ಸಾರಾಂಶ
ಕನ್ನಡಪ್ರಭ ವಾರ್ತೆ ಬೀಳಗಿ
ಓದಲು ಬರೆಯಲು ಬರದಿದ್ದರೂ 25ಕ್ಕೂ ಅಧಿಕ ಕೃತಿಗಳನ್ನು ರಚಿಸುವ ಮೂಲಕ ಜಾನಪದ ಆಶುಕವಿ ಸಿದ್ದಪ್ಪ ಬಿದರಿ ಜನಮಾನಸದಲ್ಲಿ ನೆಲೆನಿಂತಿದ್ದು, ಇಂತಹ ಕವಿಯನ್ನು ಹಾಗೂ ಸಮರ್ಥ ವ್ಯಕ್ತಿಯನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಶ್ರೇಯಸ್ಸು ಕನ್ನಡ ಜಾನಪದ ಪರಿಷತ್ ಅಧ್ಯಕ್ಷರು ಹಾಗೂ ಪದಾಕಾರಿಗಳಿಗೆ ಸಲ್ಲುತ್ತದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ,ಶಾಸಕರಾದ ಜೆ.ಟಿ. ಪಾಟೀಲ ಹೇಳಿದರು.ತಾಲೂಕಿನ ಅನಗವಾಡಿ ಗ್ರಾಮದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಬಾಗಲಕೋಟೆ, ತಾಲೂಕು ಘಟಕ ಬೀಳಗಿ ವತಿಯಿಂದ ಆಯೋಜಿಸಿದ್ದ ಬಾಗಲಕೋಟೆ ಜಿಲ್ಲಾ ದ್ವಿತೀಯ ಕನ್ನಡ ಜಾನಪದ ಸಮ್ಮೇಳನ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರ ಬಾಯಿಯಿಂದ ಬಾಯಿಗೆ ಅಂದರೆ ನಮ್ಮ ಪೂರ್ವಜರು ಹಾಡುತ್ತಿದ್ದ ಹಂತಿಪದ, ಸೋಬಾನ ಪದ ಸೇರಿದಂತೆ ವಿವಿಧ ಪದಗಳೇ ಜಾನಪದ. ಇಂಥ ಹಾಡುಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ಕಲಾವಿದರು, ಸಾಧಕರನ್ನು ಗುರುತಿಸಿ ಗೌರವಿಸುವಂಥ ಕೆಲಸವನ್ನು ಕನ್ನಡ ಜಾನಪದ ಪರಿಷತ್ ಮಾಡುತ್ತಿರುವುದು ಶ್ಲಾಘನೀಯವಾದುದ್ದು ಎಂದರು.
ಗಿರಿಸಾಗರದ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ನಮ್ಮ ನೆಲೆಯನ್ನು ತೋರಿಸುವಂಥ ಜಾನಪದ ಪುರಾತನವಾದದ್ದು. ಜನರ ಕಿವಿಯಿಂದ ಕಿವಿಗೆ ಹರಡುತ್ತ ಬಂದಿದೆ. ಜಾನಪದದಲ್ಲಿ ದೇವರು ಮತ್ತು ಧರ್ಮ ನಿಂದನೆ ಮಾಡಿಲ್ಲ. ಸಂಸ್ಕಾರ ಬರಬೇಕಿದ್ದರೆ ಜಾನಪದ ಸಮ್ಮೇಳನಗಳು ಅವಶ್ಯಕ ಎಂದ ಅವರು, ಇಂದಿನ ದಿನಗಳಲ್ಲಿ ಜಾನಪದ ಹೆಸರಿನಲ್ಲಿ ದೃಶ್ಯ ಮಾಧ್ಯಮಗಳು ನೋಡಲು ಮತ್ತು ಕೇಳಲು ಅಸಹ್ಯವಾಗುವಂತಹ ಅಶ್ಲೀಲ ಮಾತು ಬಳಸುತ್ತಿದ್ದು,ಇದು ಸಮಾಜಕ್ಕೆ ತಪ್ಪು ಸಂದೇಶ ಕೊಡುತ್ತಿದೆ ಎಂದು ವಿಷಾದಿಸಿದರು.ನಿವೃತ್ತ ಪ್ರಾಧ್ಯಾಪಕ ಎನ್ಎಂ. ಕೂಗಲಿ ಅಭಿನಂದನಾ ಪರ ಮಾತನಾಡಿ, ಮಳೆಯ ನಡುವೆಯೂ ಅರ್ಥಪೂರ್ಣವಾಗಿ ನಡೆದ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 60ಕ್ಕೂ ಹೆಚ್ಚು ಸಾಧಕರನ್ನು ಗುರುತಿಸಿ ಗೌರವಿಸಿದ್ದು ಶ್ಲಾಘನೀಯ ಕಾರ್ಯವೆಂದರು.ವಿಶ್ರಾಂತ ಡಿಡಿಪಿಐ ಎಂ.ಜಿ. ದಾಸರ ಸಮಾರೋಪ ನುಡಿ ಹೇಳಿದರು.
ಇದೇ ವೇಳೆ ಜನಪದ ಕಾವ್ಯ-ಕುಂಚ ಸಿಂಚನದಲ್ಲಿ ಕವಿ ಡಿ.ಎಂ. ಸಾವಕಾರ ಕವಿತೆ ವಾಚನ ಮಾಡಿದರೆ, ಶಿವಾನಂದ ಮಾದರ ಗಾಯನಕ್ಕೆ ಶಿವಾನಂದ ಹಿರೇಮಠ ಕುಂಚ ಸಿಂಚನ ಮಾಡಿದರು.ಸಮ್ಮೇಳನದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ 50ಕ್ಕೂ ಹೆಚ್ಚು ವಿವಿಧ ಕಲಾತಂಡಗಳು ಕಲಾಪ್ರದರ್ಶನ ನೆರವೇರಿಸಿದವು.ಪಿಕೆಪಿಎಸ್ ಅಧ್ಯಕ್ಷ ಎಂ.ಬಿ. ಕಂಬಿ, ಈರಣ್ಣ ದುಂ. ಗಾಣಗೇರ, ಪೀರಸಾಬ ನದಾಫ, ಡಾ. ಎಸ್. ಕೆ. ಬಂಗಾರಿ, ನಿಂಗರಾಜ ಮಬ್ರಮಕರ, ಫಕೀರಯ್ಯ ಮಠಪತಿ, ಆರ್.ವಿ. ಅಂಗಡಿ, ಸಂಗಮೇಶ ಶಾಂತಗಿರಿ, ಮಹೇಶ ಮಾದರ, ರಮೇಶ ಮಾದರ, ಬಸವ್ವ ಹೆಬ್ಬಾಳ, ಸುಲೋಚನಾ ಗಿರಿಯನ್ನವರ, ಇಂದ್ರವ್ವ ಗಡ್ಡಿ,ಬಸವರಾಜ ನಾಯ್ಕ,ಎಂ ಬಿ ತಾಂಬೋಳಿ,ರಮೇಶ ಮೇಟಿ ಸೇರಿದಂತೆ ಇತರರು ಇದ್ದರು.
ಸಮ್ಮೇಳನದ ನಿರ್ಣಯಗಳು:1. ಸರ್ಕಾರದಿಂದ ಜಾನಪದ, ಸಾಂಸ್ಕೃತಿಕ ನೀತಿ ರೂಪಿಸಬೇಕು.
2. ಜಾನಪದ ಕಲಾವಿದರಿಗೆ 2 ಸಾವಿರದಿಂದ ₹5 ಸಾವಿರ ಮಾಸಾಶನ ಹೆಚ್ಚಿಸಬೇಕು. ಮಾಸಾಶನ ಪಡೆಯಲು 58 ವರ್ಷದಿಂದ 50 ವರ್ಷಕ್ಕೆ ಇಳಿಸಬೇಕು.3. ಕನ್ನಡ ಜಾನಪದ ಪರಿಷತ್ ನಡೆಸುವ ಕಾರ್ಯಕ್ರಮಗಳಿಗೆ ಸರ್ಕಾರ ಅನುದಾನ ನೀಡಬೇಕು.
4. ಶಾಲಾ ಪಠ್ಯ ಪುಸ್ತಕಗಳಲ್ಲಿ ಜಾನಪದ ಆಟ, ಪಾಠದ ಕುರಿತು ವಿಷಯ ಸೇರ್ಪಡೆ ಮಾಡಬೇಕು.5. ಸರ್ಕಾರವೇ ಜಾನಪದ ಕಲಾವಿದರಿಗೆ ಜೀವವಿಮೆ ಮಾಡಬೇಕು ಎಂದು ಒತ್ತಾಯಿಸಿ ಬಾಗಲಕೋಟೆ ಜಿಲ್ಲಾ 2ನೇ ಕನ್ನಡ ಜಾನಪದ ಸಮ್ಮೇಳನದಲ್ಲಿ ತೆಗೆದುಕೊಂಡ 5 ನಿರ್ಣಯಗಳನ್ನು ಸರ್ಕಾರ ಕೂಡಲೆ ಜಾರಿಗೆ ತರಬೇಕು ಎಂದು ಡಿ.ಎಂ. ಸಾವಕಾರ, ಜಿಲ್ಲಾಧ್ಯಕ್ಷರು, ಕನ್ನಡ ಜಾನಪದ ಪರಿಷತ್ ಬಾಗಲಕೋಟೆ ನಿರ್ಣಯ ಮಂಡಿಸಿದರು.