ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಅನಿವಾಸಿ ಕನ್ನಡಿಗರ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಸರ್ಕಾರಕ್ಕೆ ಹಲವು ಶಿಫಾರಸುಗಳನ್ನು ಮಾಡಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದೆ. ಮುಂಬರುವ ದಿನಗಳಲ್ಲಿ ಅನಿವಾಸಿ ಕನ್ನಡಿಗರ ಏಳ್ಗೆಗಾಗಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸುಮಾರು 1.34 ಕೋಟಿ ಅನಿವಾಸಿ ಭಾರತೀಯರು ವಿದೇಶಗಳಲ್ಲಿ ನೆಲೆಸಿದ್ದು, ಇವರ ಯೋಗಕ್ಷೇಮ, ಉನ್ನತಿಗಾಗಿ ಸರ್ಕಾರದ ಗಮನ ಸೆಳೆಯುವುದು ಅವಶ್ಯಕವಾಗಿತ್ತು. ಆದ್ದರಿಂದ ನಾವು ಹಲವು ಶಿಫಾರಸುಗಳನ್ನು ಮಾಡಿದ್ದು ಸರ್ಕಾರವೂ ಸಕಾರಾತ್ಮವಾಗಿ ಸ್ಪಂದಿಸಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಸುಮಾರು 1.34 ಕೋಟಿ ಅನಿವಾಸಿ ಭಾರತೀಯರು ವಿದೇಶಗಳಲ್ಲಿ ನೆಲೆಸಿದ್ದು, ಇದರಲ್ಲಿ ಶೇ.66 ರಷ್ಟು ಅಂದರೆ 88.8 ಲಕ್ಷ ಮಂದಿ ಯುಎಇ, ಸೌದಿ ಅರೇಬಿಯಾ, ಕತಾರ್ ಮುಂತಾದ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ. ಈ ರಾಷ್ಟ್ರಗಳು ಭಾರತಕ್ಕೆ ಪಾಲುದಾರಿಕೆಯನ್ನು ಹೊಂದಿದ್ದು, ವ್ಯಾಪಾರದ ಮೊತ್ತ 184 ಶತಕೋಟಿ ಡಾಲರ್ ದಾಟಿದೆ ಎಂದು ವಿವರಿಸಿದರು.
ಅನಿವಾಸಿ ಕನ್ನಡಿಗರಿಗೆ ಆರೋಗ್ಯ ಶಿಕ್ಷಣ ನೀಡುವುದರ ಜೊತೆಗೆ ನಮ್ಮ ಸಂಸ್ಕೃತಿಯನ್ನು ಇತರೆಡೆ ಬಿಂಬಿಸುವ ಕಾರ್ಯಕ್ರಮಗಳನ್ನು ಸಮಿತಿಯಿಂದ ಹಮ್ಮಿಕೊಳ್ಳಲಾಗಿದೆ. ಸೌದಿ ಅರೇಬಿಯಾದಲ್ಲಿ ಕನ್ನಡ ಸಂಘ ಪ್ರಾರಂಭ, ಅನಿವಾಸಿ ಕನ್ನಡಗರಿಗೆ ಗುರುತಿನ ಪತ್ರ ನೀಡಿಕೆ, ಯಶಸ್ವಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮತ್ತಿತರ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅನಿವಾಸಿ ಭಾರತೀಯ ಸಮಿತಿಯ ಸದಸ್ಯರು, ಹಲವು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸಮಿತಿಯ ಶಿಫಾರಸುಗಳು: ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಸರ್ಕಾರಕ್ಕೆ ಹಲವು ಶಿಫಾರಸುಗಳನ್ನು ಮಾಡಿದೆ.
ಕನ್ನಡಿಗ ಅನಿವಾಸಿ ಭಾರತೀಯರ ದತ್ತಾಂಶ ಸಂಗ್ರಹಣೆಗೆ ಕರ್ನಾಟಕ ಕಚೇರಿಯ ಜಾಲತಾಣ www.nriforumkarnataka.gov.in ನಲ್ಲಿ ಅನಿವಾಸಿ ಕನ್ನಡಿಗರ, ಕನ್ನಡ ಸಂಘಗಳ ಆನ್‍ಲೈನ್ ಯೋಜನೆಗೆ ಅವಕಾಶ ಸೃಜಿಸುವುದು, ಅನಿವಾಸಿ ಕನ್ನಡಿಗರಿಗೆ ಎನ್‍ಆರ್‌ಐ ಗುರುತಿನ ಚೀಟಿ ನೀಡುವುದು.
ಮಂಗಳೂರಿನಲ್ಲಿ ವೀಸಾ ಕೇಂದ್ರ ಸ್ಥಾಪನೆ, ಸೌದಿ ಅರೇಬಿಯಾದಲ್ಲಿ ಕನ್ನಡ ಭವನ ಸ್ಥಾಪನೆ, ಕೌಶಲ್ಯಾಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು ಮತ್ತಿತರ ಶಿಫಾರಸುಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಡಾ.ಆರತಿ ಕೃಷ್ಣ ತಿಳಿಸಿದರು.