ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಾಗೂ ವಸತಿಯುತ ಪ್ರೌಢಶಾಲೆಗಳ ಫಲಿತಾಂಶ ಶೇ. 100ರಷ್ಟು ಬರುವಂತೆ ಶಿಕ್ಷಕರು ಶ್ರಮಿಸಬೇಕು.

ಕನ್ನಡಪ್ರಭ ವಾರ್ತೆ ಮುಂಡರಗಿ

ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಾಗೂ ವಸತಿಯುತ ಪ್ರೌಢಶಾಲೆಗಳ ಫಲಿತಾಂಶ ಶೇ. 100ರಷ್ಟು ಬರುವಂತೆ ಶಿಕ್ಷಕರು ಶ್ರಮಿಸಬೇಕು. ಕೇವಲ ಉತ್ತೀರ್ಣತೆ ಮಾತ್ರವಲ್ಲದೆ, ಪ್ರತಿಯೊಬ್ಬ ವಿದ್ಯಾರ್ಥಿಯೂ ಶೇ. 60ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಗುಣಾತ್ಮಕ ಫಲಿತಾಂಶ ದಾಖಲಿಸುವಂತಾಗಬೇಕು ಎಂದು ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣೀಗೇರಿ ಕರೆ ನೀಡಿದರು.

ತಾಲೂಕಿನ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ನೂರಕ್ಕೆ ನೂರರಷ್ಟು ಸಾಧಿಸುವ ಹಾಗೂ ಗುಣಾತ್ಮಕ ಫಲಿತಾಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶನಿವಾರ ಕೊರ್ಲಹಳ್ಳಿಯ ಆದರ್ಶ ವಿದ್ಯಾಲಯದಲ್ಲಿ (ಆರ್.ಎಂ.ಎಸ್.ಎ) ವಿಷಯ ಶಿಕ್ಷಕರಿಗಾಗಿ ಮಿಷನ್ 60+ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಕಳೆದ ಸಾಲಿನಲ್ಲಿ ತಾಲೂಕಿನ 40 ಪ್ರೌಢಶಾಲೆಗಳ ಪೈಕಿ 25 ಶಾಲೆಗಳು ಶೇ. 100ರಷ್ಟು ಫಲಿತಾಂಶ ಸಾಧಿಸಿವೆ. ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಒಟ್ಟು 43 ಪ್ರೌಢಶಾಲೆಗಳಿದ್ದು, ಎಲ್ಲಾ ಶಾಲೆಗಳು ಶೇ. 100 ಫಲಿತಾಂಶದ ಗುರಿ ಮುಟ್ಟಬೇಕು. ಮಂಡಳಿಯ ನೀಲನಕಾಶೆ, ಮಾದರಿ ಪ್ರಶ್ನೆಪತ್ರಿಕೆಗಳು ಹಾಗೂ ಪೂರ್ವಭಾವಿ ಪರೀಕ್ಷೆಗಳ ಫಲಿತಾಂಶವನ್ನು ವಿಶ್ಲೇಷಿಸಿ, ಸರ್ಕಾರ ರೂಪಿಸಿರುವ 29 ಅಂಶಗಳ ಕಾರ್ಯಕ್ರಮವನ್ನು ತರಗತಿ ಕೋಣೆಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ತಾಲೂಕಿನ 130 ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯ ಶಿಕ್ಷಕರಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಹಂಸವಾಣಿ ಕೆ.ಆರ್. ಹಾಗೂ ಮುಂಡರಗಿ ತಾಲೂಕು ನೋಡಲ್ ಅಧಿಕಾರಿ, ಉಪನ್ಯಾಸಕ ಯಲ್ಲಪ್ಪ ಹಂದ್ರಾಳ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿ ಮನೋಹರ ಪ್ರಾಸ್ತಾವಿಕವಾಗಿ ಮಾತನಾಡಿ ತರಬೇತಿಯ ಉದ್ದೇಶ ವಿವರಿಸಿದರು. ಪ್ರೌಢ ವಿಭಾಗದ ಸಂಪನ್ಮೂಲ ವ್ಯಕ್ತಿ ಹನುಮರೆಡ್ಡಿ ಇಟಗಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿ ಆರ್.ಬಿ. ಗುಡಗೂರ ವಂದಿಸಿದರು.