ಸಾರಾಂಶ
ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆಯಲ್ಲಿ ಕೃಷ್ಣರ ಒಡನಾಟ ಮೆಲುಕು
ಕನ್ನಡಪ್ರಭ ವಾರ್ತೆ ಹನೂರುಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಹಾಗೂ ನಮ್ಮ ಕುಟುಂಬದ ನಡುವೆ ಅವಿನಾಭಾವ ಸಂಬಂಧವಿತ್ತು. ನಾನು ಮೂರು ಬಾರಿ ಶಾಸಕನಾಗಲು ಅವರ ಮಾರ್ಗದರ್ಶನವೇ ಕಾರಣ ಎಂದು ಮಾಜಿ ಶಾಸಕ ಆರ್.ನರೇಂದ್ರ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ವಿಧಿವಶರಾದ ಹಿನ್ನೆಲೆ ಹನೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.ಎಸ್.ಎಂ.ಕೃಷ್ಣರವರು ರಾಜ್ಯ ಕಂಡ ಮುತ್ಸದಿ, ಸಜ್ಜನ ರಾಜಕಾರಣಿ, ಮುಖ್ಯಮಂತ್ರಿಯಾಗಿ ಬೆಂಗಳೂರು ಐಟಿಬಿಟಿ ನಗರವಾಗಿ ಇಂದು ವಿಶ್ವ ಭೂಪಟದಲ್ಲಿ ಪ್ರಜ್ವಲಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರು ಮುಖ್ಯಮಂತ್ರಿಯಾಗಿದ್ದಾಗ ಜನಪರ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿ ದಿಟ್ಟ ಆಡಳಿತಕ್ಕೆ ಮುನ್ನುಡಿ ಬರೆದಿದ್ದರು, ತೆರಿಗೆ ಸುಧಾರಣಾ ಆಯೋಗ, ಆಡಳಿತ ಸುಧಾರಣಾ ಆಯೋಗ ಬಂಡವಾಳ ಹೂಡಿಕೆದಾರರ ಜಾಗತಿಕ ಸಮಾವೇಶ, ಐಟಿಬಿಟಿ ಉದ್ಯಮಕ್ಕೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಸತಿ ನಿರ್ಮಾಣದಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರು ಎಂದು ಹೇಳಿದರು.
ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದಲ್ಲಿ ಭೀಕರ ಬರಗಾಲ, ಡಾ. ರಾಜಕುಮಾರ್ ಅಪಹರಣ, ಮಾಜಿ ಸಚಿವ ಎಚ್.ನಾಗಪ್ಪ ಅಪಹರಣ ಕಾವೇರಿ ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸಿ ಉತ್ತಮ ಆಡಳಿತ ನಡೆಸಿದ್ದರು. ಅಂದಿನ ಕಾಲದಲ್ಲಿಯೇ ವಿದ್ಯಾರ್ಥಿಗಳು ಹಸಿವಿನಿಂದ ಬಳಲಬಾರದು ಎಂಬ ದೂರ ದೃಷ್ಟಿಯಿಂದ ಮಧ್ಯಾಹ್ನದ ಬಿಸಿಯೂಟ, ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಯಶಸ್ವಿನಿ ವಿಮಾ ಯೋಜನೆ, ಸ್ತ್ರೀ ಶಕ್ತಿ ಯೋಜನೆ ಇಂದಿಗೂ ಜನ ಮಾನಸದಲ್ಲಿ ಉಳಿದಿದೆ ಎಂದು ಸ್ಮರಿಸಿಕೊಂಡರು.ಮುಖ್ಯಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ, ಕೇಂದ್ರ ವಿದೇಶಾಂಗ ಸಚಿವರಾಗಿ, ಮಹಾರಾಷ್ಟ್ರ ರಾಜ್ಯಪಾಲರಾಗಿ 40 ವರ್ಷಗಳ ಕಾಲ ಸತತ ಆಡಳಿತ ನಡೆಸಿ ಜನ ಪರ ಕಾರ್ಯಕ್ರಮಗಳಿಗೆ ಒತ್ತು ನೀಡಿದ್ದರು. ಎಂತಹ ಸಂದರ್ಭದಲ್ಲಿಯೂ ತಾಳ್ಮೆ ಕಳೆದುಕೊಳ್ಳದೆ ಪ್ರತಿಯೊಬ್ಬರಿಗೂ ಎಚ್ಚರಿಕೆಯಿಂದ ಉತ್ತರ ನೀಡುತ್ತಿದ್ದರು ಇವರ ಮಾರ್ಗದರ್ಶನ ಇಂದಿನ ಯುವ ಪೀಳಿಗೆಗೆ ಅನುಕರಣೆಯವಾಗಿದೆ ಎಂದು ತಿಳಿಸಿದರು.
ಹನೂರು ವಿಧಾನಸಭಾ ಕ್ಷೇತ್ರದ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾವೇರಿ ಕುಡಿಯುವ ನೀರಿನ ಯೋಜನೆ ತಂದು ಅನುಕೂಲ ಕಲ್ಪಿಸಿದ್ದರು. ಇದಲ್ಲದೆ ರಾಜಗೋಪುರ ನಿರ್ಮಾಣ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.ಜಿಪಂ ಮಾಜಿ ಸದಸ್ಯ ಬಸವರಾಜು ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರಿಗೂ ನಮ್ಮ ನಾಯಕರಾದ ದಿ.ರಾಜುಗೌಡರ ನಡುವೆ ಉತ್ತಮ ಸಂಬಂಧವಿತ್ತು. ಈ ನಿಟ್ಟಿನಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಯಾವುದೇ ಕೆಲಸ ಕಾರ್ಯಗಳನ್ನು ತಡ ಮಾಡದೆ ಮಂಜೂರು ಮಾಡಿಕೊಡುತ್ತಿದ್ದರು. ಇವರ ಕಾಲದಲ್ಲಿ ಹನೂರು ವಿಧಾನಸಭಾ ಕ್ಷೇತ್ರಕ್ಕೆ 16 ಸಾವಿರ ಮನೆಗಳನ್ನು ನಿರ್ಮಾಣ ಮಾಡುವ ಮೂಲಕ ಇತಿಹಾಸ ಸೃಷ್ಟಿ ಮಾಡಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರು ನಿಧನರಾಗಿದ್ದ ಹಿನ್ನೆಲೆ ಇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಎರಡು ನಿಮಿಷಗಳ ಕಾಲ ಮೌನಚರಣೆ ಮಾಡಲಾಯಿತು.ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಸಿ.ಮಾದೇಶ್, ಪಟ್ಟಣ ಪಂಚಾಯಿತಿ ಸದಸ್ಯ ಗಿರೀಶ್, ಹರೀಶ್, ಬಸವರಾಜು, ಸುದೇಶ್, ನವೀನ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ನಾಗೇಂದ್ರ, ಟಿಎಪಿಸಿಎಂಎಸ್ ಸದಸ್ಯ ಚಿಕ್ಕಮಾದ ನಾಯಕ, ಮುಖಂಡರಾದ ಲಿಂಗರಾಜು, ಮಾದೇಶ್, ರವಿ ರಾಜು ಸೋಮಶೇಖರ್, ಗೋವಿಂದೇಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ಮಂಜೇಶ್, ಅರುಣ್ ಕುಮಾರ್, ರಾಮಲಿಂಗ ಸೇರಿ ಇತರರು ಹಾಜರಿದ್ದರು.