ಸಾರಾಂಶ
ನಾನು ಎಕೆಬಿಎಂಎಸ್ ಅಧ್ಯಕ್ಷನಾಗಿ ಆಯ್ಕೆಯಾಗುತ್ತಿದ್ದಂತೆ ಜಾತಿಗಣತಿ ವಿವಾದ, ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿದ ವಿವಾದ ಸೇರಿದಂತೆ ಸಾಕಷ್ಟು ಸವಾಲುಗಳನ್ನು ದಿಟ್ಟವಾಗಿ ಎದುರಿಸಿದ್ದೇವೆ.
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಪ್ರಸ್ತುತ ದಿನಗಳಲ್ಲಿ ಬ್ರಾಹ್ಮಣ ಸಮಾಜ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಸಂಕಷ್ಟ ಮತ್ತು ಸವಾಲುಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಮ್ಮ ಮಹಾಸಭಾ ಸದಾಕಾಲ ಬ್ರಾಹ್ಮಣ ಸಮುದಾಯದ ಜೊತೆಗೆ ನಿಲ್ಲಲಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್ ತಿಳಿಸಿದರು.ನಗರದ ಕೋಟೆ ಶ್ರೀರಾಘವೇಂದ್ರ ಮಠದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾ ಆಯೋಜಿಸಿದ್ದ ನೂತನ ಎಕೆಬಿಎಂಎಸ್ ಅಧ್ಯಕ್ಷರಿಗೆ ಅಭಿನಂದನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಬ್ರಾಹ್ಮಣರಿಗೆ ಸರ್ಕಾರದಿಂದ ಆಗಬೇಕಿರುವ ಕೆಲಸಗಳನ್ನು ಮಾಡಿಸಿಕೊಡುವ ಜೊತೆಗೆ, ಮಹಾಸಭಾದಿಂದಲೂ ನಮ್ಮ ಸಮಾಜದ ಪ್ರಗತಿಗೆ ನೆರವು ನೀಡಲಾಗುವುದು ಎಂದು ತಿಳಿಸಿದರು.
ಸಮುದಾಯದ ಪರ ದನಿ: ನಾನು ಎಕೆಬಿಎಂಎಸ್ ಅಧ್ಯಕ್ಷನಾಗಿ ಆಯ್ಕೆಯಾಗುತ್ತಿದ್ದಂತೆ ಜಾತಿಗಣತಿ ವಿವಾದ, ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿದ ವಿವಾದ ಸೇರಿದಂತೆ ಸಾಕಷ್ಟು ಸವಾಲುಗಳನ್ನು ದಿಟ್ಟವಾಗಿ ಎದುರಿಸಿದ್ದೇವೆ. ಮಹಾಸಭಾ ನಡೆಸಿದ ಸಂಘಟಿತ ಹೋರಾಟದ ಫಲವಾಗಿ ಇಂದು ನಮಗೆ ಯಶಸ್ಸು ಸಿಕ್ಕಿದೆ. ಇದೇ ರೀತಿ ಸಮುದಾಯಕ್ಕೆ ಸದಾಕಾಲ ದನಿಯಾಗಿ ನಿಲ್ಲುವ ಕೆಲಸವನ್ನು ಮಾಡುತ್ತೇವೆ ಎಂದರು.ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ರಾಘವೇಂದ್ರ ಮಯ್ಯ, ಪತ್ರಕರ್ತ ಅನಿಲ್‌ಕುಮಾರ್, ಎಕೆಬಿಎಂಎಸ್ ಉಪಾಧ್ಯಕ್ಷ ಚಂದ್ರಶೇಖರ್, ಜಂಟಿ ಕಾರ್ಯದರ್ಶಿಗಳಾದ ಕನಕಪುರ ಶಿವಕುಮಾರ್, ಶೇಷಾದ್ರಿ ಐಯ್ಯರ್, ಉದಯಶಂಕರ್, ಗುರು ರಾಘವೇಂದ್ರ ಬೃಂದಾವನ ಸಮಿತಿಯ ಡಿ.ವೆಂಕಟೇಶಮೂರ್ತಿ, ಪದಾಧಿಕಾರಿಗಳಾದ ಹೊಯ್ಸಳ, ಎಚ್.ಎನ್.ರಾಘವೇಂದ್ರ, ಬಾಲಾಜಿ, ಪೊಲೀಸ್ ವಿಜಯ್ ಕುಮಾರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು.