ಯಶಸ್ವಿ ಕೃಷಿ ಮೇಳ ಆಯೋಜಿಸಲು ಸಿದ್ಧ

| Published : Aug 21 2024, 12:33 AM IST

ಸಾರಾಂಶ

ಉದ್ಘಾಟನಾ ದಿನ ಹೊರತುಪಡಿಸಿ, ಪ್ರತಿ ದಿನ ಎರಡು ಕಾರ್ಯಕ್ರಮಗಳಂತೆ ಆರು ಕಾರ್ಯಕ್ರಮ ಆಯೋಜಿಸಲಾಗಿದೆ.

ಧಾರವಾಡ:

ಸೆ. 21ರಿಂದ 24ರ ವರೆಗೆ ಕೃಷಿ ವಿವಿ ಆವರಣದಲ್ಲಿ ಹವಾಮಾನ ವೈಪರೀತ್ಯ ನಿರ್ವಹಣೆಗೆ ಕೃಷಿ ತಾಂತ್ರಿಕತೆಗಳು ಹೆಸರಿನಲ್ಲಿ ಕೃಷಿ ಮೇಳ ಆಯೋಜಿಸುತ್ತಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ.

ಈ ಬಾರಿ ಮಳಿಗೆಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಸಾಕಷ್ಟು ಮಳಿಗೆಗಳನ್ನು ವಿವಿಧ ಸಂಸ್ಥೆಯವರು ಕಾಯ್ದಿರಿಸಿದ್ದಾರೆ. ಅನೇಕ ಮಳಿಗೆಗಳು ಇನ್ನೂ ಲಭ್ಯವಿವೆ. ಕೃಷಿ ಮೇಳದ ವ್ಯಾಪಕ ಪ್ರಚಾರಕ್ಕಾಗಿ ಬಹು ಬಣ್ಣದ ಭಿತ್ತಿಪತ್ರವನ್ನು ಮಂಗಳವಾರ ಕುಲಪತಿ ಡಾ. ಪಿ.ಎಲ್. ಪಾಟೀಲ ವಿವಿಧ ಅಧಿಕಾರಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.

ಉದ್ಘಾಟನಾ ದಿನ ಹೊರತುಪಡಿಸಿ, ಪ್ರತಿ ದಿನ ಎರಡು ಕಾರ್ಯಕ್ರಮಗಳಂತೆ, ಆಧುನಿಕ ಕೃಷಿ ತಾಂತ್ರಿಕತೆ ಅಳವಡಿಕೆಯಲ್ಲಿ ಯುವಪೀಳಿಗೆ ಮತ್ತು ನವೋದ್ಯಮಿಗಳ ಪಾತ್ರ, ಹವಾಮಾನ ವೈಪರೀತ್ಯ ನಿರ್ವಹಣೆಯಲ್ಲಿ ಸಾವಯವ ಹಾಗೂ ನೈಸರ್ಗಿಕ ಕೃಷಿಯ ಪಾತ್ರ, ಪರಿಕರಗಳ ಸಾಮರ್ಥ್ಯ ಹೆಚ್ಚಿಸಲು ಮತ್ತು ಉತ್ಪನ್ನಗಳ ಮೌಲ್ಯವರ್ಧನೆ ವೃದ್ಧಿಸಲು ದ್ವಿತೀಯ ಕೃಷಿ, ಬರ ನಿರ್ವಹಣೆಯಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣಾ ಕ್ರಮ, ಹವಾಮಾನ ವೈಪರೀತ್ಯ ನಿರ್ವಹಣೆಯಲ್ಲಿ ಕೈಗೊಳ್ಳಬೇಕಾದ ಬೆಳೆ ಪದ್ಧತಿ ಹಾಗೂ ಕೃಷಿ ತಾಂತ್ರಿಕತೆ, ಎಣ್ಣೆ ಕಾಳು ಹಾಗೂ ದ್ವಿದಳ ಧಾನ್ಯ ಉತ್ಪಾದನೆ ಹೆಚ್ಚಿಸಲು ಅಗತ್ಯ ಕೃಷಿ ತಾಂತ್ರಿಕತೆಗಳು ಎಂಬ ಒಟ್ಟು ಆರು ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತೀರ್ಮಾನಿಸಲಾಗಿದೆ.

ಕೃಷಿ ವಸ್ತು ಪ್ರದರ್ಶನದಲ್ಲಿ, ಹೈಟೆಕ್, ಸಾಮಾನ್ಯ, ಯಂತ್ರೋಪಕರಣ, ಆಹಾರ, ಜಾನುವಾರು ಪ್ರದರ್ಶನ ಹಾಗೂ ಕ್ಷೇತ್ರ ಮಳಿಗೆಗಳ ವ್ಯವಸ್ಥೆ ಮಾಡಲಾಗುವುದು. ಕೃಷಿಕರು, ಕೃಷಿ ಮಹಿಳೆಯರು, ಗ್ರಾಮೀಣ ಯುವಕರು ಹಾಗೂ ಎಲ್ಲ ಕೃಷಿ ಆಸಕ್ತರು ಈ ಕೃಷಿ ಮೇಳದ ಲಾಭ ಪಡೆದುಕೊಳ್ಳಲು ವಿಸ್ತರಣಾ ನಿರ್ದೇಶಕರು ತಿಳಿಸಿದ್ದಾರೆ.