ಹಾಕಿ ಉತ್ಸವಕ್ಕೆ ದಾಖಲೆಯ 396 ತಂಡಗಳು ನೋಂದಣಿ: ಮುದ್ದಂಡ ರಶಿನ್ ಸುಬ್ಬಯ್ಯ

| Published : Mar 27 2025, 01:05 AM IST

ಹಾಕಿ ಉತ್ಸವಕ್ಕೆ ದಾಖಲೆಯ 396 ತಂಡಗಳು ನೋಂದಣಿ: ಮುದ್ದಂಡ ರಶಿನ್ ಸುಬ್ಬಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ಮುದ್ದಂಡ ಕಪ್ ಹಾಕಿ ಉತ್ಸವಕ್ಕೆ ಮಡಿಕೇರಿ ನಗರದಲ್ಲಿ ಅಂತಿಮ ಹಂತದ ಸಿದ್ಧತೆ ನಡೆದಿದ್ದು, ಬೆಳ್ಳಿ ಹಬ್ಬದ ಪ್ರಯುಕ್ತ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮುದ್ದಂಡ ಹಾಕಿ ಹಬ್ಬದ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ಮುದ್ದಂಡ ಕಪ್ ಹಾಕಿ ಉತ್ಸವಕ್ಕೆ ಮಡಿಕೇರಿ ನಗರದಲ್ಲಿ ಅಂತಿಮ ಹಂತದ ಸಿದ್ಧತೆ ನಡೆದಿದ್ದು, ಬೆಳ್ಳಿ ಹಬ್ಬದ ಪ್ರಯುಕ್ತ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮುದ್ದಂಡ ಹಾಕಿ ಹಬ್ಬದ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ತಿಳಿಸಿದ್ದಾರೆ.ಹಾಕಿ ಪಂದ್ಯಾವಳಿ ನಡೆಯುವ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ಕೊಡವ ಕುಟುಂಬಗಳ ದಾಖಲೆಯ 396 ತಂಡಗಳು ನೋಂದಾಯಿಸಿಕೊಂಡಿದ್ದು, ಮಡಿಕೇರಿಯ ಕೇಂದ್ರ ಸ್ಥಾನದಲ್ಲಿ ಪಂದ್ಯಾವಳಿ ನಡೆಯುತ್ತಿರುವುದು ಈ ಬಾರಿಯ ವಿಶೇಷ ಎಂದರು.ಪಂದ್ಯಾವಳಿಯ ಯಶಸ್ಸಿಗೆ ಸರ್ಕಾರದ ಸಂಪೂರ್ಣ ಸಹಕಾರ ಇದ್ದು, ಬೇಡಿಕೆಗಳನ್ನು ಈಡೇರಿಸುವ ಭರವಸೆ ದೊರೆತಿದೆ. ಜಿಲ್ಲೆಯ ಶಾಸಕದ್ವಯರು ಹಾಗೂ ಸಂಸದರು ಮೊದಲ ದಿನದಿಂದಲೂ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳ ಎಲ್ಲ ಕೊಡವ ಸಮಾಜಗಳು ಹಾಗೂ ಕೊಡವ ಕೇರಿಗಳ ಸಹಕಾರವನ್ನು ಪಡೆಯಲಾಗಿದ್ದು, ಹಾಕಿ ಉತ್ಸವ ಯಶಸ್ವಿಯಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಏ.26ರಂದು ಸೈಕ್ಲೋಥಾನ್:

ಏ.26ರಂದು ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ವರೆಗೆ ಸುಮಾರು 83 ಕಿ.ಮೀ. ಸೈಕ್ಲೋಥಾನ್ ನಡೆಯಲಿದೆ. ಮೈದಾನದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಕುಳಿತುಕೊಳ್ಳಬಹುದಾದ ಗ್ಯಾಲರಿ ನಿರ್ಮಾಣ ಮಾಡಲಾಗಿದ್ದು, 35 ಪುಡ್ ಸ್ಟಾಲ್‌ಗಳು ಇರಲಿದೆ ಎಂದು ಹೇಳಿದರು.

ಮಹಿಳಾ ಹಾಕಿ ವಿಶೇಷ:

ಬೆಳ್ಳಿ ಮಹೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಮುದ್ದಂಡ ಹಾಕಿ ಉತ್ಸವದಲ್ಲಿ ಮಹಿಳಾ ತಂಡಗಳ ನಡುವೆ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಈಗಾಗಲೇ 40 ತಂಡಗಳು ನೋಂದಾಯಿಸಿಕೊಂಡಿವೆ. ಸೆಮಿಫೈನಲ್ ಸಂದರ್ಭ ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ಲಾಲ್ ರಿಮ್ ಸಿಯಾಮಿ ಆಗಮಿಸಿದ ಹಾಕಿ ಕ್ರೀಡೆಯ ಕುರಿತು ಮಾಹಿತಿ ನೀಡಲಿದ್ದಾರೆ. ಭಾರತೀಯ ಪುರುಷರ ಹಾಕಿ ತಂಡದ ನಾಯಕ ಹಾಗೂ ಒಲಿಂಪಿಯನ್ ಮನ್‌ಪ್ರೀತ್ ಸಿಂಗ್ ಕೂಡ ಪಂದ್ಯಾವಳಿಯ ಸಂದರ್ಭ ಪಾಲ್ಗೊಳ್ಳಲಿದ್ದಾರೆ. ಸೆಮಿಫೈನಲ್ ಪಂದ್ಯಾವಳಿಗೆ ಹಿರಿಯ ರಾಜಕರಣಿ ಅಜಯ್ ಮಕೆನ್ ಆಗಮಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.ಮಾ.28ರಂದು ಮಡಿಕೇರಿಯ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಹಾಕಿ ಉತ್ಸವ ಉದ್ಘಾಟನೆಗೊಳ್ಳಲಿದೆ. ಅಂದು ಬೆಳಗ್ಗೆ 9.45ಕ್ಕೆ ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಫೀ.ಮಾ.ಕಾರ್ಯಪ್ಪ ಕಾಲೇಜು ಮೈದಾನದ ವರೆಗೆ ಕೊಡವ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಮೆರವಣಿಗೆ ನಡೆಯಲಿದ್ದು, ನಂತರ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಾಗುವುದು. ಸಭಾ ಕಾರ್ಯಕ್ರಮವನ್ನು ವಿರಾಜಪೇಟೆ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಅರ್ಜುನ ಪ್ರಶಸ್ತಿ ವಿಜೇತ ಒಲಿಂಪಿಯನ್ ಅಂಜಪರವಂಡ ಬಿ. ಸುಬ್ಬಯ್ಯ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ, ಅತಿಥಿಗಳಾಗಿ ಜಿಲ್ಲಾಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕೊಡಗು ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಅಶೋಕ್ ಸಂಗಪ್ಪ ಆಲೂರ, ಮಾಜಿ ಶಾಸಕರಾದ ಮಂಡೇಪಂಡ ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ, ಮಂಡೇಪಂಡ ಸುನಿಲ್ ಸುಬ್ರಮಣಿ ಹಾಗೂ ಚೆಪ್ಪುಡಿರ ಅರುಣ್ ಮಾಚಯ್ಯ ಪಾಲ್ಗೊಳ್ಳಲಿದ್ದಾರೆ. ಮುದ್ದಂಡ ಕುಟುಂಬದ ಅಧ್ಯಕ್ಷ ಮುದ್ದಂಡ ಬಿ. ದೇವಯ್ಯ ಹಾಗೂ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಉಪಸ್ಥಿತರಿರುವರು.ಮುದ್ದಂಡ ಹಾಕಿ ಹಬ್ಬದ ಉಪಾಧ್ಯಕ್ಷ ಡೀನ್ ಬೋಪಣ್ಣ ಮಾತನಾಡಿ, ಪಂದ್ಯಾವಳಿ ವೀಕ್ಷಣೆಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರ ಅನುದಾನದಲ್ಲಿ 1,500 ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ದಿಲೀಪ್ ನಾಚಪ್ಪ ಹಾಗೂ ಯಲದಾಳು ಮನೋಜ್ ಬೋಪಯ್ಯ ಅವರ ಜಾಗದಲ್ಲಿ 1,000 ವಾಹನದ ನಿಲುಗಡೆ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 2,500 ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.ಮುದ್ದಂಡ ಕುಟುಂಬದ ಗೌರವಾಧ್ಯಕ್ಷ ಮುದ್ದಂಡ ಬಿ.ದೇವಯ್ಯ ಮಾತನಾಡಿ, ಮುದ್ದಂಡ ಕಪ್ ಹಾಕಿ ಉತ್ಸವವು ಜಿಲ್ಲೆಯಲ್ಲಿ ದಸರಾ ಹಬ್ಬದಂತೆ ನಡೆಯಲಿದ್ದು, ಕೊಡವ ಜನಾಂಗ ಹಾಗೂ ಕೊಡವೇತರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕೋರಿದರು.ಸುದ್ದಿಗೋಷ್ಠಿಯಲ್ಲಿ ಮುದ್ದಂಡ ಹಾಕಿ ಹಬ್ಬದ ಕಾರ್ಯದರ್ಶಿ ಆದ್ಯ ಪೂವಣ್ಣ ಇದ್ದರು.