ಬಯಲು ಸೀಮೆ ಸಮಸ್ಯೆಅರಿತು ಜನರ ಸೇವೆಗೆ ಬಂದಿರುವೆ

| Published : Mar 25 2024, 12:46 AM IST

ಸಾರಾಂಶ

ಬಯಲು ಪ್ರದೇಶದ ಸಮಸ್ಯೆಗಳ ಅರಿವಿರುವ ನಾನು ಜನರ ಸೇವಕನಾಗಿ ಕೆಲಸ ಮಾಡಲು ಬಂದಿದ್ದು ಪಕ್ಷದ ಮುಖಂಡರು ಹಾಗು ಕಾರ್ಯಕರ್ತರ ಹೋರಾಟದಿಂದ ಗೆಲ್ಲುವುದಾಗಿ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಹೇಳಿದರು.

-ಕಡೂರು- ಬೀರೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಹಾಸನ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್

ಕನ್ನಡ ಪ್ರಭ ವಾರ್ತೆ,ಕಡೂರು

ಬಯಲು ಪ್ರದೇಶದ ಸಮಸ್ಯೆಗಳ ಅರಿವಿರುವ ನಾನು ಜನರ ಸೇವಕನಾಗಿ ಕೆಲಸ ಮಾಡಲು ಬಂದಿದ್ದು ಪಕ್ಷದ ಮುಖಂಡರು ಹಾಗು ಕಾರ್ಯಕರ್ತರ ಹೋರಾಟದಿಂದ ಗೆಲ್ಲುವುದಾಗಿ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಹೇಳಿದರು. ಕಡೂರಿನಲ್ಲಿ ಭಾನುವಾರ ಬೆಂಕಿ ಲಕ್ಷ್ಮಯ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಡೂರು- ಬೀರೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಈ ಚುನಾ‍‍ವಣೆ ಮಾಡು ಇಲ್ಲವೇ ಮಡಿ ಎಂಬ ಗಟ್ಟಿ ನಿಲುವಿನ ಚುನಾವಣೆ ಹಿಂದೆ ಕಾಂಗ್ರೆಸ್ ಬೆಂಬಲದಿಂದ ಸಂಸದರಾದವರು ಕಡೂರು ಕ್ಷೇತ್ರಕ್ಕೆ ಏನು ಮಾಡಿದರು ಎಷ್ಟುಬಾರಿ ಕಡೂರಿಗೆ ಬಂದು ಜನರ ಸಂಕಷ್ಟ ಕೇಳಿದ್ದಾರೆ ಎಂದು ಪ್ರಶ್ನಿಸಿದರು.

ಬಯಲು ಪ್ರದೇಶದ ಸಮಸ್ಯೆಗಳ ಅರಿವೇ ಇಲ್ಲದ ಸಂಸದರು ಬೇಕೆ ಎನ್ನುವ ಪ್ರಶ್ನೆ ಜನರಲ್ಲಿ ಮೂಡಬೇಕು. ನಾನು ಜನರ ಸೇವಕನಾಗಿ ಕೆಲಸ ಮಾಡಲು ಬಂದಿದ್ದೇನೆ. ನನ್ನ ತಾತ ಪುಟ್ಟಸ್ವಾಮಿ ಗೌಡರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಜನಹಿತಕ್ಕಾಗಿಯೇ ಇರುವ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ನಿರ್ಧಾರವನ್ನು ಕಾರ್ಯಕರ್ತರು ಮಾಡುವ ಮೂಲಕ ಜನರ ಆಶೀರ್ವಾದ ಸಿಗುವಂತಾಗಬೇಕು ಎಂದು ಮನವಿ ಮಾಡಿದರು. ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಕೆ.ಎನ್. ಶಿವಲಿಂಗೇಗೌಡ ಮಾತನಾಡಿ, ನಾನು ಜೆಡಿಎಸ್ ನಾಯಕರ ಆಡಳಿತ ಧೋರಣೆ ವಿರುದ್ಧ ಸಿಡಿದೆದ್ದು ಕಾಂಗ್ರೆಸ್ ಸೇರಿದೆ. ನನ್ನನ್ನು ಸೋಲಿಸಲು ಅವರ ಇಡೀ ಕುಟುಂಬವೇ ನಿಂತರೂ ಅರಸೀಕೆರೆ ಜನ ಕೈಬಿಡಲಿಲ್ಲ. ದೇವೇಗೌಡರು ಪ್ರಧಾನಿ ಆಗಿದ್ದಾಗ ಕೋಮುವಾದಿ ಪಕ್ಷಕ್ಕೆ ಬೆಂಬಲಿಸಲ್ಲ ಎಂದು ವಾಜಪೇಯಿಯವರಿಗೆ ಹೇಳಿದ್ದರು. ಇದೀಗ ಯಾವ ಪುರುಷಾರ್ಥಕ್ಕೆ ಬಿಜೆಪಿ ಜೊತೆ ಅಪವಿತ್ರ ಮೈತ್ರಿ ಮಾಡಿದ್ದಾರೆ. ಆ ಪಕ್ಷದ ಹಿಂದಿನ ಧೋರಣೆಗಳ ಜೊತೆ ಪ್ರಸ್ತುತ ನಡೆಯನ್ನು ವಿಮರ್ಶಿಸುವುದು ಜನರ ಎದುರಿಗಿದೆ. ಹಾಸನ ಜಿಲ್ಲೆ ರಾಜಕಾರಣವನ್ನೇ ಬದಲಾಯಿಸುವ ಅವಕಾಶ ಈಗ ಎಲ್ಲರ ಮುಂದಿದೆ. ಸಿದ್ದರಾಮಯ್ಯ ನೇತೃತ್ವದ ನಮ್ಮ ಸರಕಾರ ಆಡಳಿತ, ಜನಪರ ಯೋಜನೆಗಳನ್ನು ಜನತೆ ಒಪ್ಪಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಬೇಕು ಎಂದು ಕೋರಿದರು.

ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ರನ್ನು ಗೆಲ್ಲಿಸಿ ನಾವು ತಪ್ಪು ಮಾಡಿದೆವು. ಅಂದು ಪ್ರತಿ ಕಾಂಗ್ರೆಸ್ ಕಾರ್ಯಕರ್ತರು ಪ್ರಾಮಾಣಿಕವಾಗಿ ದುಡಿದು ಗೆಲ್ಲಿಸಿದರು. ನಂತರ ಅವರು ಕ್ಷೇತ್ರಕ್ಕೇನು ಮಾಡಿದರು? ಎಷ್ಟು ಬಾರಿ ಕ್ಷೇತ್ರಕ್ಕೆ ಬಂದರು. ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೊನ್ನೆ ಕಡೂರು ತಾಪಂ ಸಭಾಂಗಣದಲ್ಲಿ ಒಂದು ಬಾರಿ ಕೆಡಿಪಿ ಸಭೆ ನಡೆಸಿದ್ದೇ ಸಾಧನೆ. ಇಂತಹವರು ನಮಗೆ ಬೇಕೆ ಎಂದ ಅವರು ಕುಟುಂಬ ರಾಜಕಾರಣ ಎದುರಿಸಲು ಶ್ರೇಯಸ್ ಪಟೇಲ್ ರನ್ನು ಗೆಲ್ಲಿಸಿ ಬಯಲು ಸೀಮೆಯ ಸಮಸ್ಯೆಗಳನ್ನು ಲೋಕಸಭೆಯಲ್ಲಿ ಪ್ರಸ್ತುತಪಡಿಸುವ ಸಂಸದರನ್ನು ಪಡೆಯೋಣ ಎಂದು ಕರೆ ನೀಡಿದರು.

ಮುಖಂಡ ಬೀರೂರು ದೇವರಾಜ್, ಎಐಸಿಸಿ ಬಿ.ಎಂ.ಸಂದೀಪ್, ಚಿಕ್ಕಮಗಳೂರು-ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಇ.ಎಚ್.ಲಕ್ಷ್ಮಣ್, ಕಾಂಗ್ರೆಸ್ ಮುಖಂಡರಾದ ಭಂಡಾರಿ ಶ್ರೀನಿವಾಸ್, ತೋಟದಮನೆ ಮೋಹನ್, ಈರಳ್ಳಿ ರಮೇಶ್, ಎಂ.ಸಿ.ಶಿವಾನಂದಸ್ವಾಮಿ,ಎಂ.ಎಚ್.ಚಂದ್ರಪ್ಪ, ಎನ್.ಬಷೀರ್ ಸಾಬ್, ಗೋಪಾಲ್, ಮಹೇಶ್, ಶರತ್ ಕೃಷ್ಣಮೂರ್ತಿ, ಕೆ.ಜಿ.ಶ್ರೀನಿವಾಸ್ ಮೂರ್ತಿ, ಅರಕಲಗೂಡು ಪ್ರಸನ್ನ, ಎಂ. ರಾಜಪ್ಪ, ಷಣ್ಮುಖ ಭೋವಿ, ಸರಸ್ವತೀಪುರ ಗ್ರಾಪಂ ಅಧ್ಯಕ್ಷ ಕಂಸಾಗರ ಸೋಮಶೇಖರ್, ಸಾಣೇಹಳ್ಳಿ ಆರಾಧ್ಯ, ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್, ಇಮ್ರಾನ್ ಖಾನ್, ಅಭಿದ್ ಪಾಶಾ, ಸಾವಿರಾರು ಕಾರ್ಯರ್ತರು ಇದ್ದರು.

.--ಬಾಕ್ಸ್ ಸುದ್ದಿ-.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮನ್ನು ಆರ್ಥಿಕ ತಜ್ಞ ಎಂದು ವ್ಯಂಗ್ಯ ಮಾಡಿದ್ದಾರೆ. ಅವರ ಟೀಕೆಗೆ ಉತ್ತರಿಸುವುಕ್ಕಿಂತ 13 ಬಾರಿ ಬಜೆಟ್ ಮೇಲಿನ ಭಾಷಣ ಮಾಡಿದ್ದೇನೆ. ಇದರಲ್ಲಿ ಉತ್ಪ್ರೇಕ್ಷೆ ಏನಿಲ್ಲ. ನಾನು ಅಧ್ಯಯನ ಮಾಡದೆ ಮಾತನಾಡಲ್ಲ. ಕರ್ನಾಟಕದ ಜನತೆ ನನ್ನ ಮಾತುಗಳನ್ನು ಒಪ್ಪಿದ್ದಾರೆ. ಕುಮಾರಸ್ವಾಮಿ ಒಪ್ಪಿದರೇನು, ಬಿಟ್ಟರೇನು ರಾಜ್ಯಗಳು ಸಂಕಷ್ಟಕ್ಕೆ ಸಿಲುಕಿದರೆ ಕೇಂದ್ರ ಸರ್ಕಾರ ನೆರವು ನೀಡಬೇಕು. ಆದರೆ ಸಿದ್ದರಾಮಯ್ಯನವರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕೇಂದ್ರದ ಬಿಜೆಪಿ ಯಾವ ನೆರವನ್ನೂ ರಾಜ್ಯಕ್ಕೆ ನೀಡಲಿಲ್ಲ. ಹಾಗಾಗಿ ರಾಜ್ಯ ಸುಪ್ರೀಂ ಕೋರ್ಟಿನ ಮೊರೆ ಹೋಗಿದೆ. ಈ ರೀತಿ ಕೇಸ್ ಹಾಕಿಸಿಕೊಳ್ಳಲು ನಾಚಿಕೆಯಾಗುವುದಿಲ್ಲವೆ ಎಂದು ಶಾಸಕ ಶಿವಲಿಂಗೇಗೌಡರು ಹರಿಹಾಯ್ದರು.

ಕೊಬ್ಬರಿ ಖರೀದಿಯಲ್ಲೂ ರಾಜಕೀಯ, ಭಧ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಕೊಡುತ್ತೇವೆಂದರೂ ಕೊಡಲಿಲ್ಲ. ಮತ್ತೆ ಯಾವ ಮುಖವಿಟ್ಟುಕೊಂಡು ಇಲ್ಲಿಗೆ ಬರುತ್ತೀರಿ ಎಂದು ಜೆಡಿಎಸ್ ಮುಖಂಡರನ್ನು ಮೂದಲಿಸಿದರು.

24ಕೆಕೆಡಿಯು1ಎ.ಕಡೂರು ಪಟ್ಟಣದ ಬೆಂಕಿ ಲಕ್ಷ್ಮಯ್ಯ ಸಬಾಂಗಣದಲ್ಲಿ ನಡೆದ ಕಡೂರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಶಾಸಕ ಶಿವ ಲಿಂಗೇಗೌಡ ಉದ್ಘಾಟಿಸಿದರು.

24ಕೆಕೆಡಿಯು1ಎ.

ಬೀರೂರಿನ ಜೆಡಿಎಸ್ ಪಕ್ಷಧ ಮುಖಂಡ ಮುಬಾರಕ್ ಸೇರಿದಂತೆ ಕಡೂರು ಕ್ಷೇತ್ರದ ಬಹಳಷ್ಟು ಜೆಡಿಎಸ್ ಪಕ್ಷದ ಕಾರ್ಯಕರ್ತರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದರು.ಶಾಸಕರಾದ ಕೆ.ಎಸ್.ಆನಂದ್ ಮತ್ತು ಶಿವಲಿಂಗೇಗೌಡರು ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು.