ಸಾರಾಂಶ
ಅಂಕೋಲಾ: ಸ್ವಾತಂತ್ರ್ಯ, ಭ್ರಾತತ್ವ, ಸಮಾನತೆ, ನ್ಯಾಯವನ್ನು ಸಾರುವ ಭಾರತದ ಸಂವಿಧಾನದ ತತ್ವಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಸಂವಿಧಾನದ ಮೂಲ ಉದ್ದೇಶವನ್ನು ಸಾಕಾರಗೊಳಿಸಬೇಕಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ ತಿಳಿಸಿದರು.ಸಂವಿಧಾನದ ದಿನಾಚರಣೆ ಪ್ರಯುಕ್ತ ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿ ತಾಲೂಕಿನ ಶೆಟಗೇರಿಯ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದಲ್ಲಿ ಆಯೋಜಿಸಿದ್ದ ಸಂವಿಧಾನದ ಅರಿವಿನ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ, ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ ಬರೆದ ಸಂವಿಧಾನ ಓದು ಕೈಪಿಡಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ಮಾತನಾಡಿ, ಮಾನವೀಯತೆಯ ಸಂವಿಧಾನದ ಮೂಲ ಉದ್ದೇಶವಾಗಿದ್ದು, ದೇಶದ ಸಮಗ್ರತೆ, ಐಕ್ಯತೆಗಾಗಿ ಪ್ರಜಾಪ್ರಭುತ್ವನ್ನು ಉಳಿಸುವ ಕೆಲಸ ಪ್ರಜೆಗಳಿಂದ ಆಗಬೇಕಿದೆ. ವಿಧ್ವಂಸಕಾರಿ ಕೋಮುವಾದಿ ಶಕ್ತಿಗಳು ಸಂವಿಧಾನದ ಉದ್ದೇಶಗಳನ್ನು ಸಾಕಾರಗೊಳಿಸಲು ಅಡ್ಡಿಯಾಗುತ್ತಿದ್ದರೂ ದೇಶದ ನ್ಯಾಯಾಂಗ ವ್ಯವಸ್ಥೆ ಸಂವಿಧಾನದ ತತ್ವಗಳನ್ನು ರಕ್ಷಿಸುವ ಕೆಲಸ ಮಾಡುತ್ತಾ ಬಂದಿದೆ. ಇತಿಹಾಸವನ್ನು ತಿರುಚಲು ಯಾರಿಂದಲೂ ಸಾಧ್ಯವಿಲ್ಲ ಎಂದರು.ಲಯನ್ಸ್ ಕ್ಲಬ್ ಕರಾವಳಿ ಅಧ್ಯಕ್ಷ ದೇವಾನಂದ ಗಾಂವಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಂವಿಧಾನದ ಅರಿವು ಮೂಡಿಸುವ ಉದ್ದೇಶದಿಂದ ಇಂತಹ ಸಂಸ್ಥೆಗಳು ತಾಲೂಕಿನ ಪ್ರತಿಯೊಂದು ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಎಂಬ ಕೈಪಿಡಿಯನ್ನು ವಿತರಣೆ ಮಾಡುತ್ತಿದ್ದು, ಪ್ರತಿಯೊಬ್ಬರೂ ಅದನ್ನು ಓದಿ ಭಾರತೀಯ ಸಂವಿಧಾನದ ಮಹತ್ವ ಅರಿಯಬೇಕು ಎಂದರು. ಅಂಕೋಲಾ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಮನೋಹರ ಎಂ. ನ್ಯಾಯಾಧೀಶೆ ಅರ್ಪಿತಾ ಬೆಲ್ಲದ, ಸತ್ಯಾಗ್ರಹ ಸ್ಮಾರಕ ಶಿಕ್ಷಕ ಸಮಿತಿಯ ಅಧ್ಯಕ್ಷ ರಮಾನಂದ ನಾಯಕ, ಸಾಹಿತಿ ಶಾಂತಾರಾಮ ನಾಯಕ ಹಿಚ್ಚಡ, ಲಯನ್ಸ್ ಪ್ರಾದೇಶಿಕ ಚೇರ್‌ಮನ್ ಆರ್.ಎಚ್. ನಾಯಕ, ಜೋನ್ ಮುಖ್ಯಸ್ಥ ಅಶೋಕ ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ, ಸಹಯಾನ ಟ್ರಸ್ಟ್ ಸದಸ್ಯೆ ಯಮುನಾ ಗಾಂವಕರ, ಲಯನ್ಸ್ ಕಾರ್ಯದರ್ಶಿ ಮಂಜುನಾಥ ನಾಯಕ, ಖಜಾಂಚಿ ಗಿರಿಧರ ಆಚಾರ್ಯ ಇದ್ದರು. ಮಹಾಂತೇಶ ರೇವಡಿ ಸ್ವಾಗತಿಸಿದರು. ಗಣಪತಿ ನಾಯಕ, ಎಸ್.ಆರ್. ಉಡುಪಿ, ಸಂಜಯ ಅರುಂಧೇಕರ, ಕರುಣಾಕರ ನಾಯ್ಕ, ಶ್ರೀನಿವಾಸ ನಾಯಕ, ಕೇಶವಾನಂದ ನಾಯಕ, ಚಂದ್ರಶೇಖರ ಕಡೆಮನಿ ಪರಿಚಯಿಸಿದರು. ಸದಾನಂದ ಶೆಟ್ಟಿ ವಂದಿಸಿದರು. ಪ್ರಶಾಂತ ಮೂಡಲಮನೆ ನಿರ್ವಹಿಸಿದರು. ಚಂದ್ರಶೇಖರ ಕಡೆಮನಿ ಪರಿಚಯಿಸಿದರು. ಸದಾನಂದ ಶೆಟ್ಟಿ ವಂದಿಸಿದರು. ಪ್ರಶಾಂತ ಮೂಡಲಮನೆ ನಿರ್ವಹಿಸಿದರು.