ಮುಜಾಫರ್‌ ಅಸ್ಸಾದಿ ನಿಧನಕ್ಕೆ ಶ್ರದ್ಧಾಂಜಲಿ

| Published : Jan 13 2025, 12:47 AM IST

ಸಾರಾಂಶ

ಅಸ್ಸಾದಿ ವರದಿಯನ್ನು ಕೂಡಲೇ ಸರ್ಕಾರ ಜಾರಿಗೊಳಿಸಬೇಕು. ನೊಂದ ಆದಿವಾಸಿಗಳ ಬಾಳಲ್ಲಿ ಬೆಳಕಿನ ಕಿರಣ ಕಾಣಲು ಇವುಗಳ ತುರ್ತು ಜಾರಿ ಅನಿವಾರ್ಯ.

ಕನ್ನಡಪ್ರಭ ವಾರ್ತೆ ಹುಣಸೂರು

ಎಚ್‌.ಡಿ. ಕೋಟೆ ತಾಲೂಕು ಭೀಮನಹಳ್ಳಿ ಹಾಡಿಯ ಸಮುದಾಯ ಭವನದಲ್ಲಿ ಪ್ರೊ. ಮುಜಾಫರ್‌ ಅಸ್ಸಾದಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾಡಿನಿಂದ ಹೊರ ಹಾಕಿದ ಆದಿವಾಸಿಗಳ ನೋವನ್ನು ಅರಿತು ಪುನರ್ವಸತಿ ಕಲ್ಪಿಸಲು ಅಸ್ಸಾದಿ ಅವರು ಸಲ್ಲಿಸಿದ ವರದಿಯಿಂದ ಡೀಡ್‌ ಮತ್ತು ಬುಡುಕಟ್ಟು ಕೃಷಿಕರ ಸಂಘ ನ್ಯಾಯಾಲಯದಲ್ಲಿ ಹೂಡಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ತೀರ್ಪು ಜನಪರವಾಗಿ ಬರಲು ತುಂಬಾ ಉಪಯುಕ್ತವಾಗಿದೆ ಎಂದು ಗಣ್ಯರ ಸ್ಮರಿಸಿದರು.

ಆ ವರದಿಯು 3,418 ಆದಿವಾಸಿ ಕುಟುಂಬಗಳಿಗೆ ಆಶಾಕಿರಣವಾಯಿತು ಎಂದು ಸಂಘದ ಪ್ರಮುಖ ಭೀಮನಹಳ್ಳಿ ರಾಜಣ್ಣ ಹೇಳಿದರು.

ಡೀಡ್ ನಿರ್ದೇಶಕ ಡಾ. ಎಸ್. ಶ್ರೀಕಾಂತ್ ಮಾತನಾಡಿ, ಅಸ್ಸಾದಿ ವರದಿಯನ್ನು ಕೂಡಲೇ ಸರ್ಕಾರ ಜಾರಿಗೊಳಿಸಬೇಕು. ನೊಂದ ಆದಿವಾಸಿಗಳ ಬಾಳಲ್ಲಿ ಬೆಳಕಿನ ಕಿರಣ ಕಾಣಲು ಇವುಗಳ ತುರ್ತು ಜಾರಿ ಅನಿವಾರ್ಯ. ಕಾಡಿಂದ ಹೊರಹಾಕಿ ಅನ್ಯಾಯ ಮಾಡಿರುವ ಸರ್ಕಾರವೇ ಇದನ್ನು ಸರಿಪಡಿಸಬೇಕು ಎಂಬುದು ಸಾಮಾಜಿಕ ನ್ಯಾಯದ ಪ್ರತಿಪಾದಕ, ವರದಿಯ ಕರ್ತೃ ಅಸ್ಸಾದಿ ಹಾಗೂ ಸಮಿತಿ ಸದಸ್ಯೆ ಜಾಜಿ ಅವರ ಆಶಯವಾಗಿತ್ತು ಎಂದರು.

ಮಜನಕುಪ್ಪೆ ಹಾಡಿ ಪರಮೇಶ್ ಮಾತನಾಡಿ, ಒಮ್ಮೆ ಸಂಘದ ಸಭೆಯಲ್ಲಿ ಪಾಲ್ಗೊಂಡ ಅಸ್ಸಾದಿ ಅವರು, ಸರ್ಕಾರ ನ್ಯಾಯಲಯದ ತೀರ್ಪು ಜಾರಿಗೊಳಿಸಲು ತಡಮಾಡುತ್ತಿರುವುದು ದುಃಖ ವಾಗುತ್ತದೆ. ಇದಕ್ಕೆ ಆದಿವಾಸಿಗಳ ಹೋರಾಟ ಅತ್ಯಗತ್ಯ ಎಂದಿದ್ದಾಗಿ ಅವರು ಸ್ಮರಿಸಿದರು.

ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಅವರು ಪ್ರಾರ್ಥಿಸಿದರು.

ಸಂಘದ ಹಿರಿಯ ಮುಖಂಡರಾದ ಬಸವರಾಜು, ವಿಜಯಕುಮಾರ್, ರಘು, ನಿಸರ್ಗದ ನಿರ್ಮಲ, ವಿವಿಧ ಹಾಡಿಗಳ ಯಜಮಾನರು, ಮಹಿಳೆಯರು ಸಭೆಯಲ್ಲಿ ಪಾಲ್ಗೊಂಡಿದ್ದರು.