ಸಾರಾಂಶ
ಹೊಸಪೇಟೆ: ಸಂಶೋಧನೆಗಳು ನಿಖರ, ಖಚಿತ ಮತ್ತು ವೈಚಾರಿಕ ಚಿಂತನೆಯನ್ನು ಒಳಗೊಂಡಿರಬೇಕು. ಸಂಶೋಧನೆಗಳಲ್ಲಿ ಸತ್ಯದ ಸಾಕ್ಷಾತ್ಕಾರವಾಗಬೇಕು ಎಂದು ಹಿರಿಯ ಸಂಶೋಧಕ ಮತ್ತು ನಿವೃತ್ತ ಪ್ರಾಧ್ಯಾಪಕ ಡಾ. ಸಿ. ವೀರಣ್ಣ ಹೇಳಿದರು.ಕನ್ನಡ ವಿಶ್ವವಿದ್ಯಾಲಯದ ಅಧ್ಯಯನಾಂಗದ ವತಿಯಿಂದ ಮಂಟಪ ಸಭಾಂಗಣದಲ್ಲಿ ಯುಜಿಸಿ ಪಿಎಚ್‌ಡಿ ಕೋರ್ಸ್ ವರ್ಕ್‌ನ ಎರಡನೇ ಹಂತದ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತ್ಯ, ಸಂಸ್ಕೃತಿ ಅಧ್ಯಯನದ ಹೊಸ ಸಾಧ್ಯತೆಗಳು ಎಂಬ ವಿಷಯದ ಕುರಿತ ಉಪನ್ಯಾಸದಲ್ಲಿ ಅವರು ಮಾತನಾಡಿದರು. ಸಂಶೋಧನೆ ಕೈಗೊಂಡ ಆರಂಭದಿಂದ ಅದರ ಅಂತಿಮ ಹಂತದ ವರೆಗೂ ನಾವು ಹಾಕಿದ ಶ್ರಮದ ಮೇಲೆ ಸಂಶೋಧನೆಯ ಸಫಲತೆ ನಿರ್ಧಾರವಾಗುತ್ತದೆ. ಸಮಾಜದ ಬೆಳವಣಿಗೆಗಾಗಿ ನಿರಂತರ ಹುಡುಕಾಟಗಳು ನಡೆಯಬೇಕು. ಚರಿತ್ರೆ ತಿಳಿಯದೇ ಚರಿತ್ರೆಯನ್ನು ಕಟ್ಟುವುದು ಅಸಾಧ್ಯ. ಪ್ರತಿಭಟನೆಯಿಂದಾಗಿಯೇ ಕನ್ನಡ ಸಾಹಿತ್ಯ ರೂಪಗೊಂಡಿದೆ. ಚರಿತ್ರೆ ಮತ್ತು ಕಾವ್ಯದ ಪರಸ್ಪರ ಸಹಕಾರದಿಂದಾಗಿ ಇತಿಹಾಸ ನಿರ್ಮಾಣವಾಗಿದೆ ಎಂದರು. ಪತ್ರಕರ್ತೆ ಮತ್ತು ಲೇಖಕಿ ಡಾ. ಆರ್. ಪೂರ್ಣಿಮಾ ಮಾತನಾಡಿ, ಎಲ್ಲ ಕಾಲದಲ್ಲೂ ಹೆಣ್ಣು ದೌರ್ಜನ್ಯಕ್ಕೆ ಒಳಗಾಗುತ್ತಾ ಬಂದಿದ್ದಾಳೆ. ಪ್ರಪಂಚ ಎಂಬುದು ಗಂಡು, ಹೆಣ್ಣು ಇಬ್ಬರಿಂದಲೂ ನಿರ್ಮಾಣವಾಗಿದ್ದರೂ ಹೆಣ್ಣಿಗೆ ಸಿಗಬೇಕಾದ ಗೌರವದಲ್ಲಿ ತಾತ್ಸಾರ ಭಾವನೆಯಿದೆ. ಕೃಷಿ ಸಂಬಂಧಿತ ಉತ್ಪಾದನೆಗಳನ್ನು ಮೊದಲು ಆರಂಭಿಸಿದವಳು ಮಹಿಳೆ. ಆದರೆ ಅವಳನ್ನೇ ಕೃಷಿಯ ಆರ್ಥಿಕ ವ್ಯವಹಾರಗಳಿಂದ ದೂರವಿರಿಸಲಾಗಿದೆ. ಈ ನಿಟ್ಟಿನಲ್ಲಿ ಹೆಣ್ಣಿನ ನೋವು ಮತ್ತು ದೌರ್ಜನ್ಯವನ್ನು ಪ್ರತ್ಯೇಕವಾಗಿ ಯೋಚಿಸಬೇಕು. ಸಾಮ್ರಾಜ್ಯಗಳ ಕಾಲದಿಂದಲೂ ಇಂದಿನ ರಾಜಕೀಯ ವ್ಯವಸ್ಥೆಯವರೆಗೂ ಹೆಣ್ಣಿಗೆ ದೊರೆತ ಸ್ಥಾನದ ಕುರಿತು ಸಂಶೋಧನೆಯ ದೃಷ್ಟಿ ಹರಿಸಬೇಕಿದೆ. ಪ್ರತಿಯೊಂದು ಕ್ಷೇತ್ರದ ಸಂಶೋಧನೆಯಲ್ಲೂ ಮಹಿಳಾ ದೃಷ್ಟಿಕೋನ ಮತ್ತು ನೆಲೆಗಟ್ಟಿನಲ್ಲಿ ನೋಡುವ ಕಾರ್ಯವಾಗಬೇಕಿದೆ. ಇವತ್ತಿನ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಮಹಿಳೆಗೆ ಒದಗಿ ಬರುತ್ತಿರುವ ಸಮಸ್ಯೆಗಳ ಕುರಿತು ಹಾಗೂ ಅವಳ ಮೇಲಿನ ಶೋಷಣೆ ಬಗೆಗೂ ಯೋಚಿಸುವುದು ಅಗತ್ಯವಾಗಿದೆ. ಇಂದಿನ ಹೊಸ ತಂತ್ರಜ್ಞಾನ ಹೆಣ್ಣು, ಗಂಡಿನ ನಡುವೆ ಡಿಜಿಟಲ್ ಡಿವೈಡ್ ತಂದಿರುವುದು ಅಪಾಯಕರ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂತರ್ ಶಿಸ್ತೀಯ ಅಧ್ಯಯನವನ್ನು ಕನ್ನಡ ವಿಶ್ವವಿದ್ಯಾಲಯ ಮೈಗೂಡಿಸಿಕೊಂಡಿದ್ದು, ಸಂಶೋಧನಾರ್ಥಿಗಳು ಸಾಂಪ್ರದಾಯಿಕ ಹಾದಿಗಳಿಗಿಂತ ವಿಭಿನ್ನವಾಗಿ ಚಿಂತಿಸಬೇಕಿದೆ. ಇತ್ತೀಚೆಗೆ ಆಳವಾದ ಅಧ್ಯಯನವಿಲ್ಲದೆ ವಿದ್ಯಾರ್ಥಿಗಳಿಗೆ ಪಾಠ ಬೋಧಿಸುವ ಪ್ರವೃತಿ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳ ಯೋಚನೆ ಮೀರಿದ ಪೂರ್ವ ತಯಾರಿಯನ್ನು ಅಧ್ಯಾಪಕರು ಮಾಡಿಕೊಳ್ಳಬೇಕಿದೆ ಎಂದರು.
ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಯನಾಂಗದ ನಿರ್ದೇಶಕ ಡಾ. ಪಿ. ಮಹದೇವಯ್ಯ, ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಶಿವಾನಂದ ವಿರಕ್ತಮಠ, ಪತ್ರಿಕೋದ್ಯಮ ವಿಭಾಗದ ಅಧ್ಯಾಪಕಿ ಪದ್ಮಾವತಿ ಕೆ. ಕಾರ್ಯಕ್ರಮ ನಿರ್ವಹಿಸಿದರು.