ಸಾರಾಂಶ
ಸವಣೂರು:ಭಗವಂತನು ಸರ್ವವ್ಯಾಪಿಯಾಗಿದ್ದು, ಅನಗತ್ಯವಾಗಿ ಆತನ ಅನ್ವೇಷಣೆಗೆ ತೊಡಗದೇ ಭಕ್ತಿ ಮಾರ್ಗದ ಮೂಲಕ ಮಾತ್ರವೇ ಭಗವಂತನ ಸಾಕ್ಷಾತ್ಕಾರ ಆಗಬಲ್ಲದು ಎಂದು ಫಂಡರಪೂರದ ಹಭಪ ಗುರುವರ್ಯ ಪ್ರಭಾಕರ ದಾದಾ ಬೋಧಲೆ ಮಹಾರಾಜ ತಿಳಿಸಿದರು.
ತಾಲೂಕಿನ ತವರಮೆಳ್ಳಿಹಳ್ಳಿ ಗ್ರಾಮದಲ್ಲಿ ಹಿಂದೂ ಮರಾಠಾ ಪರಿಟ(ರಜಕ) ಸಮಾಜದ ವತಿಯಿಂದ ಸೋಮವಾರ ಏರ್ಪಡಿಸಿದ್ದ ವಿಠ್ಠಲ -ರುಕ್ಮಿಣಿ ಮಂದಿರದ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಮನುಷ್ಯನ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಸಮಸ್ಥಿತಿಗೆ ತರುವಲ್ಲಿ ಅಧ್ಯಾತ್ಮ ನೆರವಾಗುತ್ತದೆ. ತತ್ಪಲವಾಗಿ ಪ್ರವಚನ, ಕೀರ್ತನೆಗಳು ಮನುಕುಲಕ್ಕೆ ವರವಾಗಿ ಪರಿಣಮಿಸಿವೆ. ದೈನಂದಿನ ಬದುಕಿನಲ್ಲಿ ಅಧ್ಯಾತ್ಮ, ಅಚಾರ-ವಿಚಾರ, ನಮ್ಮ ಸಂಸ್ಕೃತಿ ಪರಂಪರೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಮಹಾರಾಷ್ಟ್ರ ರಾಜ್ಯದ ಫಂಡರಪೂರದ ಪ್ರಭಾಕರ ಬೋಧಲೆ ಮಹಾರಾಜ ಶ್ರೀಗಳು ಕನ್ನಡ ಭಾಷೆಯಲ್ಲಿ ಆಶೀರ್ವಚನ ಮತ್ತು ಕೀರ್ತನೆ ನೆರವೇರಿಸಿದ್ದು ವಿಶೇಷವಾಗಿತ್ತು.ಶಾಸಕ ಯಾಸೀರ ಅಹ್ಮದಖಾನ್ ಪಠಾಣ, ಕರ್ನಾಟಕದ ಗಡಿ ಪ್ರದೇಶದ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ಗ್ರಾಪಂ ಅಧ್ಯಕ್ಷೆ ದೊಡ್ಡಬಸಮ್ಮ ದೊಡ್ಡಮನಿ, ಉಪಾಧ್ಯಕ್ಷ ಗುರಪ್ಪ ಅಕ್ಕಿ, ಸದಸ್ಯರಾದ ಪ್ರಶಾಂತ ಕ್ಷತ್ರಿ ಹಾಗೂ ಇತರರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಂಗವಾಗಿ ವಿಠ್ಠಲ-ರುಕ್ಮಿಣಿಯರ ಮೂರ್ತಿ ಮೆರವಣಿಗೆ, ಕುಂಭಮೇಳ, ಪೋತಿ ಸ್ಥಾಪನೆ, ಕೀರ್ತನ, ಕಾಕಡಾರತಿ, ಗ್ರಂಥರಾಜ ಜ್ಞಾನೇಶ್ವರಿಯ ಪಾರಾಯಣ, ಗಾಥಾ ಭಜನ, ಹರಿಪಾಠ, ದೇವರ ಪ್ರಾಣ ಪ್ರತಿಷ್ಠಾಪನೆ, ಪೂರ್ಣಾಹುತಿ, ಹೋಮದಂತಹ ಧಾರ್ಮಿಕ ವಿಧಿವಿಧಾನಗಳು ಮೂರು ದಿನಗಳ ವರೆಗೆ ಯಶಸ್ಸಿಯಾಗಿ ಜರುಗಿದವು.ಮೂರು ದಿನಗಳ ಕಾಲ ನಿರಂತರವಾಗಿ ಬೆಳಗಿನ ಉಪಾಹಾರ ಮತ್ತು ಹಗಲು ರಾತ್ರಿ ಅನ್ನ ದಾಸೋಹ ನಡೆಸಲಾಯಿತು. ವಿರೂಪಾಕ್ಷಯ್ಯ ಹಿರೇಮಠ, ಬಂಕಾಪುರದ ಹಭಪ ಭಾನುದಾಸ ಮಹಾರಾಜ ಸರ್ವದೆ ನೇತೃತ್ವ ವಹಿಸಿದ್ದರು.
ಸವಣೂರ, ಹಾವೇರಿ, ಬಂಕಾಪುರ, ಅಲ್ಲಾಪುರ, ಲಕ್ಷ್ಮೇಶ್ವರ, ಬೇವಿನಹಳ್ಳಿ, ಹಳೇಬಂಕಾಪುರ, ಹುಬ್ಬಳ್ಳಿ- ಧಾರವಾಡ, ಚಿಗಳ್ಳಿ, ಬಾಡ, ಹಳೇಬಂಕಾಪುರ, ರಾಣಿಬೆನ್ನೂರ ಮತ್ತು ದಾವಣಗೆರೆಯಿಂದ ಸಾಧು ಸಂತರು, ವಾರಕರಿ ಸಂಪ್ರದಾಯದ ಸಂತಮಹಾರಾಜರು ಆಗಮಿಸಿ ಭಜನಾ ಕಾರ್ಯಕ್ರಮ ನೆರವೇರಿಸಿದರು. ತವರಮೆಳ್ಳಿಹಳ್ಳಿಯ ಭಜನಾ ಮಂಡಳಿಯ ಸದಸ್ಯರು ಭಜನಾ ಸೇವೆ ಸಲ್ಲಿಸಿದರು.