ಪ್ರಕೃತಿ ಮಡಿಲಿನಲ್ಲಿ ಅನುಭವ ಪಡೆಯುವ ಮಕ್ಕಳಲ್ಲಿ ನೈಜ ಕಲಿಕೆ: ಆನಂದ್

| Published : Nov 15 2024, 12:36 AM IST

ಸಾರಾಂಶ

ಮೇಲುಕೋಟೆ ಭವ್ಯಸ್ಮಾರಕಗಳ ತವರೂರು ಹಾಗೂ ದೇವಾಲಯಗಳ ಸುಂದರ ಪ್ರವಾಸಿ ತಾಣ. ಮಕ್ಕಳದಿನಾಚರಣೆ ಪ್ರಯುಕ್ತ ಜಿಲ್ಲೆ ಮತ್ತು ಹೊರಜಿಲ್ಲೆಯ ಸಾವಿರಾರು ಮಕ್ಕಳು ಶಿಕ್ಷಕರೊಟ್ಟಿಗೆ ತಂಡೋಪತಂಡವಾಗಿ ಆಗಮಿಸಿ ಇಲ್ಲಿನ ವಿಶೇಷತೆಗಳ ಬಗ್ಗೆ ಪ್ರಾತ್ಯಕ್ಷಿಕ ಅನುಭವ ಪಡೆಯುತ್ತಿರುವುದು ಖುಷಿತರುವ ವಿಚಾರವಾಗಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಪ್ರಕೃತಿ ಮಡಿಲಿನಲ್ಲಿ ಅನುಭವ ಪಡೆಯುವ ಮಕ್ಕಳಲ್ಲಿ ನೈಜ ಕಲಿಕೆ ಉಂಟಾಗುತ್ತದೆ ಎಂದು ಜಿಪಂ ಉಪ ಕಾರ್ಯದರ್ಶಿ(ಅಭಿವೃದ್ಧಿ) ಆನಂದ್ ಅಭಿಪ್ರಾಯಪಟ್ಟರು.

ಇಲ್ಲಿನ ಪ್ರಕೃತಿ ತಾಣ ತೊಟ್ಟಲ ಮಡುವಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಮಕ್ಕಳಿಗೆ ಮಕ್ಕಳ ದಿನಾಚರಣೆ ಅಂಗವಾಗಿ ಜಲವಿಹಾರ ಹಾಗೂ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಕರು ತಮ್ಮೂರಿನಲ್ಲಿ ಪಾಕೃತಿಕ ವಿಶೇಷತೆಗಳು ಮತ್ತು ಸ್ಮಾರಕಗಳಿದ್ದರೆ ಅವುಗಳ ಮಹತ್ವವನ್ನು ಮಕ್ಕಳಿಗೆ ತಿಳಿಸಿ ಸಂರಕ್ಷಿಸಲು ಪ್ರೇರೇಪಿಸಬೇಕು. ಇದರಿಂದ ಚಿಕ್ಕಂದಿನಿಂದಲೇ ದೇಶಪ್ರೇಮ, ಪರಿಸರ ಬೆಳೆಸಲು ಸಹಕಾರಿಯಾಗುತ್ತದೆ ಎಂದರು.

ಮೇಲುಕೋಟೆ ಭವ್ಯಸ್ಮಾರಕಗಳ ತವರೂರು ಹಾಗೂ ದೇವಾಲಯಗಳ ಸುಂದರ ಪ್ರವಾಸಿ ತಾಣ. ಮಕ್ಕಳದಿನಾಚರಣೆ ಪ್ರಯುಕ್ತ ಜಿಲ್ಲೆ ಮತ್ತು ಹೊರಜಿಲ್ಲೆಯ ಸಾವಿರಾರು ಮಕ್ಕಳು ಶಿಕ್ಷಕರೊಟ್ಟಿಗೆ ತಂಡೋಪತಂಡವಾಗಿ ಆಗಮಿಸಿ ಇಲ್ಲಿನ ವಿಶೇಷತೆಗಳ ಬಗ್ಗೆ ಪ್ರಾತ್ಯಕ್ಷಿಕ ಅನುಭವ ಪಡೆಯುತ್ತಿರುವುದು ಖುಷಿತರುವ ವಿಚಾರವಾಗಿದೆ ಎಂದರು.

ಶತಮಾನದ ಸರ್ಕಾರಿಶಾಲೆಯ ಬಗ್ಗೆ ಮಾಹಿತಿ ಪಡೆದು ಕವಿ ಪುತಿನ ವ್ಯಾಸಂಗ ಮಾಡಿರುವ ಈ ಶಾಲೆ ಅಭಿವೃದ್ಧಿಗೆ ಜಿಪಂ ವತಿಯಿಂದ ಅಗತ್ಯ ಸಹಕಾರ ನೀಡಲಾಗುತ್ತದೆ. ಶಾಲಾಭಿವೃದ್ಧಿಗೆ ಸಾಹಿತ್ಯಸಮ್ಮೇಳನದ ವೇಳೆಗೆ ಚಾಲನೆ ನೀಡಲು ಪ್ರಯತ್ನಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಇದೇ ವೇಳೆ ಮಕ್ಕಳು ತೊಟ್ಟಿಲಮಡುವಿನಲ್ಲಿ ಜಲವಿಹಾರಮಾಡಿ ಅಲ್ಲೇ ವನ ಭೋಜನ ಸ್ವೀಕರಿಸಿದರೆ, ಬಾಲಕಿಯರ ಶಾಲೆ ಮಕ್ಕಳು ಸ್ಮಾರಕಗಳ ಚಲುವನ್ನು ಕಣ್ತುಂಬಿಕೊಂಡರು.

ಎಸ್ ಇ.ಟಿ ಪಬ್ಲಿಕ್ ಶಾಲೆ ಮಕ್ಕಳು ಡಿಜೆ ಸೌಂಡ್‌ಗೆ ಹೆಜ್ಜೆಹಾಕಿ ನೃತ್ಯಮಾಡಿದರು. ಜಿಲ್ಲೆಯ ಹಾಗೂ ಹೊರಜಿಲ್ಲೆಗಳಿಂದ ವಿವಿಧ ವಾಹನಗಳಲ್ಲಿ ಆಗಮಿಸಿದ್ದ ಸಾವಿರಾರು ಪುಟಾಣಿಗಳು ಚೆಲುವನಾರಾಯಣನ ದರ್ಶನಮಾಡಿ, ಸ್ಮಾರಕ ರಾಯಗೋಪುರ, ಅಕ್ಕತಂಗಿಕೊಳ, ಕಲ್ಯಾಣಿ ಸಮುಚ್ಚಯದ ಸಾಲುಮಂಟಪಗಳು, ಭುವನೇಶ್ವರಿಮಂಟಪ, ದನುಷ್ಕೋಟಿ, ಯೋಗನರಸಿಂಹ ಸ್ವಾಮಿ ಬೆಟ್ಟ ಮುಂತಾದಕಡೆ ವಿಹಾರಮಾಡಿ ಫೋಟೋ ತೆಗೆದುಕೊಂಡು ಮಕ್ಕಳದಿನಾಚರಣೆಯನ್ನು ಶಿಕ್ಷಕರೊಟ್ಟಿಗೆ ಅರ್ಥಪೂರ್ಣವಾಗಿ ಸಂಭ್ರಮದಿಂದ ಆಚರಿಸಿದರು.

ಈ ವೇಳೆ ಪಿಡಿಒ ರಾಜೇಶ್ವರ್, ನರೇಗ ಸಹಾಯಕ ನಿರ್ದೇಶಕ ಸುರೇಂದ್ರ, ಬಾಲಕರ ಶಾಲೆ ಮುಖ್ಯಶಿಕ್ಷಕ ಎಸ್.ಎನ್ ಸಂತಾನರಾಮನ್, ಶಿಕ್ಷಕರಾದ ಮಹಾಲಕ್ಷ್ಮಿ, ಬಿ. ಜಯಂತಿ, ಪೂರ್ಣಿಮ,ಶೃತಿ,ಗಿರಿಜಾ, ಅಡಿಗೆ ಸಹಾಯಕರಾದ ಕಮಲ, ಜಯಲಕ್ಷ್ಮಿ, ಭಾಗವಹಿಸಿದ್ದರು