ಸಾರಾಂಶ
ನನ್ನ ಹಿಂದೆ ಗುರು ಇದ್ದಾರೆ, ಮುಂದೆ ಗುರಿಯಿದೆ. ನನ್ನ ಗುರಿ ಸ್ಪಷ್ಟವಾಗಿದ್ದು ಬಿಜೆಪಿ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಬಿಜೆಪಿ ವೈದ್ಯಕೀಯ ಪ್ರಕೋಷ್ಟದ ಸಂಚಾಲಕ ಡಾ.ಬಾಬುರಾಜೇಂದ್ರ ನಾಯಕ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ನನ್ನ ಹಿಂದೆ ಗುರು ಇದ್ದಾರೆ, ಮುಂದೆ ಗುರಿಯಿದೆ. ನನ್ನ ಗುರಿ ಸ್ಪಷ್ಟವಾಗಿದ್ದು ಬಿಜೆಪಿ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಬಿಜೆಪಿ ವೈದ್ಯಕೀಯ ಪ್ರಕೋಷ್ಟದ ಸಂಚಾಲಕ ಡಾ.ಬಾಬುರಾಜೇಂದ್ರ ನಾಯಕ ಹೇಳಿದ್ದಾರೆ.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಯ ಘೋಷಣೆಯಾಗಿದೆ. ಹೈಕಮಾಂಡ್ ಅವರನ್ನು ಬದಲಿಸಿ ನನಗೆ ಟಿಕೆಟ್ ಕೊಡಲಿದೆ ಎಂಬ ನಂಬಿಕೆ ಇದೆ. ಏ.19ರವರೆಗೆ ಕಾಲಾವಕಾಶ ಇದ್ದು, ಅಷ್ಟರಲ್ಲಿ ನನ್ನ ಗುರು ನನಗೆ ನ್ಯಾಯ ಒದಗಿಸುವ ವಿಶ್ವಾಸವಿದೆ. ಗುರುವಿನ ಆಶೀರ್ವಾದ, ಮಾರ್ಗದರ್ಶನದಲ್ಲಿ ನಾನು ಮುಂದುವರಿಯುತ್ತಿದ್ದೇನೆ. ಈಗಾಗಲೇ ನನಗೆ ಸಂಘ ಪರಿವಾರ, ಬಿಜೆಪಿ ಕಾರ್ಯಕರ್ತರು, ಹಲವು ಮಠಾಧೀಶರು ಫೋನ್ ಮಾಡಿ ಆಶೀರ್ವಾದ ಮಾಡಿದ್ದು, ಒಂದು ವೇಳೆ ಟಿಕೆಟ್ ಸಿಗದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲೂ ಸಿದ್ಧನಾಗಿದ್ದೇನೆ ಎಂದರು.
ನಾನು ಲಂಬಾಣಿ ಸಮುದಾಯದವನಾಗಿದ್ದರಿಂದ ಹಿಂದು ಧರ್ಮಕ್ಕೆ ಕಂಟಕವಾದ ಮತಾಂತರಕ್ಕೆ ಸಡ್ಡು ಹೊಡೆದು, ಕ್ರಿಶ್ಚಿಯನ್ ಮಿಷನರಿಗಳ ದಾಳಿ ವಿರೋಧಿಸಿ ಸಮಾಜದ ಸಾವಿರಾರು ಜನರನ್ನು ಹಿಂದು ಧರ್ಮಕ್ಕೆ ತಂದಿದ್ದೇನೆ. ಅಲ್ಲದೆ, ಕೋವಿಡ್ ವೇಳೆ ನನ್ನ ಆಸ್ಪತ್ರೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಆರ್‌ಎಸ್‌ಎಸ್ ಮಾರ್ಗದರ್ಶನದಲ್ಲಿ ಬಾಗಲಕೋಟೆ, ಜಮಖಂಡಿ, ಮುಧೋಳದಲ್ಲಿ ಕೋವಿಡ್ ರೋಗಿಗಳಿಗಾಗಿ ಸೇವೆ ಸಲ್ಲಿಸಿದ್ದೇನೆ ಎಂದು ತಮ್ಮ ಸೇವೆಯನ್ನು ಸ್ಮರಿಸಿಕೊಂಡರು.ಸಂಸದ ಜಿಗಜಿಣಗಿ ವಿರುದ್ಧ ಕಿಡಿ:
ನನಗೆ ಟಿಕೆಟ್ ಸಿಗದ ಸಮಯದಲ್ಲಿ ನನ್ನ ಅಭಿಮಾನಿಗಳು ನ್ಯಾಯ ಕೇಳೋಕೆ ಬಿಜೆಪಿ ಕಾರ್ಯಾಲಯಕ್ಕೆ ಹೋದರೆ ನಾನು ವಿಜಯಪುರ ಜಿಲ್ಲೆಯವನೇ ಅಲ್ಲ ಎಂದು ಮಹಾನುಭಾವ ಸಂಸದರು ಹೇಳಿದ್ದಾರೆ. ಅಖಂಡ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಗಣಿ ತಾಂಡಾದಲ್ಲಿ ಹುಟ್ಟಿದ್ದು, ನಾನು ಇದೇ ಜಿಲ್ಲೆಯವನೇ. ತಾವು ಸಹ ಈ ಹಿಂದೆ ಪಕ್ಕದ ಚಿಕ್ಕೋಡಿಗೆ ಹೋಗಿ ಸಂಸದರಾಗಿಲ್ಲವೇ? ಅದು ಕೂಡ ಆ ಮಹಾನುಭಾವನಿಗೆ ಗೊತ್ತಾಗಿಲ್ಲವೇ ಎಂದು ಸಂಸದ ರಮೇಶ ಜಿಗಜಿಣಗಿ ಹೆಸರೇಳದೆ ಕಿಡಿ ಕಾರಿದರು.ನನ್ನ ಹೋರಾಟ ಬಿಜೆಪಿ ವಿರುದ್ಧವಲ್ಲ:
ನಾನು ಬಿಜೆಪಿಯಲ್ಲಿ ಅವಕಾಶ ಕೇಳಿದ್ದ ಸಂದರ್ಭದಲ್ಲಿ ನನಗೆ ನಾಯಕರಿಂದ ಟಿಕೆಟ್ ಕೊಡುವ ಭರವಸೆ ಸಿಕ್ಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಷಡ್ಯಂತ್ರದಿಂದ ನನಗೆ ಟಿಕೆಟ್ ಕೈ ತಪ್ಪಿತು. ನಾನು ಮೋದಿ ಅವರ ಅಭಿಮಾನಿ. ನನ್ನ ಹೋರಾಟ ಬಿಜೆಪಿ ವಿರುದ್ಧ ಅಲ್ಲ, ಅಸಮರ್ಥ ವ್ಯಕ್ತಿಯ ವಿರುದ್ಧ, ಆ ವ್ಯಕ್ತಿಯ ಬದಲಾವಣೆ ಆಗಲೇಬೇಕು ಎಂದು ಪಟ್ಟು ಹಿಡಿದರು.ವಿಜಯಪುರ ಜಿಲ್ಲೆಯ ಅಭಿವೃದ್ಧಿ ಆಗಬೇಕು, ಜಿಲ್ಲೆಯ ಸ್ವಾಭಿಮಾನಕ್ಕಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಜಿಲ್ಲೆಯ ನೀರಾವರಿಗಾಗಿ, ರೈತರಿಗಾಗಿ, ಯುವಜನತೆಗಾಗಿ, ಸಮಗ್ರ ಅಭಿವೃದ್ಧಿಗಾಗಿ ಹೋರಾಟಕ್ಕೆ ಇಳಿದಿದ್ದೇನೆ ಎಂದರು.ಈ ವೇಳೆ ಮುಖಂಡರಾದ ರವಿ ರಾಠೋಡ, ಸುನೀಲ ಪವಾರ, ಅಪ್ಪು ರಾಠೋಡ, ಕಿಷನ್ ಪವಾರ್, ಮೋಹನ ಚವ್ಹಾಣ ಉಪಸ್ಥಿತರಿದ್ದರು.