ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬಂಡಾಯ ಸಾಹಿತ್ಯ ಚಳವಳಿಯ ಇತಿಹಾಸವನ್ನು ದಾಖಲಿಸುವ ಹಾಗೂ ಹೊಸ ತಲೆಮಾರಿಗೆ ಆಕರ ಗ್ರಂಥವಾಗುವ ನಿಟ್ಟಿನಲ್ಲಿ ಕಥೆ, ಕವಿತೆ, ವಿಮರ್ಶೆ ಹಾಗೂ ವೈಚಾರಿಕ ಬರಹಗಳನ್ನು ಒಳಗೊಂಡ ಪ್ರತ್ಯೇಕ ಬಂಡಾಯ ಸಾಹಿತ್ಯ ಸಂಪುಟಗಳನ್ನು ಪ್ರಕಟಿಸಲಾಗುವುದು ಎಂದು ಹಿರಿಯ ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಡಾ. ಬರಗೂರು ರಾಮಚಂದ್ರಪ್ಪ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಬಂಡಾಯ ಸಾಹಿತ್ಯ: ಹೊಸ ತಲೆಮಾರು’ ಅಭಿಯಾನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣ ಹಾಗೂ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಬಂಡಾಯ ಸಾಹಿತ್ಯದ ಚರಿತ್ರೆಯಲ್ಲಿ ವಿವಿಧ ಕಾಲಘಟ್ಟದ ಬರವಣಿಗೆಗಳನ್ನು ಒಂದೇ ಕಡೆ ಡಾಕ್ಯುಮೆಂಟ್ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಥೆಗಳು, ಕವಿತೆಗಳು, ವಿಮರ್ಶೆ ಹಾಗೂ ವೈಚಾರಿಕ ಲೇಖನಗಳನ್ನೊಳಗೊಂಡ ವಿಶಿಷ್ಟ ಸಂಪುಟಗಳನ್ನು ತರುವ ಯೋಜನೆಯ ಬೀಜರೂಪ ಚಿತ್ರದುರ್ಗದಲ್ಲೇ ಮೊಳಕೆಯೊಡೆದಿದೆ. ಈ ಐತಿಹಾಸಿಕ ನಿರ್ಧಾರವನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಬಂಡಾಯ ಸಾಹಿತ್ಯ ಸಂಘಟನೆಯ ಕಾರ್ಯಕ್ರಮಗಳಲ್ಲಿ ಹಿರಿಯರು ಮಾರ್ಗದರ್ಶಕರಾಗಿ ಇರಬೇಕೇ ಹೊರತು, ವಿಷಯ ಮಂಡನೆ ಮತ್ತು ವೇದಿಕೆಯ ಮುಂಚೂಣಿಯಲ್ಲಿ ಹೊಸ ತಲೆಮಾರಿನವರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂಬ ನಿರ್ಣಾಯಕ ತೀರ್ಮಾನವನ್ನು ನಾವು ಬೆಂಗಳೂರಿನ ಸಭೆಯಲ್ಲಿ ತೆಗೆದುಕೊಂಡಿದ್ದೆವು. ಅದರಂತೆ ಈ ಯುವಕರಲ್ಲಿ ಬರೆಯುವ ಉತ್ಸಾಹ ಮೂಡಿಸಬೇಕಿದೆ. ಚೀನಾದಲ್ಲಿ ಮಾವೋತ್ಸೆ ತುಂಗ್ ಅವರ ಚಳವಳಿ ಹುಟ್ಟಿದ್ದು ಕೇವಲ ನಾಲ್ಕು ಜನ ಲೈಬ್ರರಿಯಲ್ಲಿ ಕುಳಿತು ಮಾತನಾಡಿದ್ದರಿಂದಲೇ ಎಂಬುದನ್ನು ನೆನಪಿಟ್ಟುಕೊಂಡು ನಾವು ನಿರಾಶಾವಾದಿಗಳಾಗದೆ ಕೆಲಸ ಮಾಡಬೇಕು ಎಂದರು.ಬಂಡಾಯ ಸಾಹಿತ್ಯ ಸಂಘಟನೆ ಕೇವಲ ಸಾಹಿತ್ಯಕ್ಕೆ ಸೀಮಿತವಾಗದೆ, ರಾಜ್ಯದ ಪ್ರಮುಖ ಜನಚಳವಳಿಗಳಾದ ರೈತ ಚಳವಳಿ, ದಲಿತ ಚಳವಳಿ, ಕಾರ್ಮಿಕ ಮತ್ತು ಮಹಿಳಾ ಚಳವಳಿಗಳ ಜೊತೆ ಸಹಯಾತ್ರಿಯಾಗಿ ಕೆಲಸ ಮಾಡಿದೆ. ಈ ಚಳವಳಿಗಳೇ ನಮ್ಮ ಮನಸ್ಸನ್ನು ಹಸನುಗೊಳಿಸಿ ಬೆಳೆಸಿವೆ. ಸಾಹಿತ್ಯ ಕ್ಷೇತ್ರದಲ್ಲಿ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ವಿಸ್ತರಿಸುವ ಆಶಯದೊಂದಿಗೆ 1979ರಲ್ಲಿ ಜನ್ಮತಾಳಿದ ಈ ಸಂಘಟನೆ, ಇವತ್ತಿನವರೆಗೆ ಅಂದರೆ ಕಳೆದ 47 ವರ್ಷಗಳಿಂದ ಒಡೆಯದೇ, ಎಲ್ಲರನ್ನೂ ಒಳಗೊಳ್ಳುತ್ತ ಜೀವಂತವಾಗಿ ಮುನ್ನಡೆದಿರುವುದು ಹೆಮ್ಮೆಯ ವಿಷಯ ಎಂದರು.
ಅಕ್ಷರ ಮತ್ತು ಬರವಣಿಗೆ ಎನ್ನುವುದು ಕೇವಲ ಶಿಷ್ಟ ವರ್ಗದ ಸೊತ್ತಲ್ಲ, ನಮ್ಮ ಜನಪದರು ಮೌಖಿಕ ಅಕ್ಷರಸ್ಥರಾಗಿದ್ದರು. ಇಂದು ಸಮಾಜದಲ್ಲಿ ರಸ್ತೆಗಳನ್ನು ಸ್ವಚ್ಛಗೊಳಿಸುವ ‘ಸ್ವಚ್ಛ ಭಾರತ’ಕ್ಕಿಂತಲೂ ಮನಸ್ಸುಗಳನ್ನು ಶುದ್ಧೀಕರಿಸುವ ‘ಭಾವ ಭಾರತ’ ಸ್ವಚ್ಛವಾಗಬೇಕಾದ ಅಗತ್ಯತೆ ಹೆಚ್ಚಾಗಿದೆ ಎಂದು ಹೇಳಿದರು.
ಸೃಜನಶೀಲತೆ ಎಂಬುದು ದುಷ್ಟ ಸರ್ಕಾರಗಳಿದ್ದಾಗ ಮೌನವಾಗಿರದೆ, ಸಮೀಪ ಮತ್ತು ದೂರದ ಸಂಬಂಧಗಳನ್ನು ಏಕಕಾಲಕ್ಕೆ ಕಾಯ್ದುಕೊಳ್ಳುತ್ತ ಪ್ರಭುತ್ವದ ಮಿತಿಗಳನ್ನು ಬೆತ್ತಲೆ ಮಾಡಬೇಕು. ಇತಿಹಾಸದುದ್ದಕ್ಕೂ ಕನ್ನಡ ಸಾಹಿತ್ಯ ಈ ಕೆಲಸವನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿದೆ ಎಂದರು.
ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಸಂಚಾಲಕ ಡಾ.ಜೆ.ಕರಿಯಪ್ಪ ಮಾಳಿಗೆ, ಯಾದವರೆಡ್ಡಿ, ಅರುಣ್ ಜೋಳದ ಕೂಡ್ಲಿಗಿ, ಚಂದ್ರಶೇಖರ ತಾಳ್ಯ, ಜಿ.ಕೆ.ಪ್ರೇಮ, ಅಹೋಬಲಪತಿ, ಆರ್.ಜಿ.ಹಳ್ಳಿ ನಾಗರಾಜ್, ಹೆಂಜಾರಪ್ಪ, ನವೀನ್ ಮಂಡಗದ್ದೆ, ವಿಜಯಕುಮಾರ್, ಸಿ.ಶಿವಲಿಂಗಪ್ಪ, ಮಲ್ಲಿಕಾರ್ಜುನ ಕಡಕೋಳ ಇದ್ದರು.