ಸಾರಾಂಶ
ಕಣತೂರು ಶಾಲೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕನ್ನಡಪ್ರಭ ವಾರ್ತೆ ಹಾಸನ
ಲಿಂಗ ಸಮಾನತೆ, ಸಂತಾನೋತ್ಪತ್ತಿ ಹಕ್ಕುಗಳು, ಮಹಿಳೆಯರ ವಿರುದ್ಧ ಹಿಂಸೆ, ಮಹಿಳಾ ನಿಂದನೆ, ಮಹಿಳಾ ಹಕ್ಕುಗಳು ಮುಂತಾದ ಅಂಶಗಳಿಗಾಗಿ ನಡೆದ ಹೋರಾಟವೇ ಚಳವಳಿಯಾಗಿ ಜಾಗತಿಕ ಮನ್ನಣೆ ಪಡೆದು ಮಹಿಳೆಗೆ ಸಮ ಸಮಾಜದ ಕನಸನ್ನು ಬಿತ್ತುವ ಮಹತ್ವದ ಉದ್ದೇಶದಿಂದ ಹೊರಟು ಇಂದಿಗೂ ಚಳವಳಿ ರೂಪದಲ್ಲಿ ಧ್ವನಿಸುತ್ತಿದೆ. ಇದು ಪ್ರಾರಂಭವಾದ ಸಂದರ್ಭವನ್ನು ಸ್ಮರಿಸುವ, ಅವಕಾಶಗಳ ಸದ್ಬಳಕೆ ಮಾಡಿಕೊಳ್ಳುವ, ಹಕ್ಕುಗಳಿಗಾಗಿ ಧ್ವನಿಯೆತ್ತುವ ಹಿನ್ನೆಲೆಯಲ್ಲಿ ಇಂದಿಗೂ ಪ್ರತಿವರ್ಷ ಮಾ.೮ ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ.ಪ್ರಿಯಾಂಕ ಅಭಿಪ್ರಾಯಪಟ್ಟರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಆಲೂರು ವತಿಯಿಂದ ಆಲೂರು ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣತೂರು ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಅಂತಾರಾಷ್ಟ್ರೀಯ ಮಹಿಳೆಯರ ದಿನವನ್ನು ಆಚರಿಸುತ್ತೇವೆ. ಮಹಿಳೆಯರು ಒಂದು ಕ್ಷೇತ್ರಕ್ಕೆ ಮೀಸಲಿರದೇ, ರಾಷ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕೃತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರ ಸೇರಿ ಎಲ್ಲದರಲ್ಲೂ ತಮ್ಮದೇಯಾದ ಛಾಪನ್ನು ಮೂಡಿಸಿದ್ದಾರೆ. ಮಹಿಳೆಯರ ಈ ಪ್ರಗತಿಯನ್ನು ಗುರುತಿಸಿ ಈ ದಿನವನ್ನು ಮಹಿಳೆಯರಿಗೆ ಅರ್ಪಿಸಲಾಗಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಎಂ.ಆರ್.ಚಂದ್ರಮ್ಮ ಮಾತನಾಡಿ, ಮಹಿಳಾ ದಿನವು ಲಿಂಗ ತಾರತಮ್ಯ, ಪಕ್ಷಪಾತದಿಂದ ಮುಕ್ತವಾಗಿರುವ ಲಿಂಗ ಸಮಾನ ಜಗತ್ತಿಗೆ ಕರೆ ನೀಡುತ್ತದೆ. ಈ ದಿನವನ್ನು ಮಹಿಳೆಯರ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಇದು ಮಹಿಳೆಯರ ಸಮಾನ ಹಕ್ಕುಗಳು, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ನಿಂದನೆ ಮತ್ತು ಸಂತಾನೋತ್ಪತ್ತಿ ಹಕ್ಕುಗಳಂತಹ ವಿಷಯಗಳ ಬಗ್ಗೆ ಮಾತನಾಡುತ್ತದೆ ಎಂದರು.ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್.ಉಪ್ಪಾರ್, ತಾಲೂಕು ಖಜಾಂಚಿ ಬಿ.ಎಸ್.ಹಿಮ, ತಾಲೂಕು ಸಹ ಕಾರ್ಯದರ್ಶಿ ಎಚ್.ಡಿ.ಕುಮಾರ್, ಹಿರಿಯ ಶಿಕ್ಷಕಿ ಎಚ್.ಎನ್.ಪ್ರಮಿಳಾ ಸೇರಿದಂತೆ ಹಲವರು ಮಾತನಾಡಿದರು. ಶಿಕ್ಷಕಿಯರಾದ ಕೆ.ಟಿ.ಶೋಭಾ, ಎಚ್.ಎಸ್.ರಾಜೇಶ್ವರಿ, ಕೆ.ರೂಪ, ಹಿರಿಯ ಶಿಕ್ಷಕ ಸಿದ್ದಯ್ಯ ಹಾಗೂ ಕಣತೂರು ಶಾಲೆ, ತಾಳೂರು ಶಾಲೆ, ಟಿ.ಗುಡ್ಡೇನಹಳ್ಳಿ ಶಾಲೆಗಳ ಸ್ಕೌಟ್ಸ್, ಗೈಡ್ಸ್ ಮಕ್ಕಳು ಭಾಗವಹಿಸಿದ್ದರು.ಆಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣತೂರು ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾರತ ಸ್ಕೌಟ್ಸ್, ಗೈಡ್ಸ್ ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ.ಪ್ರಿಯಾಂಕ ಮಾತನಾಡಿದರು.