ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರತಿ ಬೂತ್ ಮಟ್ಟದಲ್ಲಿ ಉತ್ತಮ ಮಹಿಳಾ ಕಾರ್ಯಕರ್ತರನ್ನು ಗುರುತಿಸಿ ಜವಾಬ್ದಾರಿ ನೀಡಿ ಕೆಲಸ ಮಾಡಿದಾಗ ಮಾತ್ರ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಗಳಿಸಲು ಸಾಧ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯಿಂದ ನಡೆದ ಜಿಲ್ಲಾ ಕಾಂಗ್ರೆಸ್ ನೂತನ ಮಹಿಳಾಧ್ಯಕ್ಷರಾಗಿ ನೇಮಕಗೊಂಡ ಎಚ್.ಬಿ.ಶುಭದಾಯಿನಿ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.
ಅಕ್ಟೋಬರ್ ತಿಂಗಳಿಂದ 2026ರ ಫೆಬ್ರವರಿಯೊಳಗೆ ಟಿಎಪಿಸಿಎಂಎಸ್, ಡಿಸಿಸಿ ಬ್ಯಾಂಕ್, ಎಪಿಎಂಸಿ ಚುನಾವಣೆ, ನಂತರ ತಾಲೂಕು, ಜಿಲ್ಲಾ ಪಂಚಾಯ್ತಿ, ಪುರಸಭೆ, ನಗರಸಭೆ ಹಾಗೂ ಗ್ರಾಪಂ ಚುನಾವಣೆಗಳು ನಡೆಯಲಿವೆ. ಹೀಗಾಗಿ ಈಗಿನಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂದರು.ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ರಷ್ಟು ಮೀಸಲಾತಿ ಮಹಿಳೆಯರಿಗೆ ಸಿಕ್ಕಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕಾಂಗ್ರೆಸ್ ಸರ್ಕಾರ ಎರಡು ಕಾಲು ವರ್ಷದ ಸಾಧನೆ, ಗ್ಯಾರಂಟಿ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತೆರಳಿ ಮಹಿಳೆಯರಿಗೆ ಭೇಟಿ ಮಾಡಿ ಮನವರಿಗೆ ಮಾಡಿಕೊಡುವ ಮೂಲಕ ಪಕ್ಷ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಲಿದೆ ಎಂದರು.
ರಾಜ್ಯಾಧ್ಯಕ್ಷೆ ಸೌಮ್ಯರೆಡ್ಡಿ ಅವರು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕವನ್ನು ಚುರುಕುಗೊಳಿಸಬೇಕಿದೆ. ಜಿಲ್ಲೆಯ 7 ತಾಲೂಕುಗಳಲ್ಲೂ ಸಂಘಟನೆಗೆ ಆದ್ಯತೆ ನೀಡಬೇಕು. ದಿನೇಶ್ ಗೂಳಿಗೌಡರ ಸಲಹೆ ಪಡೆಯು ಮಹಿಳಾಧ್ಯಕ್ಷೆ ಶುಭದಾಯಿನಿ ಅವರು ಉತ್ತಮವಾಗಿ ಕೆಲಸ ಮಾಡುವ ಮಹಿಳಾ ನಾಯಕರನ್ನು ಗುರುತಿಸಿ ಜವಾಬ್ದಾರಿ ನೀಡಿ ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು ಎಂದರು.ಮಾಜಿ ಸಿಎಂ ಎಸ್.ಎಂ.ಕೃಷ್ಣ ಕಾಲದಿಂದಲೂ ಮಹಿಳೆಯರನ್ನು ಗುರುತಿಸಿ ಅಧಿಕಾರ ನೀಡಿದ್ದು ಕಾಂಗ್ರೆಸ್ ಪಕ್ಷ. ಸ್ವಸಹಾಯ ಸಂಘ ಸ್ಥಾಪನೆ, ಹಾಲಿಗೆ 5 ರು. ಪ್ರೋತ್ಸಾಹಧನ, ಸಂಘಗಳಿಗೆ 5 ಲಕ್ಷ ರು.ವರೆಗೆ ಬಡ್ಡಿ ಇಲ್ಲದೆ ಸಾಲ, ಶಿಕ್ಷಣ ಕಲಿಯುವ ಮಕ್ಕಳಿಗೆ ಶೂ, ಬಟ್ಟೆ, ಮಧ್ಯಾಹ್ನದ ಊಟ, ಮೊಟ್ಟೆ, ಪೌಷ್ಟಿಕ ಆಹಾರ ನೀಡಿ ತಾಯಂದಿರ ದೃಷ್ಟಿಯಿಂದ ಅನುಕೂಲ ಮಾಡಿಕೊಡಲಾಗಿದೆ ಎಂದರು.
ಲೋಕಸಭಾ ವ್ಯಾಪ್ತಿ ಹೊರತು ಪಡಿಸಿ ವಿಧಾನಸಭೆ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜೊತೆಗೆ ಪೈಲಟ್, ವಿಜ್ಞಾನ, ಎಂಜಿನಿಯರ್, ಶಿಕ್ಷಕರು, ಐಎಎಸ್, ಐಪಿಎಸ್ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಪುರುಷರಷ್ಟೆ ಅವಕಾಶಗಳು ಸಿಗುತ್ತಿವೆ. ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಮಂಡ್ಯ ಜಿಲ್ಲೆಯಲ್ಲಿ 2028ರ ವೇಳೆಗೆ ಪ್ರಮುಖವಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಪ್ರತಿ ಹಳ್ಳಿ ಮನೆಗಳಿಗೆ ಕಲ್ಪಿಸಲಾಗುವುದು.
ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ಮೂಲಕ ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ, ಮೈಸೂರು, ಬೆಂಗಳೂರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು.ಕಳೆದ 2 ಕಾಲು ವರ್ಷದ ಕಾಂಗ್ರೆಸ್ ಸರ್ಕಾರದಲ್ಲಿ ಮಂಡ್ಯ ಜಿಲ್ಲೆ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಕೃಷಿ ವಿವಿ ಸ್ಥಾಪನೆ, ಮೈಷುಗರ್ ಕಾರ್ಖಾನೆ ಕಬ್ಬು ಅರೆಯುವಿಕೆ, ನೀರಾವರಿ ಕ್ಷೇತ್ರ, ತಾಯಿ ಮಗು ಆಸ್ಪತ್ರೆ ಸ್ಥಾಪನೆ ಸೇರಿದಂತೆ ಅನೇಕ ಕೆಲಸಗಳು ನಡೆಯುತ್ತಿವೆ ಎಂದರು.
ಸಮಾರಂಭದಲ್ಲಿ ನೂತನ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡ ಎಚ್.ಬಿ.ಶುಭದಾಯಿನಿ ಅವರು ನಿರ್ಗಮಿತ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಅವರಿಂದ ಅಧಿಕಾರ ಸ್ವೀಕರಿಸಿದರು. ಶಾಸಕ ಪಿ.ರವಿಕುಮಾರ್, ಮುಖಂಡರಾದ ಎಂ.ಎಸ್.ಚಿದಂಬರ್, ಮಹಿಳಾ ಮುಖಂಡರು ಭಾಗವಹಿಸಿದ್ದರು.