ರಾಜ್ಯಪಾಲರನ್ನು ವಾಪಸ್‌ ಕರೆಸಿಕೊಳ್ಳಿ: ಪಕ್ಷಪಾತ ಖಂಡನೀಯ

| Published : Aug 18 2024, 01:51 AM IST

ರಾಜ್ಯಪಾಲರನ್ನು ವಾಪಸ್‌ ಕರೆಸಿಕೊಳ್ಳಿ: ಪಕ್ಷಪಾತ ಖಂಡನೀಯ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ನಲ್ಲಿ ಸಂಸದ ಸಾಗರ ಖಂಡ್ರೆ ನೇತೃತ್ವದಲ್ಲಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಬೀದರ್‌

ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಪಕ್ಷಪಾತದಿಂದ ವರ್ತಿಸುತ್ತಾ ಕರ್ನಾಟಕದ ರಾಜ್ಯಪಾಲರು ಪ್ರಜಾಪ್ರಭುತ್ವದ

ಕಗ್ಗೊಲೆ ಮಾಡುತ್ತಿದ್ದು ಇವರನ್ನು ವಾಪಸ್‌ ಕರೆಯಿಸಿಕೊಳ್ಳುವಂತೆ ರಾಷ್ಟ್ರಪತಿಗಳಿಗೆ ಒತ್ತಾಯಿಸಿ ಬೀದರ್‌ನಲ್ಲಿ ಸಂಸದ ಸಾಗರ ಖಂಡ್ರೆ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಪ್ರತಿಭಟನೆ ನಡೆಸಿತು.

ನಗರದ ಡಾ.ಅಂಬೇಡ್ಕರ್‌ ವೃತ್ತದಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ಅವರ ಜೊತೆಯಲ್ಲಿ ಸಂಸದರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಕೂಗಿ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.

12ನೇ ಶತಮಾನದಲ್ಲೇ ಇಡೀ ಜಗತ್ತಿಗೆ ಪ್ರಜಾಪ್ರಭುತ್ವ ಮತ್ತು ಸಂಸತ್ತಿನ ಪರಿಕಲ್ಪನೆ ಕಟ್ಟಿಕೊಟ್ಟ ‘ಅನುಭವ ಮಂಟಪ’ ಇರುವ ಬಸವಕಲ್ಯಾಣ ಒಳಗೊಂಡ ಬೀದರ್‌ ಜಿಲ್ಲೆಯವರು ನಾವೆಂಬ ಹೆಮ್ಮೆ ನಮಗಿದೆ. ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಈ ದೇಶಕ್ಕೆ ನೀಡಿದ ಪರಮ ಪವಿತ್ರವಾದ ಅತಿ ದೊಡ್ಡ ಲಿಖಿತ ಸಂವಿಧಾನವನ್ನು ಹೊಂದಿರುವ ಭಾರತ, ಒಕ್ಕೂಟ ವ್ಯವಸ್ಥೆಯು ಇಡೀ ಜಗತ್ತಿಗೇ ಮಾದರಿಯಾಗಿದೆ. ಆದರೆ ಇಂದು ರಾಜ್ಯದಲ್ಲಿ ನಡೆದಿರುವ ಬೆಳವಣಿಗೆ ಈ ಒಕ್ಕೂಟ ವ್ಯವಸ್ಥೆಗೆ ಮತ್ತು ಸಂವಿಧಾನದ ಆಶಯಗಳಿಗೆ ಹಾಗೂ ಪ್ರಜಾಪ್ರಭುತ್ವದ ಉಳಿವಿಗೆ ಮಾರಕವಾಗಿದೆ ಎಂದು ಆರೋಪಿಸಿದ್ದಾರೆ.

ಜನ ಪರವಾದ ಸರ್ಕಾರ ನೀಡಿರುವ, ಸಾಮಾಜಿಕ ನ್ಯಾಯ ಎತ್ತಿ ಹಿಡಿಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರವಾಗಿ ಯಾವುದೇ ಅಧಿಕಾರ ದುರುಪಯೋಗಪಡಿಸಿಕೊಂಡಿಲ್ಲದಿದ್ದರೂ, ಯಾವುದೇ ಅಪರಾಧ ಮಾಡದಿದ್ದರೂ ಖಾಸಗಿ ದೂರು ಆಧರಿಸಿ ಮೈಸೂರಿನ ಮುಡಾ ಸೈಟು ಹಂಚಿಕೆ ಪ್ರಕರಣದಲ್ಲಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ

ನೀಡಿರುವ ರಾಜ್ಯಪಾಲರ ಕ್ರಮ ರಾಜಕೀಯ ಪ್ರೇರಿತ ಎಂಬುವದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೋಲೆಯಾಗಿದೆ ಎಂದರೆ ತಪ್ಪಾಗಲಾರದು ಎಂದು ಕಳವಳ ವ್ಯಕ್ತಪಡಿಸಿದರು.

ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತು, ಪಕ್ಷಪಾತ ವರ್ತನೆ ತೋರುತ್ತಿರುವ ರಾಜ್ಯಪಾಲರಾದ ಥಾವರಚಂದ್‌ ಗೆಹ್ಲೋಟ್‌ ಅವರನ್ನು ಕೂಡಲೇ ವಾಪಸ್‌ ಕರೆಸಿಕೊಳ್ಳಲು ಮತ್ತು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯ ಉಳಿಸಲು ಈ ಮೂಲಕ ಮನವಿ ಮಾಡುತ್ತೇವೆ ಎಂದು ಸಂಸದ ಸಾಗರ ಖಂಡ್ರೆ ಹಾಗೂ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ಅವರು ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.

ಪ್ರತಿಭಟನೆಯಲ್ಲಿ ಮಾಜಿ ಸಂಸದ ನರಸಿಂಗರಾವ್‌ ಸೂರ್ಯವಂಶಿ, ಮಾಜಿ ಶಾಸಕ ಕೆ. ಪುಂಡಲಿಕರಾವ್‌, ಅಮೃತರಾವ್‌ ಚಿಮಕೋಡೆ, ದತ್ತಾತ್ರಿ ಮೂಲಗೆ, ಸಂಜಯ ಜಾಗೀರದಾರ, ಶಂಕರರಾವ್‌ ದೊಡ್ಡಿ, ಅಬ್ದುಲ್‌ ಮನ್ನಾನ್‌ ಸೇಠ್‌, ಮಲ್ಲಿಕಾರ್ಜುನ್‌ ಬಿರಾದರ, ಶಂಕರೆಡ್ಡಿ ಚಿಟ್ಟಾ, ಹಣಮಂತರಾವ್‌ ಚವ್ಹಾಣ್‌, ಪೂಜಾ ಜಾರ್ಜ, ಫರೀದ್‌ ಖಾನ್‌, ರಾಕೇಶ ಕುರಬಖೇಳಗಿ, ಪರ್ವೇಜ್‌ ಕಮಲ್‌, ವಿನೋದ ಅಪ್ಪೆ, ನಯಮ್‌ ಕೀರ್ಮಾನಿ, ಜಾನ್‌ ವೆಸ್ಲಿ, ಚನಶೆಟ್ಟಿ, ಶಾಂತಪ್ಪ ಪಾಟೀಲ್‌ ಸೇರಿದಂತೆ ಮತ್ತಿತರರು ಇದ್ದರು.