ಸಾರಾಂಶ
ಕಾರಟಗಿ: ಕಾಂತರಾಜ್ ವರದಿ ಜಾತಿ ಗಣತಿಯಲ್ಲ. ಅದೊಂದು ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯಾಗಿದೆ. ಈಗ ರಾಜ್ಯ ಸರ್ಕಾರ ವರದಿಯನ್ನು ಖಂಡಿತವಾಗಿ ಸ್ವೀಕರಿಸುತ್ತದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪುನರುಚ್ಚರಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಹಿಂದುಳಿದ ವರ್ಗ ಆಯೋಗದ ಇನ್ನೂ ಬಿಡುಗಡೆಯಾಗದ ಜಾತಿ ಗಣತಿ ಅಥವಾ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸ್ವೀಕಾರಕ್ಕೆ ಮುಂಚೆಯೇ ವಿರೋಧಿಸುತ್ತಿರುವುದು ಸರಿಯಲ್ಲ ಎಂದರು.ಇನ್ನು ವರದಿ ಸ್ವೀಕಾರದ ನಂತರ ಅಧ್ಯಯನ ನಡೆದು ಜಾರಿಯ ಪ್ರಶ್ನೆ ಉದ್ಭವಿಸುತ್ತದೆ. ಈ ವರದಿಯನ್ನು ಜಾತಿ ಗಣತಿ ಎಂದು ಪರಿಗಣಿಸಿ ನೀಡುತ್ತಿರುವ ಹೇಳಿಕೆಗಳೇ ತಪ್ಪು. ಈ ಬಗ್ಗೆ ಬರೀ ಊಹಾಪೋಹ, ಕಪೋಲಕಲ್ಪಿತ ವಿಚಾರ ಹರಿಬಿಟ್ಟು ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಯೋಜನೆ ರೂಪಿಸಲು ರಾಜ್ಯದ ಎಲ್ಲ ಜಾತಿ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಮಾಹಿತಿ ಮತ್ತು ಅಂಕಿ-ಅಂಶಗಳ ಸಮೇತವಾದ ವರದಿಗಾಗಿ ಕಾಂತರಾಜ್ ಆಯೋಗ ರಚಿಸಲಾಗಿತ್ತು. ಇನ್ನು ಇದರಲ್ಲಿ ಏನು ಲೋಪಗಳಾಗಿಯೋ ಇಲ್ಲವೋ ಎನ್ನುವುದರ ಕೂಲಂಕಷವಾಗಿ ಅಧ್ಯಯನ ಮಾಡಿ ನಂತರ ಅದರ ಜಾರಿಗೆ ಸಂಬಂಧಿಸಿದಂತೆ ಚರ್ಚೆಗಳು ಆಗುತ್ತವೆ. ಆದರೆ ಇದೆಲ್ಲವನ್ನು ಬಿಟ್ಟು ವರದಿ ಸ್ವೀಕರಿಸುವ ಮುಂಚೆಯೇ ಅದರ ಬಗ್ಗೆ ಮಾತನಾಡುವುದು ಸರಿಯಲ್ಲ. ಈ ಬಗ್ಗೆ ಬಹಳಷ್ಟು ಸಾರಿ ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದರೂ ಕೂಡಾ ಕಾಂತರಾಜ್ ವರದಿಯನ್ನು ಜಾತಿ ಗಣತಿಗೆ ಹೋಲಿಸಿ ಹೇಳಿಕೆಗಳನ್ನು ಕೊಡುವುದು ಮತ್ತು ಅದನ್ನು ಏಕಾಏಕಿ ಜಾರಿ ಮಾಡುತ್ತಾರೆ ಎನ್ನುವ ಕಪೋಲಕಲ್ಪಿತ ವರದಿಗಳನ್ನು ಹರಿಬಿಡುತ್ತಿರುವುದು ನಿರಂತರವಾಗಿ ನಡೆಯುತ್ತಿದೆ. ಇದು ಮೊದಲು ನಿಲ್ಲಬೇಕು ಎಂದರು.
ಅಂಜನಾದ್ರಿ ಅಭಿವೃದ್ಧಿ:ಗಂಗಾವತಿ ಬಳಿಯ ಕಿಷ್ಕಿಂದೆ ಅಂಜನಾದ್ರಿಯಲ್ಲಿ ಹನುಮಮಾಲಾ ವಿಸರ್ಜನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸರ್ವ ಸಿದ್ಧತೆಗಳು ನಡೆದು ರಾಜ್ಯ,ದೇಶದ ಮೂಲೆ ಮೂಲೆಯಿಂದ ಭಕ್ತರು ಅಂಜನಾದ್ರಿಯತ್ತ ಆಗಮಿಸುತ್ತಿದ್ದಾರೆ. ಇದಕ್ಕೆ ಬೇಕಾದ ಸರ್ವ ಸಿದ್ಧತೆಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಇನ್ನು ಅಂಜನಾದ್ರಿಯ ಸರ್ವಾಂಗೀಣ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ಮಾಡಲಾಗುತ್ತಿದೆ. ಕೋಟ್ಯಂತರ ಭಾರತೀಯರ ಶ್ರದ್ಧಾಕೇಂದ್ರವಾಗಿ ಬದಲಾಗಿರುವ ಆಂಜನೇಯ ಜನಿಸಿದ ಸ್ಥಳವೆಂದೇ ಕರೆಯಲಾಗುವ ಅಂಜನಾದ್ರಿ ಬೆಟ್ಟಕ್ಕೆ ಇತ್ತೀಚಿನ ದಿನಗಳಲ್ಲಿ ದೇಶದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುತ್ತಿದ್ದು, ದಿನೇ ದಿನೇ ಪ್ರವಾಸೋದ್ಯಮ, ಪುಣ್ಯಕ್ಷೇತ್ರವಾಗಿ ಬದಲಾಗುತ್ತಿದೆ. ಈ ನಿಟ್ಟಿನಲ್ಲಿ ಅಂಜನಾದ್ರಿಯ ಅಭಿವೃದ್ಧಿಗೆ ಬೇಕಾದ ಎಲ್ಲ ಯೋಜನೆಗಳನ್ನು ರಾಜ್ಯ ಸರ್ಕಾರ ಹಂತ ಹಂತವಾಗಿ ಜಾರಿಗೊಳಿಸಲಿದೆ ಎಂದರು.