ರೀಬಿಲ್ಡ್ ಕೊಡಗು ಸಂಸ್ಥೆ 6ನೇ ವಾರ್ಷಿಕೋತ್ಸವ

| Published : Oct 26 2024, 01:06 AM IST / Updated: Oct 26 2024, 01:07 AM IST

ಸಾರಾಂಶ

ಮಡಿಕೇರಿ ನಗರದ ರೋಟರಿ ಸಭಾಂಗಣದಲ್ಲಿ ರೀಬಿಲ್ಡ್ ಕೊಡಗು ಸಂಸ್ಥೆ 6ನೇ ವಾರ್ಷಿಕೋತ್ಸವ ನಡೆಯಿತು. ಕರ್ನಲ್ ಕೆ.ಸಿ.ಸುಬ್ಬಯ್ಯ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ವಿದ್ಯಾರ್ಥಿಗಳು ಯಾವುದೇ ಕಾರ್ಯವನ್ನು ದೃಢ ವಿಶ್ವಾಸದಿಂದ ಮಾಡಬೇಕು ಮತ್ತು ಕಂಡ ಕನಸನ್ನು ನನಸು ಮಾಡಿಕೊಳ್ಳಲು ಶ್ರಮವಹಿಸಬೇಕು. ಆಗ ಮಾತ್ರ ಜೀವನದಲ್ಲಿ ಗೆಲವು ಸಾಧಿಸಲು ಸಾಧ್ಯ ಎಂದು ಕರ್ನಲ್ ಕೆ.ಸಿ.ಸುಬ್ಬಯ್ಯ ಅಭಿಪ್ರಾಯಪಟ್ಟಿದ್ದಾರೆ.

ನಗರದ ರೋಟರಿ ಸಭಾಂಗಣದಲ್ಲಿ ನಡೆದ ರೀಬಿಲ್ಡ್ ಕೊಡಗು ಸಂಸ್ಥೆ 6ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ರೀಬಿಲ್ಡ್ ಕೊಡಗು ಸಂಸ್ಥೆ ಜನರ ಸಮಸ್ಯೆಗಳನ್ನು ಅರಿತು ಅವರ ಅವಶ್ಯಕತೆಗಳಿಗೆ ಸ್ಪಂದಿಸಿರುವುದು ಶ್ಲಾಘನೀಯ. ಅನೇಕ ಸಂದರ್ಭಗಳಲ್ಲಿ ಸಂಸ್ಥೆಯ ಸಂಸ್ಥಾಪಕ ಕೆ.ಎ.ಕುಶಾಲಪ್ಪ ಕೊಡಗಿನ ಜನತೆಗೆ ಏಕಾಂಗಿಯಾಗಿ ಪರಿಹಾರವನ್ನು ಒದಗಿಸಿದ್ದಾರೆ. ಸರ್ಕಾರಿ ಶಾಲೆಯ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದಾರೆ. ಇವರ ಸಮಾಜಮುಖಿ ಕಾರ್ಯ ಇತರರಿಗೆ ಮಾದರಿ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ರೀಬಿಲ್ಡ್ ಕೊಡಗು ಸಂಸ್ಥೆಯ ಸಂಸ್ಥಾಪಕ ಕೆ.ಎ.ಕುಶಾಲಪ್ಪ (ಕೇಳಪಂಡ), ವಿದ್ಯಾರ್ಥಿಗಳು ಜೀವನದಲ್ಲಿ ಎಷ್ಟೇ ದೊಡ್ಡ ಸಾಧನೆ ಮಾಡಿದರೂ ತಾವು ಕಲಿತ ಶಾಲೆ, ಶಿಕ್ಷಕರು ಹಾಗೂ ಉತ್ತಮ ಕೆಲಸಕ್ಕೆ ಪ್ರೇರಿಪಿಸದವರನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ 2018-19ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ರೀಬಿಲ್ಡ್ ಕೊಡಗು ಸಂಸ್ಥೆ ಹುಟ್ಟಿಕೊಂಡಿದ್ದು, ಸಂಸ್ಥೆಯ ಮೂಲಕ ನಿರಂತರವಾಗಿ ಸಮಾಜ ಸೇವೆ ನಡೆಸಿಕೊಂಡು ಬರಲಾಗುತ್ತಿದೆ. ಸಂಸ್ಥೆಗೆ ಪ್ರಪಂಚದಾದ್ಯಂತದ ಆತ್ಮೀಯರು ಕೊಡುಗೆ ನೀಡಿದ್ದು, ಇದರಿಂದ ಪ್ರವಾಹ ಪೀಡಿತರಿಗೆ ತಾತ್ಕಾಲಿಕ ಆಶ್ರಯ, ಆಹಾರ, ದಿನಸಿ, ಮಕ್ಕಳಿಗೆ ಶೈಕ್ಷಣಿಕ ಸಾಮಾಗ್ರಿಗಳು ಹಾಗೂ ಮೂಲಭೂತ ಸೌಲಭ್ಯಗಳನ್ನು ನೀಡಲು ಸಾಧ್ಯವಾಯಿತು ಎಂದರು.

ರೋಟರಿ ಅಧ್ಯಕ್ಷ ಸುದಯ್ ನಾಣಯ್ಯ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹಣಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಇದರಿಂದ ಸಂಬಂಧಗಳಿಗೆ, ಜ್ಞಾನಕ್ಕೆ ಬೆಲೆಯೇ ಇಲ್ಲದಂತಾಗಿದೆ. ಮೊದಲು ವಯಸ್ಸು, ಸಂಬಂಧ, ಜ್ಞಾನ ನಂತರ ಹಣಕ್ಕೆ ಬೆಲೆ ನೀಡಬೇಕು, ಆಗ ಬದುಕು ಸುಂದರವಾಗಿರುತ್ತದೆ ಎಂದರು.

ಇನ್ನರ್ ವೀಲ್ ಅಧ್ಯಕ್ಷ ಅಗ್ನೇಸ್ ಮುತ್ತಣ್ಣ ಮಾತನಾಡಿ, ವಿದ್ಯಾರ್ಥಿಗಳು ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕ ಗುರಿ ಸಾಧಿಸಬೇಕು. ಪೋಷಕರನ್ನು ಗೌರವದಿಂದ ಕಾಣಬೇಕು ಎಂದರು.

ಬೆಂಗಳೂರಿನ ರೀಇನ್‌ವೆಂಟ್ ಅಪಾರಲ್ಸ್ ನ ನಿರ್ದೇಶಕ ಅಭಿತಾ ಜೈನ್ ಬಾಬೆಲ್, ರೋಟರಿ, ಇನ್ನರ್ ವಿಲ್ ಸಂಸ್ಥೆಯ ಪದಾಧಿಕಾರಿಗಳು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಇನ್ನರ್ ವೀಲ್ ಖಜಾಂಚಿ ದಿವ್ಯ ಮುತ್ತಣ್ಣ ಸ್ವಾಗತಿಸಿ, ನಿರೂಪಿಸಿದರು. ರೀಬಿಲ್ಡ್ ಕೊಡಗು ಸಂಸ್ಥೆಯ ಸಂಸ್ಥಾಪಕ ಕೆ.ಎ.ಕುಶಾಲಪ್ಪ ವಂದಿಸಿದರು.

ವಾರ್ಷಿಕೋತ್ಸವ ಅಂಗವಾಗಿ ಅರೆಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 60 ವಿದ್ಯಾರ್ಥಿಗಳಿಗೆ ಸೋಲಾರ್ ಲ್ಯಾಂಪ್ ಹಾಗೂ ಶೈಕ್ಷಣಿಕ ಪರಿಕರ ವಿತರಿಸಲಾಯಿತು.