿ. ನಾನು ಉದ್ಯೋಗ ರಾಜಕಾರಣಿಯಾಗಿದ್ದೇನೆ. ಬಿವ್ಹಿವ್ಹಿ ಸಂಘದ ಬೆಳವಣಿಗೆ ಜತೆಗೆ ಕಾರ್ಯಕರ್ತರೊಂದಿಗೆ ಬೆರೆಯುವುದು, ಕ್ಷೇತ್ರದ ಅಭಿವೃದ್ಧಿಗೆ ಒತ್ತು, ಜನರ ಅಹವಾಲು ಆಲಿಸುವುದು, ಬಿಟಿಡಿಎ, ನಗರಸಭೆ, ಬುಡಾ ಸಭೆಗಳನ್ನು ನಡೆಸಿ ಮತ್ತೆ ಬಿವ್ಹಿವ್ಹಿ ಸಂಘದ ಕೆಲಸಕ್ಕೆ ಶಾಸಕನಾಗಿದ್ದ ಸಂದರ್ಭದಲ್ಲಿ ಸಮಯವನ್ನು ಮೀಸಲಿಡುತ್ತಿದ್ದೆ. ನನಗೆ ಕೆಲಸ ಮಾಡಲು ಸಮಯವೇ ಸಾಲುವುದಿಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೆ ಖಾಲಿನೇ ಇರುತ್ತಾರೆ. ಇಂತಹವರಿಂದ ಸಮಾಜ ಸೇವೆ ಏನು ಆಗಿದೆ. ಒಂದು ಬ್ಯಾಂಕ್, ಸಂಘ ಸಂಸ್ಥೆ ಕಟ್ಟಿ ನೂರಾರು ಜನರಿಗೆ ಉದ್ಯೋಗ ನೀಡಿರುವುದನ್ನು ತೋರಿಸಲು ಎಂದರು.
ನಿಮ್ಮಿಂದ ಶಾಸಕನಾಗಿಲ್ಲ:2018ರಲ್ಲಿ ಪೂಜಾರ ಪಕ್ಷಕ್ಕೆ ಬರದೇ ಇದ್ದರೂ ಬಿಜೆಪಿ ಗೆಲ್ಲುತ್ತದೆ ಎಂಬುವುದು ಪ್ರತಿಯೊಬ್ಬರಿಗೂ ಗೊತ್ತಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಸಿಗದೇ ಇದ್ದಾಗ ನಾನು ನಾಮಪತ್ರ ಸಲ್ಲಿಸಿದ ನಂತರ ಬಿಜೆಪಿಗೆ ಬಂದಿದ್ದಾರೆ. ನನ್ನ ವಿರುದ್ಧವೇ ನಿಂತು ಎರಡು ಬಾರಿ ಸೋತಿರುವುದು ಅವರಿಗೆ ಗೊತ್ತಿಲ್ಲವೇ?. ನನ್ನ ವಿರುದ್ಧ ನಿಲ್ಲಬೇಡಿ ಎಂದು ಸಂಘ ಪರಿವಾರದ ನಾಯಕರು ಹೇಳಿದರೂ ಬಿಜೆಪಿ ವಿರುದ್ಧ ನಿಂತವರು ಯಾರು ಎಂಬುವುದನ್ನು ತಿಳಿದುಕೊಂಡು ಮಾತನಾಡಿ. ನಿಮ್ಮಿಂದ ನಾನೇನು ಗೆದ್ದು ಶಾಸಕನಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ಬಗ್ಗೆ ಮಾತನಾಡುವ ನೈತಿಕತೆ ನಿನಗಿಲ್ಲ:ಕೆಎಲ್ಇ, ಬಿಎಲ್‌ಡಿ, ಕಲಬುರ್ಗಿ ಹಾಗೂ ದಾಣಗೇರಿಯಲ್ಲಿ ದೊಡ್ಡ ಸಂಸ್ಥೆಗಳು ಇದ್ದವರು ರಾಜಕಾರಣಕ್ಕೆ ಬಂದಿಲ್ಲವೇ?. ನನ್ನ ಬಗ್ಗೆ ಮಾತನಾಡುವ ನೈತಿಕತೆ ನಿನಗಿಲ್ಲ ಎಂದು ಪೂಜಾರವರ ವಿರುದ್ಧ ಆಕ್ರೋಶ ಹೊರಹಾಕಿದರು. ಬಿವಿವಿ ಸಂಘ ಬಿಟ್ಟು ರಾಜಕೀಯ ಮಾಡಲು ಬನ್ನಿ ಎನ್ನುವ ಪೂಜಾರ ನಮ್ಮ ಸಂಘದ ಚೇರಮನ್ರೇ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಮಾತನಾಡಿ, ಬಿಜೆಪಿ ಪಾರ್ಟಿ ನಮ್ಮ ನಾಯಕರಾದ ಚರಂತಿಮಠರ ಮನೆಯಲ್ಲಿ ಇಲ್ಲ. ಕಾರ್ಯಕರ್ತರ ಹಿಡಿತದಲ್ಲಿದೆ. ನಮ್ಮ ನಾಯಕರನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಚರಂತಿಮಠರ ಸಂಬಂಧಿಕರೊಬ್ಬರು ರಾಜಕೀಯದಲ್ಲಿ ಇಲ್ಲ. ಬಾಗಲಕೋಟೆ ಕ್ಷೇತ್ರದ ಅಭಿವೃದ್ಧಿ, ಪಕ್ಷದ ಸಂಘಟನೆಯಲ್ಲಿ ಅವರು ತೊಡಗಿದ್ದಾರೆ. ಅವರ ಬಗ್ಗೆ ವಿರೋಧ ಮಾಡಿದರೆ ಕಾರ್ಯಕರ್ತರು ಸಹಿಸುವುದಿಲ್ಲ ಎಂದರು.ಈ ವೇಳೆ ಮಹೇಶ ಅಥಣಿ ,ಶಿವಾನಂದ ಟವಳಿ, ಗುಂಡೂರಾವ್ ಸಿಂಧೆ, ಸತ್ಯನಾರಾಯಣ ಹೇಮಾದ್ರಿ, ಲಕ್ಷ್ಮೀನಾರಾಯಣ ಕಾಸಟ ಪತ್ರಿಕಾಗೋಷ್ಠಿಯಲ್ಲಿದ್ದರು.
---ಬಾಕ್ಸ್
ವಕೀಲಗೆ ಅಪಮಾನ ಮಾಡಿಲ್ಲ: ಚರಂತಿಮಠವಕೀಲ ವೃತ್ತಿ ಮಾಡುವವರ ಬಗ್ಗೆ ಅಪಮಾನ ಮಾಡುವಂತಹ ಹೇಳಿಕೆಯನ್ನು ನಾನು ನೀಡಿಲ್ಲ. ಸಿವಿಲ್, ಕ್ರಿಮಿನಲ್ ಕೇಸ್ ನಡೆಸುವುದು ಪೂಜಾರಗೆ ಗೊತ್ತಿಲ್ಲ. ವಕೀಲಕಿ ಮಾಡುವುದು ನಿನಗ ಗೊತ್ತಿಲ್ಲ ಎಂದು ಹೇಳಿದ್ದೇನೆ. ಆದರೆ ವಕೀಲ ವೃತ್ತಿಯವರ ಬಗ್ಗೆ ಮಾತನಾಡಿದ್ದೇನೆ ಎಂಬುದನ್ನು ತಪ್ಪು ಸಂದೇಶ ನೀಡಿದ್ದು ಸುಳ್ಳು ಎಂದರು.