ಉಪ್ಪಾರ ಜನಾಂಗವನ್ನು ಎಸ್.ಟಿ ವರ್ಗಕ್ಕೆ ಸೇರ್ಪಡೆಗೊಳಿಸಲು ಕೇಂದ್ರಕ್ಕೆ ಶಿಫಾರಸ್‌: ಸಿದ್ದರಾಮಯ್ಯ ಭರವಸೆ

| Published : Sep 01 2025, 01:03 AM IST

ಉಪ್ಪಾರ ಜನಾಂಗವನ್ನು ಎಸ್.ಟಿ ವರ್ಗಕ್ಕೆ ಸೇರ್ಪಡೆಗೊಳಿಸಲು ಕೇಂದ್ರಕ್ಕೆ ಶಿಫಾರಸ್‌: ಸಿದ್ದರಾಮಯ್ಯ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಉಪ್ಪಾರ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಗೊಳಿಸಲು ಈಗಾಗಲೇ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ವರದಿ ಕೂಡ ಸಲ್ಲಿಕೆಯಾಗಿದೆ. ಈ ವರದಿಯನ್ನು ಸದನದಲ್ಲಿ ಚರ್ಚಿಸಿ ಕೇಂದ್ರಕ್ಕೆ ಶಿಫಾರಸ್‌ ಮಾಡಲಾಗುವುದು. ಉಪ್ಪರ ಸಮುದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದ್ದು ಸಮುದಾಯವನ್ನು ಅಭಿವೃದ್ಧಿಪಡಿಸಿ ಸಮಾಜದ ಮುಖ್ಯ ವಾಹಿನಿಗೆ ತರಬೇಕಾಗಿದೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ಉಪ್ಪಾರ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಗೊಳಿಸಲು ಈಗಾಗಲೇ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ವರದಿ ಕೂಡ ಸಲ್ಲಿಕೆಯಾಗಿದೆ. ಈ ವರದಿಯನ್ನು ಸದನದಲ್ಲಿ ಚರ್ಚಿಸಿ ಕೇಂದ್ರಕ್ಕೆ ಶಿಫಾರಸ್‌ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಶ್ರೀಕಂಠೇಶ್ವರ ದೇವಾಲಯದ ದಾಸೋಹ ಭವನ ಆವರಣದಲ್ಲಿ ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ಭಗೀರಥ ಮಹರ್ಷಿ ಜಯಂತಿ ಮತ್ತು ಉಪ್ಪಾರ ಸಮುದಾಯ ಭವನದ ಸಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉಪ್ಪರ ಸಮುದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದ್ದು ಸಮುದಾಯವನ್ನು ಅಭಿವೃದ್ಧಿಪಡಿಸಿ ಸಮಾಜದ ಮುಖ್ಯ ವಾಹಿನಿಗೆ ತರಬೇಕಾಗಿದೆ ಎಂದರು.

ಜಾತಿ ವ್ಯವಸ್ಥೆಯ ಕಾರಣದಿಂದ ಸಮಾಜದಲ್ಲಿ ಅಸಮಾನತೆ ಜಾತಿ, ಚಾತುವರ್ಣ ವ್ಯವಸ್ಥೆಯ ಕಾರಣದಿಂದಾಗಿ ಶೋಷಿತರಿಗೆ ವಿದ್ಯೆ ಕಲಿಯುವ ಅವಕಾಶವಿರಲಿಲ್ಲ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಎಲ್ಲರಿಗೂ ಸಮಾನ ಅವಕಾಶ ದೊರೆತರೆ ಮಾತ್ರ ಅಸಮಾನತೆ ದೂರವಾಗಲು ಸಾಧ್ಯ. ಈ ನಿಟ್ಟಿನಲ್ಲಿ ನಾನು ಮುಖ್ಯಮಂತ್ರಿ ಆದ ನಂತರ ಎಲ್ಲಾ ವರ್ಗದ ದಾರ್ಶನಿಕರ ಸಮಾಜ ಸುಧಾರಕರ ಜಯಂತಿ ಆಚರಣೆ ಜಾರಿಗೆ ತಂದಿದ್ದೇನೆ. ಜೊತೆಗೆ ಬಸವಾದಿ ಶರಣರ ಸಮ ಸಮಾಜದ ನಿರ್ಮಾಣದ ಕನಸನ್ನು ನನಸು ಮಾಡುವ ಉದ್ದೇಶದಿಂದ ಹಾಗೂ ಎಲ್ಲಾ ಸಮುದಾಯಕ್ಕೂ ಸಮಾನ ಅವಕಾಶ ದೊರಕಿಸಿ ಅಸಮಾನತೆ ದೂರ ಮಾಡುವುದು, ಆರ್ಥಿಕವಾಗಿ ಶಕ್ತಿ ತುಂಬುವುದು ಕಾಂಗ್ರೆಸ್ ಸರ್ಕಾರದ ಆಶಯವಾಗಿದೆ. ಏಕೆಂದರೆ ಆರ್ಥಿಕವಾಗಿ ಸಬಲರಾಗ ಮಾತ್ರ ಜಾತಿ ಮತ್ತು ಬಡತನ ನಿರ್ಮೂಲನೆ ಸಾಧ್ಯವಾಗಲಿದೆ ಎಂದರು.

ಎಲ್ಲರಿಗೂ ಶಿಕ್ಷಣ ಹಾಗೂ ಆರ್ಥಿಕ ಸಮಾನತೆ ದೊರಕಿಸಿಕೊಡುವ ಸಲುವಾಗಿ ಹೋಬಳಿಗೆ ಒಂದು ವಸತಿ ಶಾಲೆಯಂತೆ ಸುಮಾರು 850 ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಅಲ್ಲದೆ ಎರಡನೇ ಅವಧಿಯ ಕಾಂಗ್ರೆಸ್ ಸರ್ಕಾರದಲ್ಲಿ ಗ್ಯಾರೆಂಟಿ ಯೋಜನೆ ಜಾರಿಗೆ ತಂದಿದ್ದೇನೆ. ಈ ಯೋಜನೆಯಿಂದಾಗಿ ಉದ್ಯೋಗ ಪ್ರಮಾಣದಲ್ಲಿ ಹೆಚ್ಚಾಗಿ ಬಡತನ ನಿರ್ಮೂಲನೆಯಾಗುತ್ತಿದೆ. ಸುಮಾರು 1.25 ಕೋಟಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. 1.62 ಕೋಟಿ ಫಲಾನುಭವಿಗಳು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ. ಈ ಯೋಜನೆಗಳಿಂದಾಗಿ ಶೋಷಿತ ಸಮಾಜಗಳು ತಮ್ಮ ಮಕ್ಕಳಿಗೆ ಶಿಕ್ಷಣ ಒದಗಿಸಬಹುದಾಗಿದೆ ಎಂದರು.

ಉಪ್ಪಾರ ಸಮುದಾಯ ಅಭಿವೃದ್ಧಿಗೆ ಒತ್ತು:

ಉಪ್ಪಾರ ಜನಾಂಗ ಬಹಳ ಒಳ್ಳೆಯ ಜನಾಂಗವಾಗಿದ್ದು ಕೊಟ್ಟ ಮಾತಿನಂತೆ ನಡೆಯುತ್ತಾರೆ. ಅಲ್ಲದೆ ನನಗೆ ಸದಾಕಾಲ ಬೆಂಬಲ ಕೊಡುತ್ತಾ ಬಂದಿದ್ದಾರೆ. ಆದ್ದರಿಂದಲೇ ಉಪ್ಪಾರ ಸಮುದಾಯದ ಅಭಿವೃದ್ಧಿಗಾಗಿ ನಿಗಮ ಮಂಡಳಿ ಸ್ಥಾಪಿಸಿದ್ದೇವೆ. ಜೊತೆಗೆ ಚಾಮರಾಜನಗರ ಕ್ಷೇತ್ರದಲ್ಲಿ ನಮಗೆ ಬೇಕಾದವರು ಇದ್ದರೂ ಕೂಡ ಅವರಿಗೆ ಟಿಕೆಟ್ ತಪ್ಪಿಸಿ ಪುಟ್ಟರಂಗಶೆಟ್ಟಿ ಅವರಿಗೆ ಟಿಕೆಟ್ ನೀಡಿ ಶಾಸಕರನ್ನಾಗಿ ಮಾಡಲಾಗಿದೆ. ಈ ಅವಧಿಯಲ್ಲಿ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮುಂದೆಯೂ ಕೂಡ ಅವರಿಗೆ ಉಜ್ವಲ ಭವಿಷ್ಯವಿದೆ. ಉಪ್ಪಾರ ಸಮುದಾಯ ಭವನಗಳಿಗೆ ಅನುದಾನ ಕೊಡಲು ನಿರ್ಧರಿಸಲಾಗಿದೆ. ತಳ ಸಮುದಾಯದ ಜನರು ಮೇಲಕ್ಕೆ ಬಂದಲ್ಲಿ ಸಂತೋಷಪಡುವುದು ನಮ್ಮೆಲ್ಲರ ಉದ್ದೇಶ ಎಂದರು.

ಉಪ್ಪಾರ ಸಮುದಾಯ ಭವನ ನಿರ್ಮಾಣ:

ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಕಳೆದ ಬಾರಿ 25 ಕೋಟಿ ವಿಶೇಷ ಅನುದಾನ ನೀಡಿದ್ದರು. ದೇವನೂರು ಏತ ನೀರಾವರಿ ಯೋಜನೆಗೆ 90 ಕೋಟಿ ರೂ. ಬಿಡುಗಡೆಗೊಳಿಸಿದ್ದಾರೆ. ಬದನವಾಳು ಗ್ರಾಮದ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರ ಅಭಿವೃದ್ಧಿಗೆ 40 ಕೋಟಿ ರೂ. ಅನುದಾನವನ್ನು ಬಜೆಟ್ ನಲ್ಲಿ ಘೋಷಿಸಿದ್ದಾರೆ. ಅಲ್ಲದೆ ಕಪಿಲಾ ನದಿ ಪ್ರವಾಹ ತಡೆಗೆ 70 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ತಯಾರಾಗಿದ್ದು ಶೀಘ್ರದಲ್ಲೇ ಅನುದಾನ ಬಿಡುಗಡೆ ಗೊಳಿಸುವ ಭರವಸೆ ಇದೆ ಎಂದರು.

ಉಪ್ಪಾರ ಸಮುದಾಯ ಭವನ ನಿರ್ಮಾಣಕ್ಕಾಗಿ ಮುಖ್ಯಮಂತ್ರಿಗಳು ತಮ್ಮ ವಿಶೇಷ ಅನುದಾನದ ಅಡಿಯಲ್ಲಿ ಒಂದು ಕೋಟಿ ರೂ. ಬಿಡುಗಡೆಗೊಳಿಸಿದ್ದಾರೆ. ಅಲ್ಲದೆ ಕ್ಷೇತ್ರಕ್ಕೆ ಸುಮಾರು 50 ಕೋಟಿ ರೂ. ವಿಶೇಷ ಅನುದಾನ ನೀಡಿದ್ದು, ಆ ಅನುದಾನದಲ್ಲಿ ಒಂದು ಕೋಟಿ ಅನುದಾನವನ್ನು ಸಮುದಾಯ ಭವನ ನಿರ್ಮಾಣಕ್ಕೆ ಮೀಸಲಿಡಲಾಗುವುದು, 25 ಲಕ್ಷ ರೂ. ಹಳೆಯ ಅನುದಾನವಿದ್ದು 2.25 ಕೋಟಿ ರು. ವೆಚ್ಚದಲ್ಲಿ ಉಪ್ಪಾರ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದರು.

6 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಅದನ್ನು ಪೂರ್ಣಗೊಳಿಸಲು ಅತಿಹೆಚ್ಚಿನ ಅನುದಾನವನ್ನು ನೀಡಬೇಕು ಎಂದು ಮನವಿ ಮಾಡಿದರು.

ಶಾಸಕ ಹಾಗೂ ಎಂ.ಎಸ್.ಐಎಲ್ ನಿಗಮದ ಅಧ್ಯಕ್ಷ ಪುಟ್ಟರಂಗಶೆಟ್ಟಿ ಮಾತನಾಡಿ, ಮಲೈ ಮಹದೇಶ್ವರ ಬೆಟ್ಟದಲ್ಲಿ ಉಪ್ಪಾರ ಸಮುದಾಯವು ಎಣ್ಣೆ -ಮಜ್ಜನ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದರು. ಅಭಿವೃದ್ಧಿ ಪ್ರಾಧಿಕಾರ ರಚನೆ ನಂತರ ಈ ಸೇವೆಗೆ ನಿರ್ಬಂಧ ಹೇರಲಾಗಿದ್ದು ಸರ್ಕಾರ ಸಮುದಾಯದ ಸೇವೆಗೆ ಅನುವು ಮಾಡಿಕೊಡಬೇಕು. ಜೊತೆಗೆ ನಾನು ಸಚಿವನಾಗಿದ್ದ ವೇಳೆ ಚಾಮರಾಜನಗರ ಮತ್ತು ಮೈಸೂರು ಜಿಲ್ಲಾದ್ಯಂತ ಉಪ್ಪಾರ ಸಮುದಾಯ ಭವನಗಳಿಗೆ ಅನುದಾನ ನೀಡಿದ್ದೆ. ಅದು ಒಂದು ಕಂತು ಮಾತ್ರ ಬಿಡುಗಡೆಗೊಂಡು ಕಾಮಗಾರಿ ಅಪೂರ್ಣಗೊಂಡಿದೆ. ಅವುಗಳನ್ನು ಪೂರ್ಣಗೊಳಿಸಲು ಸರ್ಕಾರ ಅನುದಾನ ಬಿಡುಗಡೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಉಪ್ಪರ ಸಮುದಾಯ ಕಾಂಗ್ರೆಸ್ ಸರ್ಕಾರಕ್ಕೆ ಅತಿ ಹೆಚ್ಚಿನ ಬೆಂಬಲ ನೀಡುತ್ತಾ ಬಂದಿದೆ. ಉಪ್ಪಾರ ಸಮುದಾಯದ ಅಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡಿದ್ದು, ಕಳೆದ ಎರಡೂವರೆ ವರ್ಷಗಳಲ್ಲಿ ಉಪ್ಪಾರ ಸಮುದಾಯದ ಬೀದಿಗಳ ಅಭಿವೃದ್ಧಿಗೆ ನಮ್ಮ ಸರ್ಕಾರ 34.24 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ ಎಂದರು.

ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 2.25 ಕೋಟಿ ರು. ವೆಚ್ಚದ ಉಪ್ಪಾರ ಸಮುದಾಯ ಭವನದ ನಿರ್ಮಾಣ ಕಾಮಗಾರಿಗೆ ರಿಮೋಟ್ ಒತ್ತುವ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.

ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಪಶು ಸಂಗೋಪನ ಸಚಿವ ಕೆ. ವೆಂಕಟೇಶ್, ಶಾಸಕರಾದ ಗಣೇಶ್ ಪ್ರಸಾದ್, ಅನಿಲ್ ಚಿಕ್ಕಮಾದು, ಎ.ಆರ್. ಕೃಷ್ಣಮೂರ್ತಿ, ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ. ಮಾರುತಿ, ಕಾಡಾ ಅಧ್ಯಕ್ಷ ಮರಿಸ್ವಾಮಿ, ವಾಲ್ಮೀಕಿ ನಿಗಮ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಸಿ.ಎಂ. ಶಂಕರ್, ಶ್ರೀಕಂಠನಾಯಕ, ಉಪ್ಪಾರ ಸಮುದಾಯದ ಜಿಲ್ಲಾಧ್ಯಕ್ಷ ಕರಳಾಪುರ ನಾಗರಾಜು, ಮುಖಂಡರಾದ ಎಚ್.ಎಸ್. ಮೂಗಶೆಟ್ಟಿ, ಕನಕನಗರ ಮಹದೇವು, ಕೂಡ್ಲಾಪುರ ರಾಜು, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ, ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ತಾಪಂ ಇಒ ಜೆರಾಲ್ಡ್ ರಾಜೇಶ್ ಮೊದಲಾದವರು ಇದ್ದರು.