ಸಾರಾಂಶ
ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಅಭಿವೃದ್ಧಿ ಕಾರ್ಯಕ್ಕೆ ತಡೆಯೊಡ್ಡುತ್ತಿರುವ ಹಾಗೂ ಶಾಸಕ ಅಶೋಕ್ ಕಮಾರ್ ರೈ ಅವರ ಬಗ್ಗೆ ಕೆಟ್ಟ ಪದಗಳಿಂದ ನಿಂದಿಸಿರುವ ಬಿಜೆಪಿಗರ ಕ್ರಮವನ್ನು ವಿರೋಧಿಸಿ ಶುಕ್ರವಾರ ನಗರದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪುತ್ತೂರು ಮತ್ತು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಪುತ್ತೂರು
ಬಿಜೆಪಿಗರು ರಾಜಕಾರಣಕ್ಕಾಗಿ ನವ ಹಿಂದುತ್ವವನ್ನು ಬಳಕೆ ಮಾಡಿಕೊಂಡು ಕಾಂಗ್ರಸಿಗರನ್ನು ಹಿಂದೂ ವಿರೋಧಿಗಳೆಂದು ಬಿಂಬಿಸುತ್ತಿದ್ದು, ಬಿಜೆಪಿಗರ ನವ ಹಿಂದುತ್ವದ ಕಾರಣದಿಂದಾಗಿ ನೈಜ ಹಿಂದೂಗಳು ಗೊಂದಲದಲ್ಲಿದ್ದಾರೆ. ಇದನ್ನು ಹೀಗೆಯೇ ಮುಂದುವರಿಯಲು ಬಿಟ್ಟರೆ ವೇದಾಂತ, ಉಪನಿಷತ್ತುಗಳು ಸೇರಿದಂತೆ ಎಲ್ಲವನ್ನೂ ಅವರು ನಾಶ ಮಾಡುತ್ತಾರೆ. ಬಿಜೆಪಿಯ ಹಿಂದುತ್ವ ದ್ವೇಷ ಸಾಧನೆಯದ್ದಾಗಿದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಜಿ.ಹೆಗಡೆ ಹೇಳಿದರು.ಅವರು ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಅಭಿವೃದ್ಧಿ ಕಾರ್ಯಕ್ಕೆ ತಡೆಯೊಡ್ಡುತ್ತಿರುವ ಹಾಗೂ ಶಾಸಕ ಅಶೋಕ್ ಕಮಾರ್ ರೈ ಅವರ ಬಗ್ಗೆ ಕೆಟ್ಟ ಪದಗಳಿಂದ ನಿಂದಿಸಿರುವ ಬಿಜೆಪಿಗರ ಕ್ರಮವನ್ನು ವಿರೋಧಿಸಿ ಶುಕ್ರವಾರ ನಗರದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪುತ್ತೂರು ಮತ್ತು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ಹಿಂದುತ್ವದ ಬಗ್ಗೆ ಮಾತನಾಡುತ್ತಿರುವವರು, ಹಿಂದುತ್ವದ ಹೆಸರಿನಲ್ಲಿ ಅಧಿಕಾರ ಪಡೆದುಕೊಂಡವರು ದೇವಳದ ಅಭಿವೃದ್ಧಿಗಾಗಿ ದೇವಳದ ಜಾಗವನ್ನು ಬಿಟ್ಟು ಕೊಡಬೇಕಾಗಿತ್ತು. ದುಡ್ಡು, ಸೈಟು ಕೊಡುತ್ತೇವೆ ಎಂದು ಹೇಳಿದ್ದರೂ ದೇವಳಕ್ಕೆ ಜಾಗ ಬಿಟ್ಟುಕೊಟ್ಟಿಲ್ಲ. ಅಲ್ಲದೆ ಶ್ರೀಮಹಾಲಿಂಗೇಶ್ವರ ದೇವರ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಹಿಂದುತ್ವ ಎಂದು ಹೇಳಿಕೊಂಡು ದೇವಾಸ್ಥಾನದ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದರು.ಕಾಂಗ್ರೆಸ್ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ಅಭಿವೃದ್ಧಿ ಪರ್ವ ಆಗುತ್ತಿದೆ. ದೇವಾಲಯದ ಅಭಿವೃದ್ಧಿಯನ್ನು ವಿರೋಧಿಸುವ ಮೂಲಕ ಬಿಜೆಪಿಯವರು ದೇವರಿಗೆ ಮೋಸ ಮಾಡುತ್ತಿದ್ದಾರೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪಕ್ಷದ ಮುಖಂಡರಾದ ರವೀಂದ್ರ ರೈ ನೆಕ್ಕಿಲು, ಅನಿತಾ ಹೇಮನಾಥ ಶೆಟ್ಟಿ, ಉಲ್ಲಾಸ್ ಕೋಟ್ಯಾನ್, ಬೂಡಿಯಾರ್ ಪುರುಷೋತ್ತಮ ರೈ, ರಮೇಶ್ ರೈ ಡಿಂಬ್ರಿ, ಬಾಬು ಶೆಟ್ಟಿ ನರಿಮೊಗರು, ಶ್ರೀರಾಮ ಪಕ್ಕಳ ಕರ್ನೂರುಗುತ್ತು, ಹೊನ್ನಪ್ಪ ಪೂಜಾರಿ ಕೈಂದಾಡಿ,ಶಾರದಾ ಅರಸ್, ಪೂರ್ಣೇಶ್, ವಿಶಾಲಾಕ್ಷಿ ಬನ್ನೂರು, ರಾಮಣ್ಣ ಪಿಲಿಂಜ, ನಿರಂಜನ ರೈ ಮಠಂತಬೆಟ್ಟು, ಮಲ್ಲಿಕಾ ಅಶೋಕ್ ಪೂಜಾರಿ, ಮಹೇಶ್ಚಂದ್ರ ಸಾಲ್ಯಾನ್, ರೂಪರೇಖಾ ಆಳ್ವ ಮತ್ತಿತರರು ಉಪಸ್ಥಿತರಿದ್ದರು.