ಸಾರಾಂಶ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆಎಚ್.ಡಿ.ಕೋಟೆ ಹ್ಯಾಂಡ್ ಪೋಸ್ಟ್ ಜೀವಿಕ ತರಬೇತಿ ಕೇಂದ್ರದಲ್ಲಿ ಜೀವಿಕ ಸಂಘಟನೆ ಮತ್ತು ಒಕ್ಕೂಟದ ನೇತೃತ್ವದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಅವರನ್ನು ಅಭಿನಂದಿಸಲಾಯಿತು. ಜೀವಿಕ ರಾಜ್ಯ ಸಂಘಟನಾ ಸಂಚಾಲಕ ಉಮೇಶ್ ಬಿ. ನೂರಲಕುಪ್ಪೆ ಮಾತನಾಡಿ, ಶಾಸಕ ಅನಿಲ್ ಅವರು, ಕಳೆದ ವಿಧಾನಸಭೆ ಅಧಿವೇಶನದಲ್ಲಿ ಜೀತ ನಿರ್ಮೂಲನೆ ಮತ್ತು ಜೀತದಾಳುಗಳ ಬಗ್ಗೆ ಪ್ರಸ್ತಾಪ ಮಾಡಿ ಸರ್ಕಾರದ ಗಮನವನ್ನು ಸೆಳೆದಿದ್ದಾರೆ, ಅಷ್ಟೇ ಅಲ್ಲದೆ ಮೈಸೂರಿನ ರಾಜ್ಯಮಟ್ಟದ ಕಾರ್ಯಕ್ರಮದ ಯಶಸ್ವಿಗೆ ಕಾರಣರಾಗಿದ್ದಾರೆ ಎಂದರು.ಶಾಸಕರು ಮತ್ತು ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಜೊತೆಗೆ ರಾಜ್ಯಮಟ್ಟದ ಸಭೆಯನ್ನು ಏರ್ಪಡಿಸಬೇಕು ಹಾಗೂ ಜೀತಮುಕ್ತರಿಗೆ ವಿವಿಧ ನಿಗಮ ಮಂಡಳಿಗಳಿಂದ ನೇರ ಸವಲತ್ತು ದೊರಕಿಸಿಕೊಡಬೇಕು ಮತ್ತು ಜೀವಿಕ ತರಬೇತಿ ಕೇಂದ್ರಕ್ಕೆ ಸಮುದಾಯಭವನ ಹಾಗೂ ಕಾಂಪೌಂಡ್ ವ್ಯವಸ್ಥೆ ಅನುದಾನ ನೀಡಬೇಕು ಎಂದು ಮನವಿ ಮಾಡಿದರು. ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ನಾನು ಮತ್ತು ನಮ್ಮ ತಂದೆ ಹಾಗೂ ನನ್ನ ರಾಜಕೀಯ ಗುರು ಆರ್. ಧ್ರವನಾರಾಯಣ್ ಅವರು ಜೀವಿಕ ಸಂಘಟನೆ ಜೊತೆಗೆ ಅತ್ಯಂತ ಒಡನಾಟ ಇಟ್ಟುಕೊಂಡು ಬಂದಿದ್ದು, ರಾಜ್ಯದಲ್ಲೇ ಪ್ರಾಮಾಣಿಕ ಸಂಘಟನೆಯಾಗಿ ಗುರುತಿಸಿಕೊಂಡಿದೆ. ನಮ್ಮ ತಾಲೂಕಿನಲ್ಲಿಯೂ ಪ್ರಬಲವಾದ ಸಂಘಟನೆಯಾಗಿ ಕೆಲಸ ಮಾಡುತ್ತಿದ್ದೆ. ಕಳೆದ ಎರಡು ಚುನಾವಣೆಯಲ್ಲಿಯೂ ನನಗೆ ಅತ್ಯಂತ ಬೆಂಬಲವನ್ನು ನೀಡಿದ್ದೀರಿ ನಿಮ್ಮ ಸಂಘಟನೆಗೆ ನನ್ನ ಶಕ್ತಿ ಮೀರಿ ಶ್ರಮಿಸುತ್ತೇನೆ, ಹಾಗೆ ಸಂಘಟನೆಯ ರಾಜ್ಯಮುಖಂಡರ ನಿಯೋಗದಲ್ಲಿ ಉಸ್ತುವಾರಿ ಮಂತ್ರಿಯಾಗಿ ಜೊತೆಯಾಗಿ ಮುಖ್ಯಮಂತ್ರಿಗಳ ಜೊತೆಗೆ ಸಭೆ ಮಾಡಿಸಲು ಮುಂದಿನ ಶುಕ್ರವಾರ ಸಮಯ ನಿಗದಿ ಮಾಡಿಸುತ್ತೇನೆ ಎಂದು ಎಂದು ಭರವಸೆ ನೀಡಿದರು.
ಜೀವಿಕ ಜಿಲ್ಲಾ ಸಂಚಾಲಕ ಬಸವರಾಜ್ ಮಾತನಾಡಿ, ಜೀತದಿಂದ ಹೊರಬಂದ ಜೀತಮುಕ್ತರು ಅತ್ಯಂತ ಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ, ಇವರಿಗೆ ಸರ್ಕಾರ ಮೊದಲ ಆದ್ಯತೆ ಮೇರೆಗೆ ವಿವಿಧ ನಿಗಮ ಮಂಡಳಿಗಳಿಂದ ನೇರ ಸಾಲ ಸೌಲಭ್ಯ ಕಲ್ಪಿಸಿಕೊಡಬೇಕು ಮತ್ತು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳೊಂದಿಗೆ ಸಭೆ ಏರ್ಪಾಡು ಮಾಡಬೇಕೆಂದು ಒತ್ತಾಯಿಸಿದರು.ವೇದಿಕೆಯಲ್ಲಿ ಪುರಸಭಾ ಸದಸ್ಯ ಎಚ್.ಸಿ. ನರಸಿಂಹಮೂರ್ತಿ, ಒಕ್ಕೂಟದ ಅಧ್ಯಕ್ಷರಾದ ಗಣೇಶ, ಬಸವರಾಜ್, ಮಾಜಿ ಅಧ್ಯಕ್ಷರಾದ ಮಹದೇವ, ಶಿವಣ್ಣ, ಮಲ್ಲಿಗಮ್ಮ, ಮಂಜುನಾಥ್, ಜೀವಿಕ ಸಂಚಾಲಕ ಚಂದ್ರಶೇಖರಮೂರ್ತಿ, ಶಿವರಾಜ್, ನಟರಾಜ್, ಶ್ರೀನಿವಾಸ್, ಭೋಗನಂಜ, ಮುಖಂಡರಾದ ನಿಂಗಯ್ಯ, ಸವಿತಾ, ಜಯಮ್ಮ, ಕೃಷ್ಣ ನಾಯ್ಕ, ನಂಜುಂಡಯ್ಯ, ತೊಳಸಮ್ಮ, ವಸಂತ, ಮಲ್ಲಿಗಮ್ಮ ಇದ್ದರು.