ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಿಜವಾದ ಯಶಸ್ಸು ನೊಂದವರ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಇರುತ್ತದೆ. ಸಂಗಮೇಶ ಬಬಲೇಶ್ವರ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾಗಿ ಆ ಕಾರ್ಯ ನಿರ್ವಹಿಸಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಂಗಮೇಶ ಬಬಲೇಶ್ವರ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾಗಿ ಒಂದು ವರ್ಷ ಪೂರ್ಣಗೊಳಿಸಿದ್ದಕ್ಕಾಗಿ ಅಭಿನಂದನೆ ಹಾಗೂ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಅಕಾಡೆಮಿಯ ಅಧ್ಯಕ್ಷರಾದಾಗಿನಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದರು.ಎಕ್ಸಲಂಟ್ ಎನ್ನುವ ಸಂಸ್ಥೆ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ವಿಜಯಪುರವನ್ನು ಮೀರಿ ಧಾರವಾಡದಂತ ನಗರದಲ್ಲಿಯೂ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡಿರುವುದು ಹೆಮ್ಮೆಯ ವಿಷಯ. ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದರೊಂದಿಗೆ ಅತ್ಯುತ್ತಮ ಯುವ ಪೀಳಿಗೆಯನ್ನು ನಿರ್ಮಾಣ ಮಾಡಬೇಕೆಂದು ಹೇಳಿದರು.
ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಎನ್.ಎಂ.ಬಿರಾದಾರ ಮಾತನಾಡಿ, ಸಂಗಮೇಶ ಬಬಲೇಶ್ವರ ನಾಯಕತ್ವ ಗುಣ ಹೊಂದಿದ್ದು, ಕೆಲಸವನ್ನು ಮಾಡಬೇಕೆಂದು ನಿರ್ಧರಿಸಿದರೆ ಅದನ್ನು ಮಾಡುವವರೆಗೂ ವಿಶ್ರಮಿಸದಂತ ಛಲಗಾರರು ಎಂದು ಬಣ್ಣಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ವಿಷವನ್ನು ಸಹ ಅಮೃತವನ್ನಾಗಿ ಪರಿವರ್ತಿಸುವ ಶಕ್ತಿ ಶಿಕ್ಷಣಕ್ಕಿದೆ. ಅಂತಹ ಅಮೃತವನ್ನುಣಿಸುವ ಕಾರ್ಯವನ್ನು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಮಾಡುತ್ತಿದ್ದಾರೆ. ಯಾವುದೇ ಮಗುವಿಗೂ ಅನಾಥ ಪ್ರಜ್ಞೆ ಕಾಡದಂತೆ ಬೆಳೆಸಬೇಕು. ಆ ನಿಟ್ಟಿನಲ್ಲಿ ಬಾಲ ವಿಕಾಸ ಅಕಾಡೆಮಿಯ ಯೋಜನೆಗಳು ಸಮಾಜದ ಕಟ್ಟ ಕಡೆಯ ಮಗುವಿಗೂ ತಲುಪಿಸುವ ಕಾರ್ಯವನ್ನು ಮಾಡಿದ್ದೇನೆ ಎಂದು ತಿಳಿಸಿದರು.
ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಮಾತನಾಡಿ, ರಾಜ್ಯದ ಮಕ್ಕಳ ಆಶಾಕಿರಣವಾಗಿರುವ ಸಂಗಮೇಶ ಬಬಲೇಶ್ವರ ಅವರು ಇಂದು ಬಾಲ ವಿಕಾಸ ಅಕಾಡೆಮಿಯ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.ಮಲೆನಾಡು ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಉದ್ದಿಮೆದಾರ ಶಾಂತೇಶ ಕಳಸಗೊಂಡ, ಎಕ್ಸಲೆಂಟ್ ಸಂಸ್ಥೆಯ ಗೌರವ ಸದಸ್ಯ ರಾಜಶೇಖರ ಕೌಲಗಿ, ವಿಡಿಸಿಸಿ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ವಿ.ಡಿ.ಮಾದನಶೆಟ್ಟಿ, ಉಪನ್ಯಾಸಕ ಶಿವಾನಂದ ಕಲ್ಯಾಣಿ ಮಾತನಾಡಿದರು. ಉಪನ್ಯಾಸಕ ಶರಣಗೌಡ ಪಾಟೀಲ ನಿರೂಪಿಸಿದರು. ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಸ್ವಾಗತಿಸಿದರು. ಉಪ ಪ್ರಾಚಾರ್ಯ ಮಂಜುನಾಥ ಜುನಗೊಂಡ ಪ್ರಸ್ತಾವಿಕವಾಗಿ ಮಾತನಾಡಿದರು. ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ, ಮುಖ್ಯೋಪಾಧ್ಯಾಯರು, ಸಿಬ್ಬಂದಿ ಉಪಸ್ಥಿತರಿದ್ದರು.