ಅಡುಗೆಗೂ ಸಿದ್ಧ, ಜನಸೇವೆಗೂ ಬದ್ಧ: ಬಿಜೆಪಿ

| Published : Apr 04 2024, 01:01 AM IST

ಸಾರಾಂಶ

ಕಾಂಗ್ರೆಸ್‌ ಹಿರಿಯ ನಾಯಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿಕೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ನಗರದ ಶ್ರೀ ಜಯದೇವ ವೃತ್ತದಲ್ಲಿ ಅಡುಗೆ ಮಾಡುವ ಮೂಲಕ ಅಡುಗೆಗೂ ಸಿದ್ಧ, ಜನಸೇವೆಗೂ ಬದ್ಧ ಎಂಬ ಘೋಷಣೆಯೊಂದಿಗೆ ವಿನೂತನವಾಗಿ ದಾವಣಗೆರೆಯಲ್ಲಿ ಪ್ರತಿಭಟಿಸಲಾಯಿತು.

- ಶಾಮನೂರು ಹೇಳಿಕೆ ಖಂಡಿಸಿ ಅಡುಗೆ ತಯಾರಿಸಿ ಮಹಿಳಾ ಮೋರ್ಚಾ ಪ್ರತಿಭಟನೆ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ ಕಾಂಗ್ರೆಸ್‌ ಹಿರಿಯ ನಾಯಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿಕೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ನಗರದ ಶ್ರೀ ಜಯದೇವ ವೃತ್ತದಲ್ಲಿ ಅಡುಗೆ ಮಾಡುವ ಮೂಲಕ ಅಡುಗೆಗೂ ಸಿದ್ಧ, ಜನಸೇವೆಗೂ ಬದ್ಧ ಎಂಬ ಘೋಷಣೆಯೊಂದಿಗೆ ವಿನೂತನವಾಗಿ ಪ್ರತಿಭಟಿಸಲಾಯಿತು.

ನಗರದ ಶ್ರೀ ಜಯದೇವ ವೃತ್ತದಲ್ಲಿ ಮೋರ್ಚಾ ಪದಾಧಿಕಾರಿಗಳು, ಮುಖಂಡರು ಸಾರ್ವಜನಿಕ ಸ್ಥಳದಲ್ಲಿ ಉಪ್ಪಿಟ್ಟು, ಚಹಾ ಸಿದ್ಧಪಡಿಸಿ, ಸಾರ್ವಜನಿಕರಿಗೆ ವಿತರಿಸಿದರು. ಆ ಮೂಲಕ ಮಹಿಳೆ ಅಡುಗೆ ಮನೆಗೆ ಮಾತ್ರ ಲಾಯಕ್ಕು ಎಂಬ ಹೇಳಿಕೆ ನೀಡಿರುವ ಕಾಂಗ್ರೆಸ್ಸಿನ ನಾಯಕರು ತಕ್ಷಣವೇ ತಮ್ಮ ಹೇಳಿಕೆ ಹಿಂಪಡೆದು, ಮಹಿಳೆಯರ ಕ್ಷಮೆಯಾಚಿಸಬೇಕೆಂದು ಘೋಷಣೆ ಕೂಗಿದರು.

ಸಂಸದ ಜಿ.ಎಂ.ಸಿದ್ದೇಶ್ವರ ಪುತ್ರಿ ಜಿ.ಎಸ್.ಅಶ್ವಿನಿ ಇದೇ ವೇಳೆ ಮಾತನಾಡಿ, ಹಿರಿಯರಾದ ಕಾಂಗ್ರೆಸ್ಸಿನ ಶಾಮನೂರು ಶಿವಶಂಕರಪ್ಪ ಅವರು ಇಡೀ ಮಹಿಳಾ ಕುಲಕ್ಕೆ ಅವಮಾನಿಸಿದ್ದಾರೆ. ಮಹಿಳೆಯರು ಅಡುಗೆ ಮನೆಗೆ ಲಾಯಕ್ಕು ಎಂಬರ್ಥದ ಮಾತುಗಳನ್ನಾಡಿದ್ದಾರೆ. ಇಂತಹ ಮಾತುಗಳನ್ನು ಶಾಮನೂರು ಅವರ ಸೊಸೆ, ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಸಮರ್ಥಿಸಿಕೊಂಡಿದ್ದು ಗೊಂದಲಮಯವಾಗಿದೆ. ಶಿವಶಂಕರಪ್ಪ ಹೇಳಿಕೆ ಎಲ್ಲ ಮಹಿಳೆಯರಿಗೂ ಅನ್ವಯಿಸುತ್ತದೆ ಎಂಬುದನ್ನು ಮರೆಯಬಾರದು ಎಂದರು.

ಈ ಹಿಂದೆ ಕಾಂಗ್ರೆಸ್ಸಿನವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚಾಯ್ ವಾಲ್ ಎಂಬುದಾಗಿ ಜರಿದಿದ್ದರು. ಅದೇ ಮೋದಿ ಅವರು ಈಗ ವಿಶ್ವ ನಾಯಕರಾಗಿ ಹೊರಹೊಮ್ಮಿದ್ದಾರೆ. ಅದೇ ರೀತಿ ನಮ್ಮ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಸಹ ಜನಪ್ರಿಯ ನಾಯಕಿಯಾಗಿ, ಲೋಕಸಭೆಯಲ್ಲಿ ದಾವಣಗೆರೆ ಕ್ಷೇತ್ರದ ಸಮಸ್ಯೆಗಳಿಗೆ, ಜನರ ಧ್ವನಿಯಾಗಲಿದ್ದಾರೆ ಎಂದ ಅವರು, ಇಂತಹವರಿಗೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಬೇಕು ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಮಾತನಾಡಿ, ದೇಶದ ಒಟ್ಟು ಜನಸಂಖ್ಯೆಯ ಶೇ.50ರಷ್ಟಿರುವ ತಾಯಂದಿರು ಕುಟುಂಬ ನಿಭಾಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಇಂತಹ ಮಾತೃಶಕ್ತಿ ಬಗ್ಗೆ ಕೀಳಾಗಿ ಮಾತನಾಡುವುದು ಎಷ್ಟು ಸರಿ? ರಾಹುಲ್ ಗಾಂಧಿ ಸಹ ಶಕ್ತಿಯನ್ನು ಸೋಲಿಸುತ್ತೇವೆನ್ನುತ್ತಾರೆ. ಕಾಂಗ್ರೆಸ್ಸಿನವರು ಇನ್ನಾದರೂ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಗ್ಯ ಪಿಸಾಳೆ, ಮಾಜಿ ಮೇಯರ್‌ಗಳಾದ ಡಿ.ಎಸ್.ಉಮಾ ಪ್ರಕಾಶ, ಸುಧಾ ಜಯರುದ್ರೇಶ, ಉಪ ಮೇಯರ್ ಯಶೋಧ ಯೋಗೇಶ, ಗೌರಮ್ಮ ಗಿರೀಶ, ರೇಣುಕಾ ಶ್ರೀನಿವಾಸ, ಎಚ್.ಸಿ.ಜಯಮ್ಮ, ರೇಣುಕಾ ಕೃಷ್ಣ, ನೀತು, ದೇವೀರಮ್ಮ, ದಾಕ್ಷಾಯಣಮ್ಮ, ಶಾಂತಾ ದೊರೆ, ರೂಪಾ ಕಾಟೆ, ಜ್ಯೋತಿ ಸಿದ್ದೇಶ, ನಾಗರತ್ನ ಕಾಟೆ, ಪುಷ್ಪಾ ದುರುಗೇಶ, ಗಾಯತ್ರಿಬಾಯಿ ಖಂಡೋಜಿರಾವ್, ಎಸ್‌.ಟಿ.ವೀರೇಶ ಇತರರು ಇದ್ದರು.

- - - ಟಾಪ್‌ ಕೋಟ್‌ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿಕೆ ತಿರುಚಲಾಗಿದೆ, ತಪ್ಪಾಗಿ ಅರ್ಥೈಸಲಾಗಿದೆಯೆಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಸಮರ್ಥಿಸಿಕೊಂಡಿದ್ದಾರೆ. ಹೇಳಿಕೆ ಬಿಜೆಪಿ ತಿರುಚಿದ್ದರೆ ಮಾನನಷ್ಟ ಮೊಕದ್ದಮೆ ದಾಖಲಿಸಲಿ. ನಮ್ಮ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಸಹ ಮಹಿಳೆಯಲ್ಲವೇ? ನಮ್ಮ ಅಭ್ಯರ್ಥಿಗೆ ಜನರ ಸಮಸ್ಯೆಗಳನ್ನು ದೆಹಲಿಗೆ ಮುಟ್ಟಿಸುವ ಸಾಮರ್ಥ್ಯ ಇಲ್ಲವೆಂದುಕೊಂಡಿದ್ದೀರಾ?

- ಎನ್‌.ರಾಜಶೇಖರ ನಾಗಪ್ಪ, ಜಿಲ್ಲಾಧ್ಯಕ್ಷ, ಬಿಜೆಪಿ

- - -

-3ಕೆಡಿವಿಜಿ2, 3:

ದಾವಣಗೆರೆ ಶ್ರೀ ಜಯದೇವ ವೃತ್ತದ ಸಾರ್ವಜನಿಕ ಸ್ಥಳದಲ್ಲಿ ಅಡುಗೆ ಮಾಡಿ, ಕಾಂಗ್ರೆಸ್ ನಾಯಕರ ಹೇಳಿಕೆ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ವಿನೂತನವಾಗಿ ಪ್ರತಿಭಟಿಸಿತು.