ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ: ಶಾಸಕ ತಮ್ಮಯ್ಯ

| Published : Mar 06 2024, 02:17 AM IST

ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ: ಶಾಸಕ ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ಮಕ್ಕಳ ಹಬ್ಬ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಮಕ್ಕಳ ಹಬ್ಬದಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಬಾಲಾ ವಿಕಾಸ ಅಕಾಡೆಮಿ ಇವರ ವತಿಯಿಂದ ಮಂಗಳವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಏರ್ಪಡಿಸಿದ್ದ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಓದಿನ ಒತ್ತಡವನ್ನು ಮರೆತು ಕಾರ್ಯಕ್ರಮದಲ್ಲಿ ಮುಕ್ತವಾಗಿ ಪಾಲ್ಗೊಳ್ಳಬೇಕು. ಇದರಿಂದ ಮಕ್ಕಳ ಭೌತಿಕ, ಮಾನಸಿಕ ವಿಕಸನದೊಂದಿಗೆ ದೈಹಿಕವಾಗಿಯೂ ಸಧೃಡರಾಗುತ್ತಾರೆ. ಮಕ್ಕಳು ಉತ್ಸಾಹದಿಂದಿರಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದರು. ಮಕ್ಕಳು ತಮಗಿಷ್ಟವಾದ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಮಕ್ಕಳು ತಮ್ಮ ಆಟದ ಜೊತೆಗೆ ಓದಿನ ಕಡೆಯು ಹೆಚ್ಚು ಗಮನಹರಿಸಿ ತಮ್ಮ ಗುರಿ ಸಾಧಿಸಬೇಕು ಎಂದ ಅವರು, ಇಂತಹ ಕಾರ್ಯಕ್ರಮಗಳು ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗದೆ. ಪ್ರತಿ ಗ್ರಾಮಗಳಲ್ಲೂ ಆಚರಿಸುವಂತಾಗಬೇಕು. ಇದರಿಂದ ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆಯಲ್ಲದೆ ಮಕ್ಕಳಲ್ಲಿ ಸಮಾನತೆ ಕಲ್ಪಿಸುವುದರೊಂದಿಗೆ ಅವರುಗಳಲ್ಲಿ ಕ್ರಿಯಾಶೀಲತೆ, ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು ಹೇಳಿದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಡಾ.ಮಂಜುಳಾ ಹುಲ್ಲಹಳ್ಳಿ ಮಾತನಾಡಿ, ಮಕ್ಕಳಿಗೆ ಕಲೆ, ಪತ್ರಿಭೆ ಎಂಬುದು ಕೇವಲ ಸ್ಪರ್ಧೆಗೆ ಮಾತ್ರ ಸೀಮಿತವಾಗಬಾರದು. ಕಲೆ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಸ್‌. ರಾಜಾನಾಯಕ್, ಅಧೀಕ್ಷಕ ದೇವಾನಂದ್, ಜಿಲ್ಲಾ ಬಾಲ ವಿಕಾಸ ಅಕಾಡೆಮಿ ಅನುಷ್ಠಾನ ಸಮಿತಿ ಸದಸ್ಯ ಬಕ್ಕಿ ಮಂಜುನಾಥ್, ವೈಷ್ಣವಿ ಎನ್. ರಾವ್, ಚಿಕ್ಕಮಗಳೂರು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚರಣ್ ರಾಜ್ ಇದ್ದರು.