ಕಲಾವಿದರ ಸಾಧನೆಗಳ ದಾಖಲೆ ಸಂಗ್ರಹ: ಪ್ರೊ. ಹಿ.ಚಿ.ಬೋರಲಿಂಗಯ್ಯ

| Published : Sep 10 2024, 01:34 AM IST

ಕಲಾವಿದರ ಸಾಧನೆಗಳ ದಾಖಲೆ ಸಂಗ್ರಹ: ಪ್ರೊ. ಹಿ.ಚಿ.ಬೋರಲಿಂಗಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಪ್ರತಿ ಗ್ರಾಮದಲ್ಲೂ ಜನಪದ ಕಲಾವಿದರಿದ್ದು ಅವರ ಜೀವನ-ಸಾಧನೆಗಳನ್ನು ಸಂಗ್ರಹಿಸಿ ದಾಖಲೀಕರಿಸುವ ಕೆಲಸವನ್ನು ಜಾನಪದ ಪರಿಷತ್ತು ಮಾಡುತ್ತಿದೆ. ಈ ಮೂಲಕ ಕಲಾವಿದರ ಚರಿತ್ರೆ ಕಟ್ಟುವ ಕೆಲಸ ಮಾಡಲಾಗುತ್ತದೆ ಎಂದು ಜಾನಪದ ಪರಿಷತ್‌ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಹೇಳಿದರು.

ರಾಮನಗರ: ಪ್ರತಿ ಗ್ರಾಮದಲ್ಲೂ ಜನಪದ ಕಲಾವಿದರಿದ್ದು ಅವರ ಜೀವನ-ಸಾಧನೆಗಳನ್ನು ಸಂಗ್ರಹಿಸಿ ದಾಖಲೀಕರಿಸುವ ಕೆಲಸವನ್ನು ಜಾನಪದ ಪರಿಷತ್ತು ಮಾಡುತ್ತಿದೆ. ಈ ಮೂಲಕ ಕಲಾವಿದರ ಚರಿತ್ರೆ ಕಟ್ಟುವ ಕೆಲಸ ಮಾಡಲಾಗುತ್ತದೆ ಎಂದು ಜಾನಪದ ಪರಿಷತ್‌ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಹೇಳಿದರು.

ಜಾನಪದ ಲೋಕದ ಸಹಕಾರದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಹಮ್ಮಿಕೊಂಡಿದ್ದ ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನ ಲೋಕ ಸಿರಿ-೯೮ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾನಪದ ವಿಶ್ವವಿದ್ಯಾಲಯದ ಜೊತೆ ಜನಪದ ಕಲಾವಿದರ ವಿಶ್ವಕೋಶವನ್ನು ಜಾನಪದ ಪರಿಷತ್ತು ಮಾಡಲು ಚಿಂತನೆ ನಡೆಸಿದೆ. ಇದರಿಂದ ಜನಪದರ ಕಲೆ, ಕಲೆಯ ವೈವಿಧ್ಯ, ಅಪರೂಪದ ಕಲೆಗಳನ್ನು ದಾಖಲಿಸುವ ಕೆಲಸ ಆಗುತ್ತದೆ. ನಾವು ಆಳುವ ಚರಿತ್ರೆಯನ್ನು ಓದುತ್ತಿದ್ದೇವೆ. ಆದರೆ ಜನಸಾಮಾನ್ಯರ, ಕಲಾವಿದರ, ಬಡವರ ಚರಿತ್ರೆ ಬರೆಯಬೇಕು ಎಂದು ಹೇಳಿದರು.

ಸಂಸ್ಕೃತಿ ಚಿಂತಕ ಹಾಗೂ ಲೇಖಕ ಶ್ರೀಧರ ಅಗಲಾಯ ಮಾತನಾಡಿ, ನಾನು ಚಿಂತನೆಗಿಂತ ಕ್ರಿಯೆಯಲ್ಲಿ ನಂಬಿಕೆ ಇಟ್ಟವನು. ವಿಶ್ವ ಮಟ್ಟದಲ್ಲಿ ಹೇಗೆ ಜಾನಪದವನ್ನು ಪ್ರಚಾರ ಮಾಡಬೇಕು ಎನ್ನುವುದನ್ನು ಅರಿತುಕೊಳ್ಳಬೇಕು ಎಂದರು.ಸಾಹಿತಿ ವಿಜಯ್‌ ರಾಂಪುರ ಮಾತನಾಡಿ, ಜನಪದರ ಜ್ಞಾನ ಅಪಾರವಾದದ್ದು, ನಾಡಿಗೆ ಬರ ಬಂದರೂ ಕಲೆಗೆ ಎಂದಿಗೂ ಬರ ಬಂದಿಲ್ಲ ಎಂದರು.

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಯಾಚೇನಹಳ್ಳಿಯ ಸೋಬಾನೆ ಕಲಾವಿದೆ ಚನ್ನಾಜಮ್ಮ ಗೌರವ ಸ್ವೀಕರಿಸಿ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿ, ಕಲಿಕೆಯ ಆಸಕ್ತಿಯಿಂದ ಎಳೆಯ ವಯಸ್ಸಿನಲ್ಲೆ ಊರಿನ ಹಿರಿಯರ ಜೊತೆ ನಾಟಿ ಹಾಕುವಾಗ, ರಾಗಿ ಬೀಸುವಾಗ, ಮದುವೆ ಸಮಾರಂಭಗಳಲ್ಲಿ ಕೇಳಿಸಿಕೊಂಡು ಕುಂತಾಗ, ನಿಂತಾಗ, ಗುನುಗುತ್ತಾ ಹಾಡುಗಳನ್ನು ಕೇಳುತ್ತಾ ಕಲಿತೆ, ಇಂದು ಜಾನಪದ ಲೋಕದಲ್ಲಿ ಗೌರವ ಸ್ವೀಕರಿಸಿ ಸಂತೋಷವಾಗಿದೆ. ಕಲೆ ಉಳಿವಿಗೆ ನಮ್ಮ ಮಕ್ಕಳು ಮೊಮ್ಮಕ್ಕಳಿಗೆ ಕಲೆಯನ್ನು ಕಲಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ತಮ್ಮ ಕಂಚಿನ ಕಂಠದಿಂದ ಬೈರವೇಶ್ವರ, ಮಾದೇಶ್ವರನ ಕುರಿತ ಗೀತೆಗಳನ್ನು ಹಾಗೂ ದಾರೆ ಎರೆಯುವ ಪದ, ಜರಿಯೋ ಪದ, ಅಣ್ಣ ತಂಗಿಯರ ಮೇಲಿನ ಪದಗಳನ್ನು ಹಾಡಿದರು. ತಮ್ಮ ತಂಡದ ಹಾಡುಗಾರ್ತಿಯರಾದ ರಾಜಮ್ಮ, ನಿಂಗಮ್ಮ, ಮಂಚಮ್ಮ, ರಾಜಮ್ಮ ದನಿ ಗೂಡಿಸಿದರು.

ಕ್ಯೂರೇಟರ್ ಡಾ.ರವಿ ಯು.ಎಂ ಕಲಾವಿದರೊಂದಿಗೆ ಸಂವಾದ ನಡೆಸಿಕೊಟ್ಟರು. ಸಂಶೋಧನಾ ಸಂಚಾಲಕ ಡಾ. ಸಂದೀಪ್ ಕೆ.ಎಸ್, ಯುವ ಚಿಂತಕ ಅಬ್ಬೂರು ಶ್ರೀನಿವಾಸ್, ಜಾನಪದ ಲೋಕದ ಸಿಬ್ಬಂದಿ, ಡಿಪ್ಲೊಮೊ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪೊಟೋ೯ಸಿಪಿಟಿ೯: ರಾಮನಗರ ಜಾನಪದ ಲೋಕದಲ್ಲಿ ಹಮ್ಮಿಕೊಂಡಿದ್ದ ಲೋಕಸಿರಿ-೯೮ ಕಾರ್ಯಕ್ರಮದಲ್ಲಿ ಸೋಬಾನೆ ಕಲಾವಿದೆ ಚನ್ನಾಜಮ್ಮ ಅವರನ್ನು ಗೌರವಿಸಲಾಯಿತು.