ವರದಾ ಬೇಡ್ತಿ ಜೋಡಣೆಗೆ ರಕ್ತ ನೀಡಲೂ ಸಿದ್ಧ: ಮಲ್ಲಿಕಾರ್ಜುನ ಬಳ್ಳಾರಿ

| Published : Jul 22 2025, 01:16 AM IST

ವರದಾ ಬೇಡ್ತಿ ಜೋಡಣೆಗೆ ರಕ್ತ ನೀಡಲೂ ಸಿದ್ಧ: ಮಲ್ಲಿಕಾರ್ಜುನ ಬಳ್ಳಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಸಮುದ್ರ ಸೇರುವ ನೀರನ್ನು ರೈತರ ಜಮೀನಿಗೆ ಕೊಡುವ ವರದಾ- ಬೇಡ್ತಿ ಜೋಡಣೆ ವಿಳಂಬ ಸರ್ಕಾರದ ನಿರ್ಲಕ್ಷ್ಯ ಧೋರಣೆಯ ನೀತಿಯಾಗಿದೆ.

ಹಾನಗಲ್ಲ: ರಕ್ತದಾನ ಮಾಡಿ ಕೇಳುತ್ತಿದ್ದೇವೆ, ವರದಾ ಬೇಡ್ತಿ ನದಿ ಜೋಡಣೆ ಕಾಮಗಾರಿ ಶೀಘ್ರ ಅನುಷ್ಠಾನವಾಗಲಿ, ರಕ್ತ ಹರಿಸಿಯಾದರೂ ಅದನ್ನು ಪಡೆಯಲು ನಾವು ಸಿದ್ಧ. ರೈತರ ಹಿತ ಕಾಪಾಡದ ಸರ್ಕಾರಗಳು ನಮಗೆ ಬೇಕಾಗಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಕೆ ನೀಡಿದರು.ಸೋಮವಾರ ಇಲ್ಲಿನ ವಿರಕ್ತಮಠದ ಸದಾಶಿವ ಮಂಗಲ ಭವನದಲ್ಲಿ ಆಯೋಜಿಸಿದ್ದ ನರಗುಂದ ಬಂಡಾಯದ ರೈತ ಹುತಾತ್ಮ ದಿನಾಚರಣೆಯ 45ನೇ ವರ್ಷದ ಹಾವೇರಿ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡಿ, ಸಮುದ್ರ ಸೇರುವ ನೀರನ್ನು ರೈತರ ಜಮೀನಿಗೆ ಕೊಡುವ ವರದಾ- ಬೇಡ್ತಿ ಜೋಡಣೆ ವಿಳಂಬ ಸರ್ಕಾರದ ನಿರ್ಲಕ್ಷ್ಯ ಧೋರಣೆಯ ನೀತಿಯಾಗಿದೆ. ಜನಪ್ರತಿನಿಧಿಗಳೇ ಉತ್ತರ ಕರ್ನಾಟಕದ ಅತ್ಯಂತ ಮಹಾತ್ವಾಕಾಕ್ಷಿ ನೀರಾವರಿ ಯೋಜನೆಯ ಸಾಫಲ್ಯಕ್ಕೆ ಕಂಕಣಬದ್ಧರಾಗಿ. ಎಲ್ಲದಕ್ಕೂ ಹೋರಾಟವನ್ನೇ ಬಯಸುವುದು ಬೇಡ ಎಂದರು.

ರೈತರ ಹಿತಕ್ಕಾಗಿ ಸರ್ಕಾರವಿರಲಿ. ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ರೈತ ಆತ್ಮಹತ್ಯೆಗಳಾಗುತ್ತಿವೆ. ಬೆಳೆವಿಮೆ ಅರ್ಧ ವರ್ಷ ವಿಳಂಬವಾಗಿದೆ. ಡಿಸಿಸಿ ಸೇರಿದಂತೆ ಬ್ಯಾಂಕುಗಳಲ್ಲಿ ಸಾಲ ಸಿಗುತ್ತಿಲ್ಲ. ಕಿರುಕುಳ ಹೆಚ್ಚಾಗಿದೆ. ರೈತರ ಧಾನ್ಯ ಸಂಗ್ರಹಕ್ಕೆ ಗೋದಾಮುಗಳಿಲ್ಲ. ಅತಿವೃಷ್ಟಿಗೆ ಪರಿಹಾರವಿಲ್ಲ. ಯೂರಿಯಾ ಪೂರೈಸಲು ಸರ್ಕಾರದಿಂದ ಆಗುತ್ತಿಲ್ಲ. ಸರ್ಕಾರಿಂದ ರೈತರಿಗೆ ಏನೂ ಸೌಲಭ್ಯಗಳು ಸಕಾಲಿಕವಾಗಿ ಸಿಗುತ್ತಿಲ್ಲ. ಅಧಿಕಾರಿಗಳ ದಿವ್ಯ ಮೌನದ ಹಿಂದೆ ಸರ್ಕಾರದ ವೈಫಲ್ಯವಿದೆ. ಇದೆಲ್ಲ ಸರಿಯಾಗದಿದ್ದರೆ ಹೋರಾಟವೇ ಅನಿವಾರ್ಯ. ನಮಗೆ ಗೊತ್ತಿದೆ, ಹೋರಾಟದಿಂದ ಪಡೆಯುವುದು ಹೇಗೆ ಎಂದು ಸರ್ಕಾರವನ್ನು ಎಚ್ಚರಿಸಿದರು.ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ನರಗುಂದ ಬಂಡಾಯಕ್ಕೆ 3 ರೈತರು ಬಲಿಯಾಗಿ ಇಡೀ ರಾಜ್ಯದಲ್ಲಿ ರೈತ ಸಂಘ ಉದಯವಾಗಿದೆ. ಅಧಿಕಾರಿಗಳ ದೌರ್ಜನ್ಯಕ್ಕೆ ರೈತರು ಕೊಲೆಯಾದರು. ಕೊಲೆಗಡುಕ ಸರ್ಕಾರಗಳು ನಮಗೆ ಬೇಕಾಗಿಲ್ಲ. ಕೃಷಿಕರನ್ನು ಕಾಪಾಡುವ ಸರ್ಕಾರ ಬೇಕು. ಚುನಾವಣೆಗಳಲ್ಲಿ ರೈತರನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದು ರೈತರನ್ನೇ ಮರೆಯುವ ಈ ಸರ್ಕಾರದ ಧೋರಣೆಗಳು ಅಸಹಿಷ್ಣು ಆಗಿವೆ.

ರೈತರನ್ನು ದಿವಾಳಿ ಮಾಡುವ ಸರ್ಕಾರದ ಕಾನೂನುಗಳು ಒಳ್ಳೆಯ ಬೆಳವಣಿಗೆ ಅಲ್ಲ. ರೈತರೇ ಒಟ್ಟಾಗಿರಿ. ರೈತರು ಇನ್ನೂ ಸಂಕಷ್ಟಗಳನ್ನೇ ಎದುರಿಸಬೇಕಾಗುತ್ತದೆ. ಸರ್ಕಾರಕ್ಕೆ ತಕ್ಕ ಉತ್ತರ ಕೊಡಲು, ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಒಟ್ಟಾಗಿ ಬನ್ನಿ ಎಂದರು.ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ ಮಾತನಾಡಿ, ರೈತರನ್ನು ಕೆರಳಿಸಿದರೆ ಪರಿಣಾಮ ಒಳ್ಳೆಯದಿರುವುದಿಲ್ಲ. ರೈತರ ಹಿತ ಕಡೆಗಣಿಸಿದ ಸರ್ಕಾರ ಆಡಳಿತದಲ್ಲಿರಲು ಬಿಡಲ್ಲ. ನರಗುಂದ ಬಂಡಾಯದ ಕಿಚ್ಚು ರೈತರ ಆತಂಕಗಳ ಮೊತ್ತ. ಈಗಲಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚರಗೊಳ್ಳಿ ಎಂದರು.ನಿವೃತ್ತ ಉಪನ್ಯಾಸಕ ರೈತ ಸಂಘದ ಮುಖಂಡ ಎಚ್.ಎಚ್. ಮುಲ್ಲಾ ನರಗುಂದ ರೈತ ಬಂಡಾಯದ ಇತಿಹಾಸ ತಿಳಿಸಿದರು. ತಾಲೂಕು ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ, ಮಲ್ಲೇಶಪ್ಪ ಪರಪ್ಪನವರ, ಮಾಲತೇಶ ಪೂಜಾರ, ಸುರೇಶಗೌಡ ಪಾಟೀಲ, ಪ್ರೇಮಾ ಪೂಜಾರ, ಮಹೇಶ ವಿರುಪಣ್ಣನವರ, ಜಯಣ್ಣ ವಾಸನ, ರುದ್ರಗೌಡ ಕಾಡನಗೌಡ್ರ, ಸುರೇಶ ಹೊನ್ನಪ್ಪನವರ, ದಿಳ್ಳೆಪ್ಪ ಮಣ್ಣೂರ, ಪರಸಪ್ಪ ಮಡಿವಾಳರ, ರಾಜು ತರ್ಲಘಟ್ಟ, ಚನ್ನಪ್ಪ ಮರಡೂರ, ಶಂಕ್ರಣ್ಣ ಶಿರಗಂಬಿ, ಪ್ರಭಣ್ಣ ಪ್ಯಾಟಿ, ರುದ್ರಪ್ಪ ಹಣ್ಣಿ, ಮಹಮ್ಮದ್‌ಗೌಸ ಪಾಟೀಲ, ಶಿವಬಸಪ್ಪ ಗೋವಿ, ಶಂಕರಗೌಡ ಶಿರಗಂಬಿ, ಮುತ್ತಣ್ಣ ಗುಡಗೇರಿ ಸೇರಿದಂತೆ ರೈತ ಮುಖಂಡರು, ಜಿಲ್ಲೆಯ ವಿವಿಧ ತಾಲೂಕು ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.