ಸಾರಾಂಶ
ಕೊಳ್ಳೇಗಾದಲ್ಲಿ 250 ಹಾಸಿಗೆ ಸಾಮರ್ಥ್ಯದ ಜಿಲ್ಲಾಸ್ಪತ್ರೆ ನಿರ್ಮಾಣ ಮಾಡಲು ಮುಡಿಗುಂಡ ರೇಷ್ಮೆ ಇಲಾಖೆ ಜಾಗವನ್ನು ಅಧಿಕಾರಿಗಳ ಜೊತೆ ಶಾಸಕ ಎ ಆರ್ ಕೃಷ್ಣಮೂರ್ತಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೊಳ್ಳೇಗಾಲಕ್ಕೆ 250 ಹಾಸಿಗೆ ಸಾಮರ್ಥ್ಯದ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ತೀರ್ಮಾನ ಪ್ರಕಟಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆ ನಿರ್ಮಾಣಕ್ಕಾಗಿ ಅಧಿಕಾರಿಗಳ ಜೊತೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಸ್ಥಳ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಶಾಸಕರು, ಮೆಡಿಕಲ್ ಕಾಲೇಜು ಇರುವ ಜಿಲ್ಲೆಗೆ ಹೆಚ್ಚುವರಿ ಜಿಲ್ಲಾಸ್ಪತ್ರೆ ನೀಡಲು ಸರ್ಕಾರ ಚಿಂತನೆ ನಡೆಸಿದ್ದು ಅಂತೆಯೇ, ಜಿಲ್ಲೆಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಕೊಳ್ಳೇಗಾಲಕ್ಕೆ ಜಿಲ್ಲಾಸ್ಪತ್ರೆ ಘೋಷಣೆ ಮಾಡಿತ್ತು. ಹಾಗಾಗಿ ಪಟ್ಟಣದ ಮುಡಿಗುಂಡದಲ್ಲಿರುವ ರೇಷ್ಮೆ ಇಲಾಖೆಗೆ ಸೇರಿದ 13 ಎಕರೆಗೂ ಹೆಚ್ಚು ವಿಸ್ತೀರ್ಣದ ಜಾಗದಲ್ಲಿ ಕಚೇರಿ, ಫಾರಂ ಹೌಸ್ ಆಗಲಿ, ಚಾಕಿ ಸೆಂಟರ್ ಇರುವುದಿಲ್ಲ. ಹಲವಾರು ವರ್ಷಗಳಿಂದ ಇಲ್ಲಿ ಯಾವುದೇ ಕೆಲಸ ಕಾರ್ಯ ನಡೆಯುತ್ತಿಲ್ಲ. ಹೀಗಾಗಿ ಪ್ರಶಾಂತವಾಗಿರುವ ಈ ಜಾಗ ಜಿಲ್ಲಾ ಮಟ್ಟದ ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ ಜಾಗ ಎಂದು ಪರಿಗಣಿಸಲಾಗಿದ್ದು ಸರ್ಕಾರಕ್ಕೆ ಈಜಾಗದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸುವೆ ಎಂದರು. ಇಲ್ಲಿ ಸುಸಜ್ಜಿತ ಜಿಲ್ಲಾಸ್ಪತ್ರೆ ನಿರ್ಮಾಣವಾದರೆ ಕೇತ್ರದ ಜನತೆಗೂ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಲಭಿಸಲಿದೆ. ಈ ಆಸ್ಪತ್ರೆಯಿಂದ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ. ಸರ್ಕಾರದ ಈನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ, ನನ್ನ ಮನವಿ ಮೇರೆಗೆ ಇಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಸಂತಸ ತಂದಿದ್ದು ಇದು ಕ್ಷೇತ್ರದ ಜನತೆಯ ಆರೋಗ್ಯ ಸೇವೆಗೆ ಪೂರಕ ಮತ್ತು ವರದಾಯಕವಾಗಲಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಶಂಕರ್, ಸದಸ್ಯರಾದ ಪ್ರಕಾಶ್ ಶಂಕನಪುರ, ಶಾಂತರಾಜು, ಮಂಜುನಾಥ್, ಬಸ್ತಿಪುರ ರವಿ ಡಿಎಚ್‌ಒ ಡಾ.ಚಿದಂಬರ, ತಹಸೀಲ್ದಾರ್ ಬಸವರಾಜು, ರೇಷ್ಮೆ ಇಲಾಖೆ ಉಪನಿರ್ದೇಶಕ ರಾಚ ಪ್ಪಾಜಿ, ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.