ಆಫಜಲ್ಪುರ ಹಾಗೂ ಆಳಂದ ಜನತೆಗೆ ವರದಾನವಾಗಬೇಕಿದ್ದ ಕೆರೆ-ಕಟ್ಟೆ ತುಂಬಿಸುವ ಭೀಮಾ ಯೋಜನೆ ಅನುಷ್ಠಾನದಲ್ಲಿ ವಿಳಂಬ ಹಾಗೂ ಇತ್ತೀಚೆಗೆ ಎನ್‌ಎಚ್‌ಎಐ ಕಾಮಗಾರಿಯಿಂದಾಗಿ ಕೊಳವೆ ತುಂಡಾದರೂ ಸಂಬಂಧಪಟ್ಟವರು ಸ್ಪಂದಿಸದೆ ನಿರ್ಲಕ್ಷಿಸಿದ್ದನ್ನು ಖಂಡಿಸಿ 5 ದಿನಗಳಿಂದ ಕೊಳವೆ ತುಂಡಾದ ಅರ್ಜುಣಗಿ ಬಳಿ ಕೆಎಂಎಫ್‌ ಅಧ್ಯಕ್ಷ ಆರ್‌.ಕೆ ಪಾಟೀಲ್‌ ನೇತೃತ್ವದ ತರ ಹೋರಾಟಕ್ಕೆ ಜನ ಸ್ಪಂದನೆ ಹೆಚ್ಚುತ್ತಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿಆಫಜಲ್ಪುರ ಹಾಗೂ ಆಳಂದ ಜನತೆಗೆ ವರದಾನವಾಗಬೇಕಿದ್ದ ಕೆರೆ-ಕಟ್ಟೆ ತುಂಬಿಸುವ ಭೀಮಾ ಯೋಜನೆ ಅನುಷ್ಠಾನದಲ್ಲಿ ವಿಳಂಬ ಹಾಗೂ ಇತ್ತೀಚೆಗೆ ಎನ್‌ಎಚ್‌ಎಐ ಕಾಮಗಾರಿಯಿಂದಾಗಿ ಕೊಳವೆ ತುಂಡಾದರೂ ಸಂಬಂಧಪಟ್ಟವರು ಸ್ಪಂದಿಸದೆ ನಿರ್ಲಕ್ಷಿಸಿದ್ದನ್ನು ಖಂಡಿಸಿ 5 ದಿನಗಳಿಂದ ಕೊಳವೆ ತುಂಡಾದ ಅರ್ಜುಣಗಿ ಬಳಿ ಕೆಎಂಎಫ್‌ ಅಧ್ಯಕ್ಷ ಆರ್‌.ಕೆ ಪಾಟೀಲ್‌ ನೇತೃತ್ವದ ತರ ಹೋರಾಟಕ್ಕೆ ಜನ ಸ್ಪಂದನೆ ಹೆಚ್ಚುತ್ತಿದೆ. ಸೋಮವಾರ ಹೋರಾಟದ ಸ್ಥಳಕ್ಕೆ ಆಳಂದ ಶಾಸಕ ಬಿಆರ್‌ ಪಾಟೀಲ್‌, ಅಫಜಲ್ಪುರ ಶಾಸಕ ಎಂವೈ ಪಾಟೀಲ್‌ ಭೇಟಿ ನೀಡಿ ಬೆಂಬಲ ಸೂಚಿಸಿದರಲ್ಲದೆ ಹೆದ್ದಾರಿ ಪ್ರಾಧಿಕಾರಾದ ಅಲಕ್ಷತನ, ಜಿಲ್ಲಾಡಳಿತ, ಕೆಎನ್‌ಎನ್‌ಎಲ್‌ ಅಧಿಕಾರಿಗಳ ಅಲಕ್ಷತನವನ್ನೂ ಖಂಡಿಸಿದರು.ರೈತರ ನೀರಿನ ಪೈಪ್‌ಲೈನ್ ಕಾಮಗಾರಿ ವಿಳಂಬ ಮಾಡಿದರೆ ಅಧಿಕಾರಿಗಳನ್ನು ಗಿಡಕ್ಕೆ ಕಟ್ಟಿ ಚಾಟಿ ಏಟು ಕೊಡಬೇಕಾಗುತ್ತದೆ. ಜನರು ರೊಚ್ಚಿಗೆಳುವ ಮುನ್ನ ಕಾಮಗಾರಿ ಪೂರ್ಣಗೊಳಿಸಿ. ನಿಮ್ಮ ಸಿಇ ಎಲ್ಲಿದ್ದಾರೆ? ಖರೀದಿ, ಕಮಿಷನ್ ಇದೆ ಎಂದರೆ ಮಾತ್ರ ಮೂಗು ತೂರಿಸುತ್ತಾರೆ. ಹೀಗಾಗಿ ನಿಮ್ಮನ್ನು ವರ್ಗಾವಣೆ ಮಾಡುವಂತೆ ಅಫಜಲಪುರ ಶಾಸಕ ಎಂ.ವೈ. ಪಾಟೀಲ್ ಅವರೊಂದಿಗೆ ಸೇರಿ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದು ಆಳಂದ ಶಾಸಕ ಬಿ.ಆರ್. ಪಾಟೀಲ್ ಅವರು ನೀರಾವರಿ ನಿಗಮದ ಎಇಇ ಶಿವಕುಮಾರ್‌, ಹೆದ್ದಾರಿ ಪ್ರಾಧಿಕಾರದ ನವೀನ್‌ ಅವರನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡರು. ಈ ವೇಳೆ ಅಧಿಕಾರಿ ನವೀನ್‌ ಪ್ರತಿಕ್ರಿಯಿಸಿ, ಸೆ. 10ರೊಳಗೆ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದರು. ಅಸಮಾಧಾನಗೊಂಡ ಬಿ.ಆರ್. ಪಾಟೀಲ್ ಅವರು ಜನರು ರೊಚ್ಚಿಗೆಳುವ ಮುನ್ನ ಕೆಲಸ ಮುಗಿಸಿ ಎಂದು ತಾಕೀತು ಮಾಡಿದರು.

ಡೀಸಿ, ಸಿಇ ಪತ್ತೆಯಿಲ್ಲ: ನೀರಿಗಾಗಿ ರೈತರ ಹೋರಾಟ ಆರಂಭವಾಗಿ 5 ದಿನ ಉರುಳಿದರೂ ಕಲಬುರಗಿ ಡಿಸಿ, ನೀರಾವರಿ ನಿಗಮದ ಮುಖ್ಯ ಇಂಜಿನಿಯರ್‌, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯಾರೂ ಸ್ಪಂದಿಸಿಲ್ಲ. 2018 ರಲ್ಲಿ ಮಂಜೂರಾದ ಯೋಜನೆ 7 ವರ್ಷವಾದರೂ ಕುಂಟುತ್ತಿರೋದಕ್ಕೆ ಅಧಿಕಾರಿಗಳ ಅಲಕ್ಷತನ ಕಾರಣ. ಕಲಬುರಗಿ ಪ್ರಗತಿ ಪರಿಶೀಲನೆಯ ಯಾವ ಸಭೆಗಳಲ್ಲೂ ಈ ಯೋಜನೆಯ ಪರಿಶೀಲನೆ ನಡೆದಿಲ್ಲ.2017 ರ ಬಜೆಟ್‌ನಲ್ಲಿ 350 ಕೋಟಿ ರು. ಮೊತ್ತದ ಸದರಿ ಯೋಜನೆ ಅನುಷ್ಠಾನದಿಂದ ಅಫಜಲ್ಪುರ, ಆಳಂದಕ್ಕೆ ಅನುಕೂಲವಾಗಲಿದೆ. ಈ ಯೋಜನೆಯ 3 ನೇ ಹಂತ ಮುಗಿದಾಗ 21 ಕೆರೆ, ಅಮರ್ಜಾ ಕಟ್ಟೆ ತುಂಬಲಿವೆ ಎಂದು ಪಾಟೀಲ್‌ ಹೇಳಿದರು.ಶಾಸಕ ಎಂವೈ ಪಾಟೀಲ್‌ ಮಾತನಾಡಿ, ಭೀಮಾ ನದಿ ನೀರೆತ್ತಿ 21 ಕೆರೆ, ಅಮರ್ಜಾ ಅಣೆ ತುಂಬಿಸುವ ಯೋಜನೆ ಬಿಆರ್‌ ಪಾಟೀಲರ ಕನಸು. ರೈತರಲ್ಲಿ ನೀರಿಗಾಗಿ ಜಾಗೃತಿ ಮೂಡಿರೋದು ಸಂತಸ ತಂದಿದೆ ಎಂದರು. ಅಫಜಲ್ಪುರದ 10 ಕೆರೆ, ಆಳಂದದ 3 ಕೆರೆ ತುಂಬಿಸುವ ಈ ಯೋಜನೆ 3 ನೇ ಹಂತದಲ್ಲೂ ಇನ್ನೂ ಹೆಚ್ಚಿನ ಕೆರೆಗಳಿವೆ. ಸೆ. 10 ರೊಳಗೆ ಯೋಜನೆಯ ಕೊಳವೆ ದುರಸ್ಥಿಯಾಗದೆ ಹೋದಲ್ಲಿ ಪರಿಣಾಮ ನೆಟ್ಟಗಿರೋದಿಲ್ಲವೆಂದು ಎಚ್ಚರಿಸಿದರು.

ಮಳೆ ಬಾರದೆ ಭೀಕರ ಬರಗಾಲ ಎದುರಾಗಿರುವ ಸಂದರ್ಭದಲ್ಲಿ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆದಾರರು ಜನರೊಂದಿಗೆ ಚೆಲ್ಲಾಟ ಆಡಿದಂತೆ ವರ್ತಿಸುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಗುತ್ತಿಗೆದಾರರ ನಿಷ್ಕಾಳಜಿಯಿಂದ ಕಾಮಗಾರಿ ಮತ್ತಷ್ಟು ವಿಳಂಬವಾಗುವ ಆತಂಕವಿದೆ. ಆರ್.ಕೆ. ಪಾಟೀಲ್ ಅವರು ಜನರ ಪರವಾಗಿ ನ್ಯಾಯಯುತ ಹೋರಾಟ ನಡೆಸುತ್ತಿದ್ದಾರೆ. ನಾವು ಅವರೊಂದಿಗೆ ಇದ್ದೇವೆ. ಪೈಪ್‌ಲೈನ್ ಜೋಡಣೆ ಪೂರ್ಣಗೊಳ್ಳುವವರೆಗೆ ಧರಣಿ ಕೈಬಿಡಬೇಡಿ ಎಂದು ಶಾಸಕ ಬಿಆರ್‌ ಪಾಟೀಲ್‌ ಹೇಳಿದರು.ಮಾಜಿ ಜಿಪಂ ಸದಸ್ಯ ಸಿದ್ದರಾಮ ಪ್ಯಾಟಿ ಮಾತನಾಡಿದರು. ಅತನೂರಿನ ಗುರುಬಸವ ಶಿವಾಚಾರ್ಯರು ಹಾಗೂ ಆಳಂದ ಶ್ರೀಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಜಿಪಂ ಮಾಜಿ ವಿಪಕ್ಷ ನಾಯಕ ಶಿವಾನಂದ ಪಾಟೀಲ್‌, ಮತೀನ್‌ ಪಟೇಲ್‌, ಕಲಬುರಗಿ ಎಪಿಎಂಸಿ ಅಧ್ಯಕ್ಷ ಮಂಜುನಾಥ ಅಂಜುಟಗಿ, ಬಡದಾಳ ಮಾಜಿ ಗ್ರಾ.ಪಂ ಸದಸ್ಯ ದತ್ತು ಅರ್ಜುಣಗಿ, ಮಲ್ಲಿನಾಥ ಅತನೂರೆ, ಮಡಿವಾಳಪ್ಪ ಗಂಗಾ, ಶಿವಾನಂದ ನಿಲಂಗಿ, ಡಾ. ಭೀಮಾಶಂಕರ ಜಮಾದಾರ, ಶಿವಾನಂದ ಗಾಡಿಸಾಹುಕಾರ, ಸುಭಾಷ ಪೊಲೀಸಪಾಟೀ, ಲಚ್ಚಪ್ಪ ಜಮಾದಾರ್‌, ರೈತರು ಇದ್ದರು.

ಸೆ.3 ರಂದು ಕಲಬುರಗಿಯಲ್ಲಿ ಸಭೆ: ಕೆರೆ ತುಂಬಿಸುವ ಯೋಜನೆಯ ಪೈಪ್‌ ತುಂಡಾದ ಪ್ರಕರಣದ ಬಗ್ಗೆ ವಿಸ್ತೃತ ಚರ್ಚೆ ನಡೆಸಲು ಡಿಸಿ ಇಕ್ರಮ್‌ ಶರೀಫ್‌ ನೇತೃತ್ವದಲ್ಲಿ ನೀರಾವರಿ ನಿಗಮ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಶಾಸಕರ ಸಭೆ ನಡೆಯಲಿದೆ. ಸಭೆಯಲ್ಲಿ ನಾವೂ ಉಪಸ್ಥಿತರಿದ್ದು ಯೋಜನೆಯ ಬಗ್ಗೆ, ಕೊಳವೆ ತುಂಡಾಗಿ ಆದ ತೊಂದರೆಗಳ ಬಗ್ಗೆ ಚರ್ಚೆ ನಡೆಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮದ ಬಗ್ಗೆಯೂ ಅಲ್ಲೇ ಇತ್ಯರ್ಥವಾಗಲಿದೆ ಎಂದು ಶಾಸಕರಾದ ಬಿಆರ್‌ ಪಾಟೀಲ್‌, ಎಂವೈ ಪಾಟೀಲ್‌ ತಿಳಿಸಿದರು.