ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಗ್ರಾಮೀಣ ಭಾಗದ ಸಾರ್ವಜನಿಕರುಗಳ ಬರದಿಂದ ತತ್ತರಿಸುತ್ತಿದ್ದು, ಅವರುಗಳ ಜೊತೆಯಾಗಿ ನಿಂತು ಅವರಿಗೆ ಆತ್ಮಸ್ಥೈರ್ಯವನ್ನು ತುಂಬಿ ಅವರುಗಳ ಬದುಕನ್ನು ಹಸನು ಮಾಡುವ ಬಗ್ಗೆ ಚಿಂತಿಸುವ ಕೆಲಸ ನಮ್ಮೆಲ್ಲರದಾಗಿದೆ ಎಂದು ಬೇಲೂರು ಕ್ಷೇತ್ರದ ಶಾಸಕ ಹುಲ್ಲಳ್ಳಿ ಸುರೇಶ್ ತಿಳಿಸಿದರು.ತಾಲೂಕಿನ ಜಾವಗಲ್ ಹೋಬಳಿಯ ನೇರ್ಲಿಗೆ ಗ್ರಾಪಂ ಗ್ರಾಮಸಭೆಯನ್ನು ಉದ್ಘಾಟಿಸಿ ಮಾತನಾಡಿ, ಹಳ್ಳಿಗಳಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿದ್ದು, ಪ್ರಥಮವಾಗಿ ಕುಡಿಯುವ ನೀರು, ಓಡಾಡಲು ರಸ್ತೆ, ಚರಂಡಿ, ವಿದ್ಯುತ್ ಒಳಗೊಂಡಂತೆ ಮೂಲಭೂತ ಸೌಲಭ್ಯಗಳನ್ನು ಓದಗಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಅವಿರತವಾಗಿ ಶ್ರಮಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಅತಿ ಹೆಚ್ಚಿನ ವಿದ್ಯುತ್ ಸಮಸ್ಯೆಯಿದ್ದು ರೈತರಿಗೆ ಬೆಳೆಯನ್ನು ಬೆಳೆಯಲು ಬಹಳ ಕಷ್ಟವಾಗುತ್ತಿದ್ದು ಮತ್ತು ರಾತ್ರಿ ವೇಳೆಯಲ್ಲಿ ಚಿರತೆಗಳ ಹಾವಳಿಯಿಂದ ಸಾರ್ವಜನಿಕರು ಓಡಾಡಲು ತೀವ್ರತರವಾದ ಕಷ್ಟವಾಗಿರುವುದರಿಂದ ವಿದ್ಯುತ್ ಸಮಸ್ಯೆಯನ್ನು ಕೂಡಲೇ ಬಗೆಹರಿಸಿಕೊಡವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದರು.
ಹಾಗೇಯೇ ರಸ್ತೆ ಬದಿ ಇರುವ ಗಿಡ ಗೆಂಟೆಗಳನ್ನು ತೆರವು ಮಾಡುವಂತೆ ಹಾಗೂ ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ರಸ್ತೆ ಬದಿಗಳಲ್ಲಿರುವ ತಿಪ್ಪೆಗಳನ್ನು ತೆರವು ಮಾಡಿ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಬೇಕು, ಹಾಗೂ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಗ್ರಾಮಗಳಲ್ಲಿರುವ ಪ್ರತಿ ಮನೆ ಮನೆಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವಂತೆ ತಿಳಿಸಿದರು. ಸಾರ್ವಜನಿಕರಿಗೆ ನಿಗಧಿತ ಸಮಯದಲ್ಲಿ ಎಲ್ಲ ಸೌಲಭ್ಯಗಳನ್ನು ದೊರಕುವಂತೆ ಮಾಡುವ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಗ್ರಾಮಸಭೆಗಳು ತಮ್ಮ ಕಷ್ಟಗಳನ್ನು ಹಂಚಿಕೊಳ್ಳಲು ಮುಖ್ಯ ವೇದಿಕೆಯಾಗಿದ್ದು, ಗ್ರಾಮಸಭೆಗಳ ಉಪಯೋಗವನ್ನು ಸರಿಯಾಗಿ ಬಳಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.ಗ್ರಾಮಸಭೆಯಲ್ಲಿ ತಾಪಂ ಇಒ ನಾಗರಾಜ್, ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಗೀತಾ ಕಾಳೇಗೌಡ, ಪಿಡಿಒ ಉಮೇಶ್, ಮುಖಂಡರಾದ ಕಲ್ಲಳ್ಳಿ ನಾಗರಾಜ್, ಸೋಮಶೇಖರ್, ಗ್ರಾಪಂ ಸದಸ್ಯರುಗಳು ಮತ್ತು ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.