ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಸರ್ಕಾರಿ ಶಾಲೆಗಳಿಗೆ ಅವಶ್ಯ ಮೂಲಸೌಲಭ್ಯಗಳ ಕಲಿಸ್ಪಲು ನಾನು ಬದ್ಧನಾಗಿದ್ದೇನೆ. ಆದರೆ, ಅದಕ್ಕೆ ಪೂರಕವಾಗಿ ಶಿಕ್ಷಣದ ಗುಣಮಟ್ಟ ಸುಧಾರಿಸಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮವಾಗಿ ಬರಬೇಕು ಎಂದು ಶಾಸಕ ಶರಣಗೌಡ ಕಂದಕೂರ ಅವರು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿ ಮತ್ತು ಶಿಕ್ಷಕರಿಗೆ ಹೇಳಿದರು.ಮಂಗಳವಾರ, ಗುರುಮಠಕಲ್ ಮತಕ್ಷೇತ್ರದ ಲಿಂಗೇರಿ ಸ್ಟೇಷನ್, ಬಳಿಚಕ್ರ, ಮಾಧ್ವಾರ, ಕೊಂಕಲ್, ಪುಟ್ಪಾಕ್ ಪ್ರೌಢಶಾಲೆಗಳಿಗೆ ಭೇಟಿ ನೀಡಿದ ಅವರು, ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಿಕ್ಷಕರು ಮಕ್ಕಳಿಗೆ ಮಾತ್ರವಲ್ಲದೆ, ನಮ್ಮಂತವರಿಗೂ ಮಾದರಿಯಾಗಿಬೇಕು. ನಾವೆಲ್ಲ ಬಡತನ ಹಿನ್ನಲೆಯಿಂದ ಬಂದವರು, ನಮ್ಮಲ್ಲಿ ಬಹುತೇಕ ಪಾಲಕರು ಅನಕ್ಷರಸ್ಥರಾಗಿದ್ದಾರೆ ಅವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಸೂಚಿಸಿದರು.
ಶಿಕ್ಷಣದ ಬುನಾದಿ ಪ್ರಾಥಮಿಕ ಶಿಕ್ಷಣವಾಗಿದ್ದು, ಇದನ್ನು ಸುಧಾರಣೆ ಮಾಡಬೇಕಾದ ಮಹತ್ತರ ಜವಾಬ್ದಾರಿ ಪ್ರಾಥಮಿಕ ಶಿಕ್ಷಕರ ಮೇಲಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿಯುವಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣದ ವೈಫಲ್ಯ ಪ್ರಮುಖ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗೆ ಒಬ್ಬರ ಮೇಲೊಬ್ಬರು ಆರೋಪ ಮಾಡುವುದು ಬಿಟ್ಟು ಒಗ್ಗಟ್ಟಾಗಿ ಸುಧಾರಣೆ ಮಾಡುವ ಅಗತ್ಯವಿದೆ. ನಮ್ಮ ಭಾಗದಲ್ಲಿ ಶಿಸ್ತು, ಶಿಕ್ಷಣ ಮತ್ತು ಆರೋಗ್ಯ ಸುಧಾರಣೆ ಆಗಬೇಕು ಎಂದು ತಿಳಿಸಿದರು. ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ಮಾಡಿಕೊಳ್ಳಬಾರದು. ಒಂದು ವೇಳೆ ಯಾರಾದರೂ ಒತ್ತಾಯ ಮಾಡಿದರೆ ಟಾಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ನೀಡುವಂತೆ ಸೂಚಿಸಿದರು.ಮಂಗಳವಾರ, ಬೆಳಿಗ್ಗೆ ಲಿಂಗೇರಿ ಸ್ಟೇಷನ್ ಪ್ರೌಢಶಾಲೆಗೆ ಭೇಟಿ ನೀಡಿದ ಶಾಸಕರು ಅಲ್ಲಿ ಮಕ್ಕಳೊಂದಿಗೆ ಬೆಳಗಿನ ಪ್ರಾರ್ಥನೆಯಲ್ಲಿ ಭಾಗವಹಿಸಿ, ಅಲ್ಲಿ ನೀಡಲಾಗುತ್ತಿದ್ದ ರಾಗಿ ಮಾಲ್ಟ್ ಮತ್ತು ಹಾಲು ಮಕ್ಕಳೊಂದಿಗೆ ಸವಿದು, ಗುಣಮಟ್ಟ ಪರೀಕ್ಷಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶುದ್ಧ ಕುಡಿಯುವ ನೀರು, ಸಾರಿಗೆ ಬಸ್, ಆಟದ ಮೈದಾನ, ಶೌಚಾಲಯ, ದೈಹಿಕ ಶಿಕ್ಷಕರ ನಿಯೋಜನೆ ಇತ್ಯಾದಿ ಸಮಸ್ಯೆಗಳನ್ನು ಹೇಳಿಕೊಂಡರು. ಶಿಕ್ಷಕರಿಗೆ ಭೋಧನೆಯೇತರ ಕೆಲಸಗಳ ಹೊರೆ ಹೆಚ್ಚಾಗುತ್ತಿದೆ ಇದಕ್ಕಾಗಿ ಮಕ್ಕಳಿಗೆ ಬೋಧನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಿಆರ್‌ಪಿ ಜಯಪಾಲರೆಡ್ಡಿ ತಿಳಿಸಿದರು.
ಗುರುಮಠಕಲ್ ಮತಕ್ಷೇತ್ರದ ವಿವಿಧ ಶಾಲೆಗಳಿಗೆ ಭೇಟಿ ನೀಡಿದ ಶಾಸಕ ಶರಣಗೌಡ ಕಂದಕೂರ ಅವರು ಮಾಧ್ವಾರ ಗ್ರಾಮದ ಸರಕಾರಿ ಕುವೆಂಪು ಮಾದರಿ ಶಾಲಾ ಮಕ್ಕಳೊಂದಿಗೆ ಮದ್ಯಾಹ್ನದ ಬಿಸಿಯೂಟ ಸವಿದರು. ಪ್ರತಿನಿತ್ಯ ಊಟದ ಜತೆಗೆ ಮೊಟ್ಟೆ, ಬಾಳೆಹಣ್ಣು ಸರಿಯಾಗಿ ಕೊಡುತ್ತಿರುವ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಈ ಮಧ್ಯೆ ವಿದ್ಯಾರ್ಥಿಗಳು ಎದ್ದು ನಿಂತು ನೀವು ಕೊಟ್ಟ ತಟ್ಟೆಯಲ್ಲಿ ಊಟ ಮಾಡುತ್ತಿದ್ದೇವೆ ಸರ್ ಎಂದು ಸ್ಮರಿಸಿದರು. ಶಾಸಕರು ತಮ್ಮ ತಂದೆ ಮಾಜಿ ಶಾಸಕ ದಿ.ನಾಗನಗೌಡ ಕಂದಕೂರ ಅವರ ಪ್ರಥಮ ಪುಣ್ಯ ಸ್ಮರಣೆ ನಿಮಿತ್ತ ಮತಕ್ಷೇತ್ರದ ಎಲ್ಲಾ ಸರಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬಿಸಿಯೂಟದ ತಟ್ಟೆ ಮತ್ತು ಲೋಟ ವಿತರಣೆ ಮಾಡಿದ್ದರು.ಈ ವೇಳೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸಿ.ಎಸ್ ಮುಧೋಳ, ಬಿಇಓ ಹವಳಪ್ಪ ಜಾನೆ, ಬಿಆರ್‌ಸಿ ಮಲ್ಲಿಕಾರ್ಜುನ ಪೂಜಾರಿ, ಶಿಕ್ಷಣ ಸಂಯೋಜಕ ಕಿಶನ್ ಪವಾರ್, ಗುರುಮಠಕಲ್ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ, ಶಿಕ್ಷಣ ಇಲಾಖೆ ಜಿಲ್ಲಾ ತಾಂತ್ರಿಕ ಸಹಾಯಕರಾದ ಶರಣಗೌಡ ಆಶನಾಳ ಸೇರಿದಂತೆ ಆಯಾ ಶಾಲಾ ಮುಖ್ಯಸ್ಥರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
----------ಸರ್ಕಾರದಿಂದ ಕೋಟ್ಯಾಂತರ ರುಪಾಯಿಗಳ ಖರ್ಚು ಮಾಡಿ ಶಾಲಾ ಕೊಠಡಿ, ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ, ಮೊಟ್ಟೆ, ಬಾಳೆಹಣ್ಣು, ಶುದ್ಧ ಕುಡಿಯುವ ನೀರು ಎಲ್ಲವನ್ನೂ ಕೊಡುತ್ತಿದ್ದೇವೆ. ಆದರೆ, ಫಲಿತಾಂಶ ಮಾತ್ರ ತೀರಾ ಕಳಪೆ ಮಟ್ಟದ್ದಾಗಿದ್ದು ಅದಕ್ಕೆ ಕಾರಣ ತಿಳಿದು ಸುಧಾರಣೆ ತರುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಶಾಲೆಗಳಿಗೆ ಭೇಟಿ ನೀಡುತ್ತಿದ್ದೇನೆ. : ಶರಣಗೌಡ ಕಂದಕೂರ, ಶಾಸಕರು, ಗುರುಮಠಕಲ್.