ಸಾರಾಂಶ
ಗ್ರಾಮೀಣ ಕೃಷಿ ಸಹಕಾರಿ ಸಂಘದಲ್ಲಿ ಗುರುವಾರ ರೈತರು ದಾಖಲೆಯ ಪ್ರಮಾಣದಲ್ಲಿ ಅಡಕೆ ಹಾಗೂ ತೆಂಗು ಮಾರಾಟಕ್ಕೆ ತಂದಿದ್ದಾರೆ.
ಕುಮಟಾ: ತಾಲೂಕಿನ ಕತಗಾಲದಲ್ಲಿರುವ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದಲ್ಲಿ ಗುರುವಾರ ರೈತರು ದಾಖಲೆಯ ಪ್ರಮಾಣದಲ್ಲಿ ಅಡಕೆ ಹಾಗೂ ತೆಂಗು ಮಾರಾಟಕ್ಕೆ ತಂದಿದ್ದಾರೆ.
ಮಳೆಗಾಲ ಪೂರ್ವ ಮಾರುಕಟ್ಟೆ ಅನಿಶ್ಚಿತತೆಯ ನಡುವೆ ಅಳಕೋಡ ಪಂಚಾಯಿತಿ ವ್ಯಾಪ್ತಿ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರು ಹೆಚ್ಚಿನ ಪ್ರಮಾಣದಲ್ಲಿ ಅಡಕೆ - ತೆಂಗು ಹಾಗೂ ಇತರ ಕೃಷಿ ಉತ್ಪನ್ನಗಳನ್ನು ಒಂದೇ ದಿನ ಮಾರುಕಟ್ಟೆಗೆ ತಂದಿರುವುದು ಗಮನಸೆಳೆದಿದೆ. ಈ ಪೈಕಿ ಸುಮಾರು ೩೫೦ ಕ್ವಿಂಟಲ್ ಅಡಿಕೆ, ೧೨೦ ಕ್ವಿಂಟಲ್ ತೆಂಗಿನ ಕಾಯಿ ಸೊಸೈಟಿಗೆ ಬಂದಿತ್ತು. ಸದ್ಯ ಹೊಸ ಚಾಲಿಗೆ ಕ್ವಿಂಟಲ್‌ಗೆ ₹೪೩,೪೦೦ ಹಾಗೂ ಹಳೆ ಚಾಲಿಗೆ ₹೪೩,೨೯೯ ದರ ದಾಖಲಾಗಿದೆ. ಮುಖ್ಯವಾಗಿ ತೆಂಗಿನಕಾಯಿ ಕೆಜಿಗೆ ₹೬೧.೫೦ ಅತ್ಯುತ್ತಮ ದರ ದಾಖಲಿಸಿದ್ದು ಈ ಭಾಗದ ತೆಂಗು ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷ ವಿ.ಪಿ.ಹೆಗಡೆ, ನಿರ್ದೇಶಕ ಮಹೇಶ ದೇಶಭಂಡಾರಿ ಮಾತನಾಡಿ, ಅಡಕೆ, ತೆಂಗು ಮುಂತಾದ ಉತ್ಪನ್ನಗಳಿಗೆ ಈಗ ಉತ್ತಮ ದರ ಬಂದಿದೆ. ಅದರಲ್ಲೂ ತೆಂಗಿಗೆ ದಾಖಲೆಯ ದರ ಬಂದಿರುವುದು ತೆಂಗು ಬೆಳೆಗಾರರಿಗೆ ಉತ್ಸಾಹ ಮೂಡಿಸಿದೆ. ಈ ಭಾಗದ ತೆಂಗು ಬೆಳೆ ಮಾರಾಟಕ್ಕೆ ನಮ್ಮ ಸೊಸೈಟಿಯಲ್ಲಿ ಅವಕಾಶ ಕಲ್ಪಿಸಿರುವುದರಿಂದ ಕೃಷಿ ಉತ್ಪನ್ನಗಳನ್ನು ದೂರದ ಮಾರುಕಟ್ಟೆಗೆ ಸಾಗಿಸುವ ಅನಿವಾರ್ಯತೆ ಇಲ್ಲವಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸೊಸೈಟಿಯ ಮೂಲಕ ಅಡಕೆ-ತೆಂಗು ಮುಂತಾದ ಉತ್ಪನ್ನಗಳನ್ನು ಮಾರಾಟ ಮಾಡಿದ ರೈತರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ರೈತರು ಇನ್ನಷ್ಟು ಹೆಚ್ಚಿನಸಂಖ್ಯೆಯಲ್ಲಿ ನಮ್ಮ ಸೊಸೈಟಿಯ ಮೂಲಕ ತೋಟಗಾರಿಕೆ ಉತ್ಪನ್ನಗಳನ್ನು ಮಾರಾಟ ಮಾಡಲಿ ಎಂದರು.