ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಪ್ರಧಾನಿ ನರೇಂದ್ರ ಮೋದಿ ಅವರ 3ನೇ ಅವಧಿಯಲ್ಲಿ ಭಾರತದ ನೈಜ ಇತಿಹಾಸವನ್ನು ಜನರಿಗೆ ತಿಳಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಶನಿವಾರ ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಗೋಕುಲ್ ಗಾರ್ಡನ್‌ನಲ್ಲಿ ಮಹಾರಾಣಿ ಅಹಲ್ಯಾಬಾಯಿ ಹೊಳ್ಕರ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಧಾರವಾಡ ಲೋಕಸಭಾ ಕ್ಷೇತ್ರದ ಕುರುಬ ಸಮಾಜದ ಸಮಾವೇಶವನ್ನು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಅವರು, ದೇಶಕ್ಕಾಗಿ ಹೋರಾಡಿದ ಮಹನಿಯರ ನೈಜ ಇತಿಹಾಸವನ್ನು ದೇಶದ ಜನತೆಗೆ ತಿಳಿಸುವ ಕಾರ್ಯವಾಗಬೇಕಿದೆ ಎಂದರು.
ನರೇಂದ್ರ ಮೋದಿ ಅವರು ಸ್ವತಃ ಹಿಂದುಳಿದ ವರ್ಗಕ್ಕೆ ಸೇರಿದವರು. ಇಂದು ಅವರೇ ಪ್ರಧಾನಿಯಾಗುವ ಮೂಲಕ ಹಿಂದುಳಿದ ವರ್ಗಗಳ ಏಳ್ಗೆಗೆ ಶ್ರಮಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ಎಂದಿಗೂ ಹಿಂದುಳಿದವರ ಏಳ್ಗೆಗೆ ಶ್ರಮಿಸಿಲ್ಲ. ತಮ್ಮ ಅಧಿಕಾರದ ಅವಧಿಯಲ್ಲಿ ಹಿಂದುಳಿದ ವರ್ಗದವರನ್ನು ಪ್ರಧಾನಿಯನ್ನಾಗಿಸಲಿಲ್ಲ ಎಂದು ಟೀಕಿಸಿದರು.ಪರಿಶ್ರಮ ಜೀವಿಗಳು:
ಕುರುಬರು ಎಂದಿಗೂ ಪರಿಶ್ರಮ ಜೀವಿಗಳು. ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣವರ ಆದರ್ಶದಂತೆ ತಾವು ಮಾಡುವ ಕಾಯಕದಲ್ಲಿಯೇ ಕೈಲಾಸ ಕಂಡವರು. ನಿಸರ್ಗದೊಂದಿಗೆ ಬೆರೆತು ಜೀವನ ನಡೆಸುವವರು. ಕುರಿಯ ಹಿಕ್ಕಿಯನ್ನೇ ಲಿಂಗವೆಂದು ಪೂಜಿಸಿ ದೇವರನ್ನು ಕಂಡ ಮುಗ್ದರು ಎಂದು ಬಣ್ಣಿಸಿದರು.ಡಾ. ಬಿ.ಆರ್. ಅಂಬೇಡ್ಕರ್, ಬಸವಣ್ಣ, ಭಕ್ತ ಕನಕದಾಸರು, ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಒಂದೇ ಜಾತಿ, ಸಮುದಾಯಕ್ಕೆ ಸೀಮಿತರಾದವರಲ್ಲ. ಚಂದ್ರಗುಪ್ತರು, ಮಹಾರಾಣಿ ಅಹಲ್ಯಾದೇವಿ, ಸಂಗೊಳ್ಳಿ ರಾಯಣ್ಣನವರು ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್ ವ್ಯಕ್ತಿಗಳು. ಇಂತಹ ಮಹನಿಯರ ಆದರ್ಶ ಜನರಿಗೆ ತಿಳಿಸುವ ಕಾರ್ಯವಾಗಬೇಕಿದೆ. ರಾಜ್ಯದಲ್ಲಿ 3ನೇ ಅತಿದೊಡ್ಡ ಸಮಾಜ ಹೊಂದಿದ ಕುರುಬರ ಏಳ್ಗೆಗಾಗಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಸಮಾಜ ಬಾಂಧವರು ನೀಡಿದ ಮನವಿಗಳ ಈಡೇರಿಕೆಗೆ ಕ್ರಮ ಕೈಗೊಳ್ಳಲಾಗುವುದು. ಪ್ರಮುಖ ಬೇಡಿಕೆಯಾಗಿರುವ ಕನಕ ಭವನ ನಿರ್ಮಾಣಕ್ಕೆ ಬೇಕಾದ ಜಾಗ ಗುರುತಿಸಿ ತಿಳಿಸಿದಲ್ಲಿ ₹2 ಕೋಟಿ ವೆಚ್ಚದಲ್ಲಿ ಕನಕ ಸಮುದಾಯ ಭವನ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು.
ಶಾಸಕ ಎಂ.ಆರ್. ಪಾಟೀಲ, ಮಾ. ನಾಗರಾಜ, ಸೀಮಾ ಮಸೂತಿ ಡಾ. ಮಹೇಶ ನಾಲವಾಡ, ತಿಪ್ಪಣ್ಣ ಮಜ್ಜಗಿ, ರವಿ ದಂಡಿನ, ರಾಜೇಶ್ವರಿ ಸಾಲಗಟ್ಟಿ, ಬೀರಪ್ಪ ಖಂಡೇಕಾರ, ಬಸವರಾಜ ಕರಡಿಕೊಪ್ಪ, ಮೇನಕಾ ಹುರಳಿ, ಈರಣ್ಣ ಗುಳಗುಳಿ, ರಾಜಸ್ಥಾನದ ದೇವಾಸಿ ಸಮಾಜದ ಮುಖಂಡ ನಿಥಿನ್ ಸೇರಿದಂತೆ ಹಲವರಿದ್ದರು.