ಸಾರಾಂಶ
ಬೆಂಗಳೂರು : ನಗರದಲ್ಲಿ ಭಾನುವಾರ 111.1 ಮಿಮೀ ಮಳೆ ಸುರಿದಿದ್ದು, ಇದು ಕಳೆದ 133 ವರ್ಷಗಳಲ್ಲೇ ಜೂನ್ ತಿಂಗಳ ಒಂದು ದಿನದಲ್ಲಿ ಸುರಿದ ಅತಿ ಹೆಚ್ಚಿನ ಮಳೆಯಾಗಿದೆ.ಮುಂಗಾರು ಮಳೆ ರಾಜ್ಯ ಪ್ರವೇಶಿಸುತ್ತಿದ್ದಂತೆ ಅಬ್ಬರಿಸಿದ್ದು, ಭಾನುವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಸಂಜೆ 5.30 ರಿಂದ ಸತತ ಮೂರು ಗಂಟೆಗೂ ಹೆಚ್ಚಿನ ಕಾಲ ಗಾಳಿ ಸಹಿತ ಭಾರೀ ಮಳೆ ಸುರಿದಿದೆ.
ನಗರದಲ್ಲಿ ಭಾನುವಾರ ಒಂದೇ ದಿನ 111.1 ಮಿಮೀ ಮಳೆ ಸುರಿದಿದೆ. ಇದು ಕಳೆದ 133 ವರ್ಷಗಳಲ್ಲೇ ಜೂನ್ ತಿಂಗಳಲ್ಲಿ ಒಂದು ದಿನದಲ್ಲಿ ಸುರಿದ ಅತಿ ಹೆಚ್ಚಿನ ಮಳೆಯಾಗಿದೆ. ಈವರೆಗೆ 1891ರ ಜೂನ್ 16ರಂದು ಸುರಿದ 101.6 ಮಿಮೀ ಮಳೆಯೇ ಅತಿಹೆಚ್ಚು ಮಳೆ ಎಂದು ದಾಖಲಾಗಿತ್ತು. ಭಾನುವಾರದ ಮಳೆ ಆ ದಾಖಲೆಯನ್ನು ಮುರಿದಿದೆ.1891ರ ಜೂನ್ 16ರಂದು ಸುರಿದ 101.6 ಮಿ.ಮೀ. ಮಳೆಯನ್ನು ಹೊರತುಪಡಿಸಿ 2013ರ ಜೂನ್ 1ರಂದು 100 ಮಿಮೀ ಮಳೆಯಾಗಿತ್ತು. ಹಾಗೆಯೇ, 2009ರ ಜೂನ್ 11ರಂದು 89.6 ಮಿಮೀ ಮಳೆ ಸುರಿದಿತ್ತು. ಈ ಎರಡು ದಿನ ಅತಿಹೆಚ್ಚು ಮಳೆ ಸುರಿದ ನಂತರದ ದಿನಗಳಾಗಿವೆ.
ಇನ್ನು, ಮುಂಗಾರು ಮಳೆ ಬೆಂಗಳೂರು ನಗರ ಪ್ರವೇಶಿಸುತ್ತಿದ್ದಂತೆ ಅಬ್ಬರಿಸಿದ್ದು, ಭಾನುವಾರ ನಗರದೆಲ್ಲೆಡೆ ಭಾರೀ ಮಳೆಯಾಗಿದೆ. ಅದರ ಪರಿಣಾಮ ಬಿಬಿಎಂಪಿ ಸಹಾಯವಾಣಿಗೆ ಮರ, ಕೊಂಬೆಗಳು ಬಿದ್ದಿದ್ದು, ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳಲ್ಲಿ ನೀರು ನಿಂತಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದ್ದು ಸೇರಿದಂತೆ ಇನ್ನಿತರ ವಿಚಾರವಾಗಿ ಭಾನುವಾರ ಒಂದೇ ದಿನ 926 ದೂರುಗಳು ದಾಖಲಾಗಿವೆ. ಅದರಲ್ಲಿ 265 ಮರಗಳು ಬಿದ್ದಿದ್ದು, 309 ಮರದ ಕೊಂಬೆಗಳು ಬಿದ್ದಿದ್ದೂ ಸೇರಿದೆ. ಹಾಗೆಯೇ, 64 ಕಡೆ ಮನೆಗಳಿಗೆ ನೀರು ನುಗ್ಗಿದ್ದು, 261 ಎಲೆಕ್ಟ್ರಿಕ್ ಕಂಬಗಳು ಬಿದ್ದಿರುವುದು, 27 ರಸ್ತೆಗಳಲ್ಲಿ ನೀರು ನಿಂತಿರುವುದು ಸೇರಿದಂತೆ ಇನ್ನಿತರ ದೂರುಗಳು ಸೇರಿವೆ.
ಭಾನುವಾರ ಬಿದ್ದ 265 ಮರಗಳ ಪೈಕಿ ಸೋಮವಾರದವರೆಗೆ 96 ಮರಗಳನ್ನು ತೆರವು ಮಾಡಲಾಗಿದೆ. ಅದೇ ರೀತಿ 309 ಮರದ ಕೊಂಬೆಗಳ ಪೈಕಿ 189 ಕೊಂಬೆಗಳನ್ನಷ್ಟೇ ತೆರವು ಮಾಡಲಾಗಿತ್ತು. ಹಾಗೆಯೇ, 261 ವಿದ್ಯುತ್ ಕಂಬಗಳ ಪೈಕಿ ಎಲ್ಲವನ್ನು ತೆರವು ಮತ್ತು ದುರಸ್ತಿ ಮಾಡಲಾಗಿದೆ. ಹೀಗೆ ಒಟ್ಟು 926 ದೂರುಗಳ ಪೈಕಿ ಬಿಬಿಎಂಪಿ ಸೇರಿದಂತೆ ಇನ್ನಿತರ ಇಲಾಖೆಗಳು 630 ದೂರುಗಳನ್ನು ಪರಿಹರಿಸಿವೆ. ಒಟ್ಟಾರೆ ಬಿಬಿಎಂಪಿ ವ್ಯಾಪ್ತಿಯಲ್ಲಿ 265 ಮರಗಳು ಹಾಗೂ 309 ಮರದ ಕೊಂಬೆಗಳು ಧರೆಗುರುಳಿವೆ.
ಗುಂಡಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳ
ಮುಂಗಾರು ಪೂರ್ವ ಮಳೆಯಿಂದಾಗಿ ನಗರದಲ್ಲಿ 5 ಸಾವಿರಕ್ಕೂ ಹೆಚ್ಚಿನ ರಸ್ತೆ ಗುಂಡಿಗಳು ಸೃಷ್ಟಿಯಾಗಿದ್ದವು. ಅದರಲ್ಲಿ 4 ಸಾವಿರಕ್ಕೂ ಹೆಚ್ಚಿನ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದಾರೆ. ಭಾನುವಾರ ಸುರಿದ ಮಳೆಯಿಂದಾಗಿ ಉಳಿದ ಗುಂಡಿಗಳನ್ನು ಮುಚ್ಚುವುದಕ್ಕೆ ಮುನ್ನವೇ ಮತ್ತಷ್ಟು ಗುಂಡಿಗಳು ಸೃಷ್ಟಿಯಾಗುವಂತಾಗಿದೆ. ಬಿಬಿಎಂಪಿ ಅಧಿಕಾರಿಗಳ ಅಂದಾಜಿನ ಪ್ರಕಾರ ಸದ್ಯ 4 ಸಾವಿರ ಹೆಚ್ಚಿನ ಗುಂಡಿಗಳಿವೆ. ಅಲ್ಲದೆ, ಕೆಲವೆಡೆ ರಸ್ತೆಗಳಿಗೆ ಹೊಸದಾಗಿ ಹಾಕಿದ ಡಾಂಬಾರೇ ಕಿತ್ತು ಬಂದಿದ್ದು, ವಾಹನ ಸಂಚಾರ ದುಸ್ತರ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
)
)
;Resize=(128,128))
;Resize=(128,128))
;Resize=(128,128))