ಸಾರಾಂಶ
ಬಿ.ಎಚ್.ಎಂ.ಅಮರನಾಥ ಶಾಸ್ತ್ರಿ
ಕಂಪ್ಲಿ: ತಾಲೂಕಿನಲ್ಲಿ ಹಾದು ಹೋದ ರಾಜ್ಯ ಹೆದ್ದಾರಿ- 49ರ ರಸ್ತೆ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನ ಬಳಕೆ ಕುರಿತಂತೆ ಶಂಕೆಯ ಮಾತುಗಳು ಕೇಳಿ ಬರುತ್ತಿದ್ದು, ರಿಯಲ್ ಎಸ್ಟೇಟ್ ಮಾಫಿಯಾದ ಕೈ ಮೇಲಾದಂತೆ ಕಾಣಿಸುತ್ತಿದೆ.ತಾಲೂಕು ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿ ರಸ್ತೆಯು ರಾಮಸಾಗರ, ನಂ.10 ಮುದ್ದಾಪುರ, ಕಂಪ್ಲಿ, ಅರಳಿಹಳ್ಳಿ ತಾಂಡ, ಸಣಾಪುರ, ಇಟಗಿ ಮೂಲಕ ಹಾದು ಹೋಗುತ್ತದೆ. 2016ರಲ್ಲಿ ಟಿ.ಎಚ್.ಸುರೇಶ್ ಬಾಬು ಶಾಸಕರಿದ್ದ ವೇಳೆ ರಸ್ತೆ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಇದೀಗ ಅದೇ ರಸ್ತೆಯ ಅಭಿವೃದ್ಧಿಗೆ ಬಿಡುಗಡೆಯಾದ ₹20 ಕೋಟಿ ಅನುದಾನವನ್ನು ಹಾಲಿ ಶಾಸಕ ಗಣೇಶ್ ತಮ್ಮ ನಿವಾಸದ ಎದುರು ಅಂದರೆ ಹೊಸಪೇಟೆ ಬೈ ಪಾಸ್ ಮಾರ್ಗದ ರಸ್ತೆ ಅಭಿವೃದ್ಧಿಗೆ ಬಳಸಲು ಮುಂದಾಗಿದ್ದು, ಭೂಮಿ ಪೂಜೆಯನ್ನು ಸಹ ನೆರವೇರಿಸಿದ್ದಾರೆ.
ಈ ರಸ್ತೆಯಲ್ಲಿನ ತಮ್ಮ ಜಮೀನುಗಳಿಗೆ ಬೇಡಿಕೆ ಹೆಚ್ಚಾಗಲಿ, ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಅನುಕೂಲವಾಗಲೆಂಬ ಸ್ವಾರ್ಥದಿಂದ ಶಾಸಕರು ಈ ಕಾರ್ಯ ಕೈಗೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಪಟ್ಟಣದ ಹೊಸ ಬಸ್ ನಿಲ್ದಾಣದಿಂದ ಹಿಡಿದು ಮಾರುತಿನಗರ ಹಾಗೂ ನಂ.10 ಮುದ್ದಾಪುರ ಮಾರ್ಗ ದುರಸ್ತಿ ಭಾಗ್ಯ ಕಾಣದೇ ವಾಹನ ಸವಾರರಿಗೆ ಭಾರಿ ತಲೆನೋವಾಗಿ ಪರಿಣಮಿಸಿದೆ. ಇಲ್ಲಿ ಅನೇಕ ರಸ್ತೆ ಅಪಘಾತಗಳೂ ಸಂಭವಿಸಿವೆ. ಈ ಕುರಿತು ಅನೇಕ ಬಾರಿ ಗ್ರಾಮಸ್ಥರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಶಾಸಕ ಗಣೇಶ್ ತಮ್ಮ ನಿವಾಸದ ಬಳಿ ಆಸ್ತಿ, ಅದೇ ರಸ್ತೆ ಮಾರ್ಗದ ನಿವೇಶನಗಳಿಗೆ ಬೇಡಿಕೆ ಬಂದು ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಹೆದ್ದಾರಿಯ ಪಥವನ್ನೇ ಬದಲಿಸಿದ್ದಾರೆ. ಅನುದಾನ ದುರ್ಬಳಕೆ ಖಂಡನೀಯ. ಹೆದ್ದಾರಿಯ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನ ಅದೇ ರಸ್ತೆಯ ಅಭಿವೃದ್ಧಿಗೆ ಬಳಕೆಯಾಗಬೇಕು ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಶಬ್ಬೀರ್ ಎಚ್.ರಾಜ್ಯ ಹೆದ್ದಾರಿಯ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನವನ್ನು ಪ್ರಾಧಿಕಾರದ ಅನುಮೋದನೆಯಂತೆ ಅದೇ ರಸ್ತೆಯ ಅಭಿವೃದ್ಧಿಗೆ ಬಳಕೆ ಮಾಡಲಾಗುವುದು ಎನ್ನುತ್ತಾರೆ ಎಇ ಲೋಕೋಪಯೋಗಿ ಇಲಾಖೆ ಹೇಮರಾಜ್.