ಬೇಸಿಗೆಯಲ್ಲಿ ದಾಖಲೆಯ ಮಾರಾಟವಾದ ಬಿಯರ್‌!

| Published : May 20 2024, 01:36 AM IST / Updated: May 20 2024, 12:51 PM IST

BEER

ಸಾರಾಂಶ

ಹಿಂದೆಂದೂ ಕಂಡು ಕೇಳರಿಯದಂತಹ ದಾಖಲೆ ಮಟ್ಟದ ಉಷ್ಣಾಂಶ ಈ ಬಾರಿ ವಿಜಯಪುರದ ಜನತೆಗೆ ಆಗಿದೆ. ಪ್ರತಿವರ್ಷ 38 ರಿಂದ 40 ಡಿಗ್ರಿವರೆಗೆ ಇರುತ್ತಿದ್ದ ತಾಪಮಾನ ಈ ಬಾರಿ ಬರೋಬ್ಬರಿ 45ಡಿಗ್ರಿವರೆಗೆ ತಲುಪಿದ್ದು, ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ.

ಶಶಿಕಾಂತ ಮೆಂಡೆಗಾರ

 ವಿಜಯಪುರ  : ಹಿಂದೆಂದೂ ಕಂಡು ಕೇಳರಿಯದಂತಹ ದಾಖಲೆ ಮಟ್ಟದ ಉಷ್ಣಾಂಶ ಈ ಬಾರಿ ವಿಜಯಪುರದ ಜನತೆಗೆ ಆಗಿದೆ. ಪ್ರತಿವರ್ಷ 38 ರಿಂದ 40 ಡಿಗ್ರಿವರೆಗೆ ಇರುತ್ತಿದ್ದ ತಾಪಮಾನ ಈ ಬಾರಿ ಬರೋಬ್ಬರಿ 45ಡಿಗ್ರಿವರೆಗೆ ತಲುಪಿದ್ದು, ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಇನ್ನೊಂದೆಡೆ ಬಿರು ಬೇಸಿಗೆಯ ಧಗೆ ತಾಳದೆ ಮದ್ಯಪ್ರಿಯರು ಅತೀ ಹೆಚ್ಚಿನ ಪ್ರಮಾಣದಲ್ಲಿ ಬಿಯರ್ ಸೇವಿಸಿ ದಾಖಲೆ ಬರೆದಿದ್ದಾರೆ. ಕಳೆದ ವರ್ಷ ಮಾರಾಟವಾಗಿದ್ದ ಬಿಯರ್ ಕೇಸ್(ಬಾಕ್ಸ್‌ಗಳು) ಎರಡು ಪಟ್ಟು ಈ ಬಾರಿ ಬಿಯರ್ ಬಾಕ್ಸ್‌ಗಳು ಮಾರಾಟವಾಗಿವೆ.

ಲಿಕ್ಕರ್ ಹಾಟ್, ಬಿಯರ್ ಕೋಲ್ಡ್:

ವರ್ಷಪೂರ್ತಿ ಲಿಕ್ಕರ್ ಸೇವಿಸುವ ಮದ್ಯಪ್ರಿಯರು ಬೇಸಿಗೆಯ ಸಂದರ್ಭದಲ್ಲಿ ಮಾತ್ರ ದೇಹಕ್ಕೆ ಬಿಸಿ ಅನುಭವ ಕೊಡುವ ಲಿಕ್ಕರ್ ನಿಂದ ದೂರವಾಗಿ ದೇಹಕ್ಕೆ ತಂಪಾದ ಅನುಭವ ಕೊಡುವ ಬಿಯರ್‌ಗೆ ಹತ್ತಿರವಾಗುತ್ತಾರೆ. ಹೀಗಾಗಿ ವರ್ಷಪೂರ್ತಿ ಆಗುವಷ್ಟು ಬಿಯರ್ ಮಾರಾಟ ಬೇಸಿಗೆಯ ಮಾರ್ಚ್, ಏಪ್ರಿಲ್ ಹಾಗೂ ಮೇ ಈ ಮೂರು ತಿಂಗಳಿನಲ್ಲಿ ಮಾರಾಟವಾಗುತ್ತದೆ.

ಎಲ್ಲ ಮದ್ಯದಂಗಡಿಗಳಿಂದಲೂ ಬೇಡಿಕೆ:

ವೈನ್‌ಶಾಪ್, ಬಾರ್, ಎಂಎಸ್‌ಐಎಲ್ ಸೇರಿದಂತೆ ವಿಜಯಪುರ ಜಿಲ್ಲೆಯಾದ್ಯಂತ 257 ಮದ್ಯದಂಗಡಿಗಳಿವೆ. ಬೆರಳೆಣಿಕೆಯಷ್ಟು ಹೊರತುಪಡಿಸಿದರೆ ಉಳಿದೆಲ್ಲ ಅಂಗಡಿಗಳಿಂದಲೂ ಕೇವಲ್ ಬಿಯರ್‌ಗೆ ಬೇಡಿಕೆ ಇದ್ದು, ಬೇಡಿಕೆಗಣುಗುಣವಾಗಿ ಅಬಕಾರಿ ಇಲಾಖೆಯ ಗೋದಾಮಿನಿಂದ ಅಂಗಡಿಗಳಿಗೆ ಮದ್ಯವನ್ನು ಪೂರೈಸಲಾಗಿದೆ ಎಂದು ಇನ್‌ಸ್ಪೆಕ್ಟರ್ ಮಹೇಶ ನಿಂಗಾರೆಡ್ಡಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

2023 ಬಿಯರ್ ಮಾರಾಟದ ವಿವರ:

ಮಾರ್ಚ್ ತಿಂಗಳಿನಲ್ಲಿ ₹13.21ಕೋಟಿ ಮೌಲ್ಯದ 73374 ಕೇಸ್‌ಗಳು ಮಾರಾಟವಾಗಿವೆ. ಏಪ್ರಿಲ್ ತಿಂಗಳಿನಲ್ಲಿ ₹12.57 ಕೋಟಿ ಮೌಲ್ಯದ 70450 ಕೇಸ್‌ಗಳು ಮಾರಾಟವಾಗಿವೆ. ಮೇ ತಿಂಗಳಿನಲ್ಲಿ ₹46.33ಕೋಟಿ ಮೌಲ್ಯದ 25569 ಕೇಸ್‌ಗಳು ಮಾರಾಟವಾಗಿವೆ

2024 ಬಿಯರ್ ಮಾರಾಟದ ವಿವರ:

ಮಾರ್ಚ್ ತಿಂಗಳಿನಲ್ಲಿ ₹15.61ಕೋಟಿ ಮೌಲ್ಯದ 84298 ಕೇಸ್‌ಗಳು ಮಾರಾಟವಾಗಿವೆ. ಏಪ್ರಿಲ್ ತಿಂಗಳಿನಲ್ಲಿ ₹16.92ಕೋಟಿ ಮೌಲ್ಯದ 88269 ಕೇಸ್‌ಗಳು ಮಾರಾಟವಾಗಿವೆ. ಮೇ 17ರ ವರೆಗೆ ₹88.96 ಕೋಟಿ ಮೌಲ್ಯದ 48969 ಕೇಸ್‌ಗಳು ಮಾರಾಟವಾಗಿವೆ.

ಲಿಕ್ಕರ್‌ಗಳಲ್ಲಿ ಬಿಯರ್ ದೇಹಕ್ಕೆ ತಂಪು ಕೊಡುತ್ತದೆ ಎಂಬ ಭಾವನೆಯಿಂದ ಜಿಲ್ಲೆಯ ಮದ್ಯಪ್ರಿಯರು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬಿಯರ್ ಕುಡಿದಿದ್ದಾರೆ. ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಕಳೆದ ವರ್ಷಕ್ಕಿಂತ ಎರಡುಪಟ್ಟು ಬಿಯರ್ ಹೆಚ್ಚಿಗೆ ಮಾರಾಟವಾಗಿದೆ. ಈ ಬಾರಿ ಬೇಸಿಗೆಯಲ್ಲಿ ಅತೀ ಹೆಚ್ಚಿನ ತಾಪಮಾನ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಯರ್ ಸೇವಿಸಿರಬಹುದು ಎಂದು ಅಂದಾಜಿಸಲಾಗಿದೆ.

-ಶಿವಲಿಂಗಪ್ಪ ಬನ್ನೆಟ್ಟಿ, ಅಬಕಾರಿ ಉಪ ಆಯುಕ್ತ.

ಈ ಬಾರಿಯ ಬೇಸಿಗೆಯಲ್ಲಿ ಎಷ್ಟೇ ತಂಪು ಪಾನೀಯಗಳನ್ನು ಕುಡಿದರು ದೇಹಕ್ಕೆ ತಂಪು ಎನಿಸುತ್ತಿರಲಿಲ್ಲ. ಇಡೀ ದಿನ ಬಿಸಿಲಿನಲ್ಲಿ ಕೆಲಸಮಾಡಿ ಸಂಜೆಯ ವೇಳೆ ತಂಪಾದ ಬಿಯರ್ ಸೇವಿಸುವುದರಿಂದ ದೇಹಕ್ಕೆ ಒಂಥರಾ ನೆಮ್ಮದಿ ಎನಿಸುತ್ತಿತ್ತು. ಹಾಗಾಗಿ ನಾವು ಸಹ ಈ ಬಾರಿ ಹಾಟ್ ಲಿಕ್ಕರ್ ಬಿಟ್ಟು ಬಿಯರ್ ಅನ್ನೇ ಹೆಚ್ಚಾಗಿ ಸೇವಿಸಿದ್ದೇವೆ.

-ಮದ್ಯಪ್ರಿಯರ ಅಭಿಪ್ರಾಯ.