ಸಾರಾಂಶ
. ಕರಾವಳಿಗರನ್ನು ಪೂರ್ತಿ ಕಡೆಗಣಿಸಿರುವುದರಿಂದ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ. ಮೇ 15ರಂದು ಮೈಸೂರಿನಲ್ಲಿ ನಾಮಪತ್ರ ಸಲ್ಲಿಸುವುದಾಗಿ ಮಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಮಾಜಿ ಸದಸ್ಯ ಎಸ್.ಆರ್.ಹರೀಶ್ ಆಚಾರ್ಯ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಜೂನ್ 3 ರಂದು ನಡೆಯುವ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸುವುದಾಗಿ ಬಿಜೆಪಿ ಟಿಕೆಟ್ ವಂಚಿತ ಉಡುಪಿ ಮಾಜಿ ಶಾಸಕ ಬಿಜೆಪಿಯ ರಘುಪತಿ ಭಟ್ ಘೋಷಿಸಿರುವಂತೆಯೇ ಇನ್ನೊಂದೆಡೆ ಬಿಜೆಪಿ-ಜೆಡಿಎಸ್ ಮೈತ್ರಿಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ವಂಚಿತ ಎಸ್.ಆರ್. ಹರೀಶ್ ಆಚಾರ್ಯ ಕೂಡ ಪಕ್ಷೇತರ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದಾರೆ. ಇದರೊಂದಿಗೆ ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯ ಸ್ಪರ್ಧೆಯ ಬಿಸಿ ತಟ್ಟಿದೆ.ಈ ಬಾರಿ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕರಾವಳಿ ಜಿಲ್ಲೆಯನ್ನು ಬಿಜೆಪಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳು ಸಂಪೂರ್ಣ ನಿರ್ಲಕ್ಷಿಸಿವೆ. ಕರಾವಳಿ ಜಿಲ್ಲೆಯ ಯಾರೊಬ್ಬರಿಗೂ ಟಿಕೆಟ್ ನೀಡಿಲ್ಲ. ನಾನು ಬಿಜೆಪಿಯಿಂದ ಸ್ಪರ್ಧೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಟಿಕೆಟ್ ಮೈತ್ರಿ ಪಕ್ಷಕ್ಕೆ ನೀಡಲಾಗಿದೆ. ಕರಾವಳಿಗರನ್ನು ಪೂರ್ತಿ ಕಡೆಗಣಿಸಿರುವುದರಿಂದ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ. ಮೇ 15ರಂದು ಮೈಸೂರಿನಲ್ಲಿ ನಾಮಪತ್ರ ಸಲ್ಲಿಸುವುದಾಗಿ ಮಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಮಾಜಿ ಸದಸ್ಯ ಎಸ್.ಆರ್.ಹರೀಶ್ ಆಚಾರ್ಯ ಹೇಳಿದ್ದಾರೆ.
ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ಕರೆದು ತನ್ನ ಸ್ಪರ್ಧೆಯ ವಿಚಾರ ತಿಳಿಸಿದ ಅವರು, ಕರಾವಳಿ ಭಾಗದಲ್ಲಿ ಶಿಕ್ಷಕರು ಮತ್ತು ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರಸಕ್ತ ನೋಂದಾಯಿತ 21,600 ಶಿಕ್ಷಕರ ಮತದಾರರರಲ್ಲಿ 12,600 ಶಿಕ್ಷಕ ಮತದಾರರು ಅವಿಭಜಿತ ದ.ಕ.ಜಿಲ್ಲೆಯಲ್ಲೇ ಇದ್ದಾರೆ. ಇದರಲ್ಲಿ 8 ಸಾವಿರದಷ್ಟು ಮತದಾರರು ದ.ಕ.ಜಿಲ್ಲೆಯವರು ಎಂದು ಹೇಳಿದರು. ಓರ್ವ ಅಭ್ಯರ್ಥಿಯಾಗಿ ಸ್ಪರ್ಧೆ: ನಾನು ಸಹಕಾರ ಭಾರತಿ ಸಂಘಟನೆಯ ಹಿನ್ನೆಲೆಯಿಂದ ಬಂದವನು. ನಾನು ಬಂಡಾಯ, ಪಕ್ಷೇತರನಾಗಿ ಸ್ಪರ್ಧಿಸುತ್ತಿಲ್ಲ.ಬದಲಾಗಿ ಓರ್ವ ‘ಅಭ್ಯರ್ಥಿ’ಯಾಗಿ ಸ್ಪರ್ಧಿಸುತ್ತಿದ್ದೇನೆ. ನನ್ನ ಸ್ಪರ್ಧೆಯ ಕುರಿತು ಬಿಜೆಪಿ ಹಿರಿಯ ಮುಖಂಡರ ಬಳಿ ಈ ಹಿಂದೆಯೇ ಹೇಳಿದ್ದೆ ಎಂದು ಅವರು ಹೇಳಿದರು.
ಈ ಕ್ಷೇತ್ರದಲ್ಲಿ ಆಯ್ಕೆಯಾದವರಿಗೆ ಶಿಕ್ಷಕರ ಸಮಸ್ಯೆಯ ಬಗ್ಗೆ ಅರಿವು ಇಲ್ಲ. ಶಿಕ್ಷಕರ ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದುಕೊಂಡಿದೆ ಎಂದು ಆಚಾರ್ಯ ಹೇಳಿದರು.ಡಾ. ರಾಜಮೋಹನ್ ರಾವ್, ಜ್ಯೋತಿ ರೈ, ನಿತೀಶ್ ಸಾಲ್ಯಾನ್, ಜಿತಿನ್ ಜಿಜೋ ಇದ್ದರು.