ಸಿಡಿಎ ಆಯ್ಕೆ ಪಕ್ಷ ನಿಷ್ಠೆಗೆ ತೋರಿದ ನೈಜ ಸಾಕ್ಷಿ: ಶಾಸಕ ಎಚ್.ಡಿ.ತಮ್ಮಯ್ಯ

| Published : Jul 16 2024, 12:39 AM IST

ಸಾರಾಂಶ

ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಯಾಜ್‌ ಹಾಗೂ ಇತರೆ ಸದಸ್ಯರಿಗೆ ಶಾಸಕ ಎಚ್‌.ಡಿ.ತಮ್ಮಯ್ಯ, ಮಾಜಿ ಎಂಎಲ್‌ಸಿ ಗಾಯತ್ರಿ ಶಾಂತೇಗೌಡ, ಡಾ.ಡಿ.ಎಲ್‌.ವಿಜಯಕುಮಾರ್‌, ಬಿ.ಎಂ. ಸಂದೀಪ್‌ ಅಭಿನಂದನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜಾತ್ಯಾತೀತ ನಿಲುವು ಒಳಗೊಂಡಿರುವ ಕಾಂಗ್ರೆಸ್‌ನಲ್ಲಿ ಪಕ್ಷ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ದುಡಿದಿರುವ ಕಾರ್ಯಕರ್ತರನ್ನು ಗುರುತಿಸಿ ಸ್ಥಾನಮಾನ ಕಲ್ಪಿಸಿರುವುದಕ್ಕೆ ಸಿಡಿಎ ನೂತನ ಪದಾಧಿಕಾರಿಗಳ ಆಯ್ಕೆಯೇ ನೈಜ ಸಾಕ್ಷಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ಸೋಮವಾರ ಅಧಿಕಾರ ಸ್ವೀಕರಿಸಿದ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಸಿಡಿಎ)ದ ನೂತನ ಅಧ್ಯಕ್ಷ ನಯಾಜ್ ಹಾಗೂ ಸದಸ್ಯರಾದ ರಾಘವೇಂದ್ರ, ಶ್ರದೀಪ್, ಗುಣವತಿ ಹಾಗೂ ಆಶಾ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ಕಾಂಗ್ರೆಸ್ ಹಿಂದಿನಿಂದಲೂ ಸರ್ವ ಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಏಕೈಕ ಪಕ್ಷ. ಅದರಂತೆ ಸಿಡಿಎ ನೂತನ ಪದಾಧಿಕಾರಿಗಳನ್ನು ಸರ್ವ ಧರ್ಮ ಪ್ರಾರ್ಥನೆ ಮೂಲಕ ಅಧಿಕಾರದ ಗದ್ದುಗೆ ಕೂರಿಸಲಾಗಿದೆ. ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳ ಆದೇಶದಂತೆ ಸಿಕ್ಕಂತಹ ಅವಧಿಯಲ್ಲಿ ತಾರತಮ್ಯ ವೆಸಗದೇ ಸಮಾನತೆ ನ್ಯಾಯ ಒದಗಿಸಬೇಕು ಎಂದರು.

ನೂತನ ಅಧ್ಯಕ್ಷರು ಹಾಗೂ ಸದಸ್ಯರು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸುವ ಜೊತೆಗೆ ಯಾವುದೇ ಲೋಪವೆಸಗದಂತೆ ಚಿಕ್ಕಮಗಳೂರಿನ ಜನತೆಗೆ ಸವಲತ್ತು ಒದಗಿಸಬೇಕು. ಅಲ್ಲದೇ ಸಿಡಿಎ ಮಾಜಿ ಅಧ್ಯಕ್ಷರಾದ ಜಾತ್ಯಾತೀತ ನಿಲುವು, ಸಲಹೆ ಹಾಗೂ ಸಹಕಾರ ಪಡೆದು ಮುನ್ನೆಡೆಯಬೇಕು ಎಂದು ತಿಳಿಸಿದರು.

ಸಿಡಿಎ ಮೊದಲ ಅವಧಿಗೆ ಅನೇಕ ಮುಖಂಡರುಗಳು ಆಕ್ಷಾಂಕಿಯಾಗಿದ್ದರು. ಆದರೆ, ರಾಜ್ಯ ಮಟ್ಟದ ತೀರ್ಮಾನಕ್ಕೆ ನಾವುಗಳು ತಲೆಬಾಗಲೇಬೇಕು. ಹೀಗಾಗಿ ಮುಂದಿನ ಅವಧಿಯಲ್ಲಿ ಪಕ್ಷನಿಷ್ಠೆ ಹೊಂದಿರುವ ಮುಖಂಡರಿಗೆ ಖಂಡಿತ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ನೂತನ ಅಧ್ಯಕ್ಷ ನಯಾಜ್ ಮಾತನಾಡಿ, ಅನೇಕ ವರ್ಷಗಳಿಂದ ಮಾಡಿರುವ ಸೇವೆ ಪರಿಗಣಿಸಿ ಸಣ್ಣ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ ಪಕ್ಷ ನೀಡಿದೆ. ಸಾಮಾಜಿಕ ಬದ್ಧತೆ, ಸದಸ್ಯರು ಒಗ್ಗಟ್ಟಿನಿಂದ ಕ್ಷೇತ್ರದ ಜನತೆಗೆ ನ್ಯಾಯ ಸಮ್ಮತವಾಗಿ ಕರ್ತವ್ಯ ನಿರ್ವಹಿಸುತ್ತೇನೆ. ಅಲ್ಲದೇ ತಮ್ಮ ಆಯ್ಕೆಗೆ ಸಹಕರಿಸಿ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ವಿಧಾನಪರಿಷತ್ ಮಾಜಿ ಸದಸ್ಯರಾದ ಗಾಯತ್ರಿ ಶಾಂತೇಗೌಡ ಮಾತನಾಡಿ, ಅಧಿಕಾರದ ಆಸನ ಶಾಶ್ವತವಲ್ಲ, ಅವಧಿಯಲ್ಲಿ ಕೈಗೊಂಡಂತಹ ಅಭಿವೃದ್ಧಿ ಕೆಲಸಗಳೇ ಶಾಶ್ವತ. ಈ ತತ್ವವನ್ನು ನೂತನ ಪದಾಧಿಕಾರಿಗಳು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನೆಡೆದರೆ ಜನಮಾನಸದಲ್ಲಿ ನೆಲೆಯೂರಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ಇದೇ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಪದಾಧಿಕಾರಿಗಳಿಗೆ ಹಿಂದೂ ಸಂಪ್ರದಾಯದಂತೆ ಮಂತ್ರಕ್ಷತೆ ಹಾಕಲಾಯಿತು. ಮಸೀದಿ ಗುರುಗಳು ಹಾಗೂ ಕ್ರಿಶ್ಛಿಯನ್ ಧರ್ಮಾನುಸಾರ ಮಂತ್ರ ಪಠಿಸಿ ಪದಾಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಶುಭಕೋರಿದರು.

ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಡಿ.ಎಲ್.ವಿಜಯ್‌ಕುಮಾರ್, ರೇಖಾ ಹುಲಿಯಪ್ಪಗೌಡ, ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಮುಖಂಡರಾದ ಎಂ.ಎಲ್.ಮೂರ್ತಿ, ಕೆ.ಎಸ್.ಶಾಂತೇಗೌಡ, ಹನೀಫ್, ತನೋಜ್ ನಾಯ್ಡು, ಬಿ.ಎಚ್.ಹರೀಶ್, ಮಲ್ಲೇಶಸ್ವಾಮಿ, ಹಿರೇಮಗಳೂರು ರಾಮಚಂದ್ರ, ರೂಬೆನ್ ಮೋಸಸ್, ನಗರಸಭಾ ಸದಸ್ಯರಾದ ಮುನೀರ್ ಅಹ್ಮದ್, ಖಲಂದರ್, ಶಾದಬ್, ಅನ್ಸರ್ ಆಲಿ ಇದ್ದರು.