ಶಿವಾನಂದ ಪಿ.ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಜಮಖಂಡಿ ಸೇರಿದಂತೆ ರಬಕವಿ-ಬನಹಟ್ಟಿ, ತೇರದಾಳ ತಾಲೂಕುಗಳಲ್ಲಿ ಹಿಂದೆಂದೂ ಕಂಡರಿಯದ ರೀತಿಯ ಅವಿಭಜಿತ ಜಮಖಂಡಿ ಶೇ.೯೫.೮೫ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದಿದ್ದರೆ, ರಬಕವಿ-ಬನಹಟ್ಟಿ ತಾಲೂಕು ಶೇ.೧ರ ಫಲಿತಾಂಶ ಹೆಚ್ಚಿಸಿಕೊಂಡಿದೆ. ತಾಲೂಕಿನ ಶಿಕ್ಷಕರು ಕೈಗೊಂಡ ವಿಶೇಷ ಬೋಧನಾ ವರ್ಗಗಳು ಹಾಗೂ ಬಿಇಓ ಅಶೋಕ ಬಸನ್ನವರ, ಶಿಕ್ಷಣ ಸಂಯೋಜಕ ಸಂಗಮೇಶ ವಿಜಾಪುರ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳೇ ಕಾರಣವೆಂದು ಅನುಭವಿ ಹಿರಿಯ ಶಿಕ್ಷಕರು ವಿಶ್ಲೇಶಿಸಿದ್ದಾರೆ.
ಒಟ್ಟು ೫೨ ಶಾಲೆಗಳು ಶೇ.೧೦೦ ಫಲಿತಾಂಶ ಕಂಡರೆ ೫೬ ಶಾಲೆಗಳು ಶೇ.೯೨ ರಿಂದ ಶೇ.೯೯.೬೦ ಹಾಗೂ ೧೨ ಶಾಲೆಗಳು ಶೇ.೮೦ರಿಂದ ಶೇ.೮೯.೭೪ ಉಳಿದ ೩ ಶಾಲೆಗಳು ಕನಿಷ್ಟ ಫಲಿತಾಂಶವಾಗಿ ಶೇ.೬೦ರಿಂದ ಶೇ.೬೯ರಷ್ಟು ಸಾಧನೆ ಮಾಡಿರುವುದು ಈ ಹಿಂದಿನ ಎಲ್ಲ ದಾಖಲೆಗಳು ಉಡೀಸ್ ಆಗಿವೆ.ಫಲಿತಾಂಶ ಹೆಚ್ಚಳಕ್ಕೆ ಕಾರಣ ಏನು : ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೊಕ ಬಸನ್ನವರ ಮತ್ತು ಶಿಕ್ಷಣ ಸಂಯೋಜಕ ಸಂಗಮೇಶ ವಿಜಾಪುರ ಈ ಬಾರಿ ಜಿಲ್ಲೆಯಲ್ಲೇ ಜಮಖಂಡಿ ಸೇರಿದಂತೆ ರಬಕವಿ-ಬನಹಟ್ಟಿ, ತೇರದಾಳ ತಾಲೂಕುಗಳಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯಬೇಕೆಂಬ ತುಡಿತದಿಂದ ಪ್ರತಿ ಶಾಲೆಯ ಮು.ಗು. ಸೇರಿ ವಿಷಯ ಶಿಕ್ಷಕರ ಹತ್ತಾರು ಸಭೆಗಳನ್ನು ನಡೆಸಿ ಮಕ್ಕಳಲ್ಲಿ ಓದುವ ಹವ್ಯಾಸ ಮತ್ತು ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸಲು ವಿಷಯ ಶಿಕ್ಷಕರ ಬೋಧನಾ ಕೌಶಲ್ಯ ವೃದ್ಧಿಸುವತ್ತ ಶೈಕ್ಷಣಿಕ ಶಿಬಿರಗಳನ್ನು ಏರ್ಪಡಿಸಿ, ಪ್ರತಿ ಹಂತದ ಮಗುವಿನ ಕಲಿಕಾ ಸಾಮರ್ಥ್ಯ ಗುರುತಿಸಿ, ಅಂಥ ಮಗುವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ತನ್ಮೂಲಕ ಫಲಿತಾಂಶದ ದಾಖಲೆಯ ಸಾಧನೆ ಮೆರೆಸಲು ಬೇಕಾದ ಅಗತ್ಯ ಅಂಶಗಳನ್ನು ಮೂರು ತಾಲೂಕುಗಳ ಪ್ರತಿ ಶಾಲೆಗಳಿಗೆ ಖುದ್ದು ಭೇಟಿ ನೀಡಿ ಶಿಕ್ಷಕರಿಗೆ, ಮಕ್ಕಳಿಗೆ ಮತ್ತು ಪೋಷಕರ ಸಭೆ ನಡೆಸುವ ಮೂಲಕ ಮನೆಗಳಲ್ಲಿ ಮಗುವಿನ ಓದಿನತ್ತ ನಿಗಾ ವಹಿಸಲು ಅಲ್ಲದೇ ನಸುಕಿನ ಓದಿನ ಸೆಲ್ಫಿಗಳನ್ನು ಆಯಾ ಶಾಲೆಗಳ ವಾಟ್ಸಫ್ ಗುಂಪುಗಳಲ್ಲಿ ಶಿಕ್ಷಕರು ಗಮನಿಸಿ ಅಗತ್ಯ ಸೂಚನೆ ಸಲಹೆ ನೀಡಲು ಅಲ್ಲದೇ ಶೈಕ್ಷಣಿಕವಾಗಿ ಆಯಾ ಮಕ್ಕಳು ಹೊಂದಿರುವ ಸಾಮರ್ಥ್ಯ ಹೆಚ್ಚಿಸಲು ಶಾಕಲಾ ಅವಧಿಗೂ ಮುನ್ನ ಹಾಗೂ ಶಾಲಾವಧಿ ಬಳಿಕ ಹೆಚ್ಚುವರಿ ಬೋಧನೆ ತರಗತಿಗಳನ್ನು ಪ್ರತಿ ವಿಷಯ ಶಿಕ್ಷಕರು ಕ್ರಮವಾಗಿ ನಡೆಸುವತ್ತ ಕರಾರುವಕ್ಕಾದ ವೇಳಾಪಟ್ಟಿ ರೂಪಿಸಿ, ಬಿಇಒ ಹಾಗೂ ಶಿಕ್ಷಣ ಸಂಯೋಜಕರ ತಂಡಗಳು ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡುವ ಮೂಲಕ ಪರಿಹಾರ ಬೋಧನೆ ಹಾಗೂ ಕಲಿಕೆಯಲ್ಲಿನ ಮಗುವಿನ ಸಾಮರ್ಥ್ಯ ವೃದ್ಧಿಸಲು ಸಾಧ್ಯವಾತಿತೆಂಬುದು ಬಹುತೇಕ ಶಿಕ್ಷಕರ ಅನಿಸಿಕೆ.
ಹಿಪ್ಪರಗಿ ಮೊರಾರ್ಜಿ ವಸತಿ ಶಾಲೆಯ ನವೀನ ರುದ್ರಪ್ಪ ಕುಂಬಾರ, ರಾಮಪುರ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ ಸುಶಾಂತ ಶ್ರೀಶೈಲ ಬುರ್ಲಿ ೬೨೧/೬೨೫ ಅಂಕ ಗಳಿಸಿ ಪ್ರಥಮ, ತೇರದಾಳ ಜಿನಸೇನಾಚಾರ್ಯ ಶಾಲೆಯ ಸೌಮ್ಯ ಸಂಜಯ ಹರವಿ, ಬನಹಟ್ಟಿ ಎಸ್‌ಆರ್‌ಏ ಶಾಲೆಯ ಸಂದೀಪ ಈಶ್ವರ ಜಾಡಗೌಡ ೬೨೦/೬೨೫ ಅಂಕ ಗಳಿಸಿ ದ್ವಿತೀಯ, ಮುತ್ತೂರನ ಸರ್ಕಾರಿ ಶಾಲೆಯ ಮುತ್ತಕ್ಕ ಅಪ್ಪಣ್ಣ ನ್ಯಾಮಗೌಡ, ಕುಂಚನೂರ ಸರ್ಕಾರಿ ಶಾಲೆಯ ಅಕ್ಷತಾ ಲಕ್ಷ್ಮಣ ಮಲಕಪ್ಪನವರ, ಯಲ್ಲಟ್ಟಿಯ ಕೊಣ್ಣೂರ ಆಂಗ್ಲ ಮಾಧ್ಯಮ ಶಾಲೆಯ ಕೀರ್ತಿ ರವೀಂದ್ರ ಸೋರಗಾಂವಿ ೬೧೯/೬೨೫ ಅಂಕ ಗಳಿಸಿ ತೃತೀಯರಾಗಿದ್ದಾರೆ. ಈ ಬಾರಿ ಜಿಲ್ಲೆಯ ಒಟ್ಟಾರೆ ಫಲಿತಾಂಶಕ್ಕಿಂತ ನಮ್ಮ ತಾಲೂಕಿ ಫಲಿತಾಂಶ ಶೇ. ೯೫.೮೫ ಆಗಿದ್ದರೆ, ರಬಕವಿ-ಬನಹಟ್ಟಿ ತಾಲೂಕಿನ ಮಕ್ಕಳ ಶೇಕಡಾವಾರು ಫಲಿತಾಂಶ ಶೇ.೯೬.೮೭ ಆಗಿರುವುದು ವಿಶೇಷ ಹಾಗೂ ರಾಜ್ಯ, ಜಿಲ್ಲೆಯ ಒಟ್ಟಾರೆ ಫಲಿತಾಂಶಕ್ಕಿಂತ ಹೆಚ್ಚು ಸಾಧನೆ ಮೆರೆದ ಮಕ್ಕಳ, ಶಿಕ್ಷಕರ ಹಾಗೂ ಪಾಲಕರ ಪರಿಶ್ರಮ ಸಾರ್ಥಕವಾಗಿದೆ ಎಂದು ಬಿಇಓ ಬಸನ್ನವರ ಶಿಕ್ಷಣ ಸಂಯೋಜಕ ಸಂಗಮೇಶ ಹರ್ಷಿಸಿದ್ದಾರೆ. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷಗಳಲ್ಲಿ ರಬಕವಿ-ಬನಹಟ್ಟಿ, ತೇರದಾಳ ಹಾಗೂ ಜಮಖಂಡಿ ತಾಲೂಕುಗಳ ಎಲ್ಲ ಪ್ರೌಢಶಾಲೆಗಳ ಎಲ್ಲ ಸ್ತರದ ಮಕ್ಕಳನ್ನು ಗಮನದಲ್ಲಿರಿಸಿ ಬಿಇಓ ಅಶೋಕ ಬಸನ್ನವರ ಹಾಗೂ ಶಿಕ್ಷಣ ಸಂಯೋಜಕ ಸಂಗಮೇಶ ವಿಜಾಪುರ ಪರಿಹಾರ ಮತ್ತು ಮಕ್ಕಳ ಸಾಮರ್ಥ್ಯಕ್ಕನುಸಾರ ವಿವೇಚನೆ ಬಳಸಿ ಶಿಕ್ಷಕರು ವಿಶೇಷ ಬೋಧನೆ ನಡೆಸಲು ಬಿಗಿ ಕ್ರಮ ಕೈಗೊಂಡಿದ್ದರಿಂದ ಪ್ರಥಮ ಬಾರಿಗೆ ದಾಖಲೆಯ ಫಲಿತಾಂಶ ಹೊಂದಲು ಸಾಧ್ಯವಾಗಿದೆ.
- ಪಿ.ಎಚ್.ಪ್ರತಾಪ,
ಮುಖ್ಯಾಧ್ಯಾಪಕರು, ಬಾಲಿಕೆಯರ ಪ್ರೌಢಶಾಲೆ ರಬಕವಿ.ವಿವಿಧ ಹಂತಗಳ ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಸಲು ವಿಶೇಷ ಬೋಧನಾ ತರಗತಿಗಳನ್ನು ನಡೆಸುವ ಮೂಲಕ, ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಆಯಾ ವಿಷಯ ಶಿಕ್ಷಕರಿಗೆ ಬೋಧನಾ ಪರಿಕ್ರಮಗಳನ್ನು ಜೊತೆಗೆ ಕಲಿಕಾ ಕೌಶಲಗಳ ಮೂಲಕ ಪರಿಹಾರ ಬೋಧನೆಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ತರಬೇತಿ ಸಂದರ್ಭದಲ್ಲಿ ವಿಷಯವಾರು ತರಬೇತಿ ಶಿಬಿರಗಳನ್ನು ನಡೆಸಿದ್ದು ಹಾಗೂ ಶಾಲಾ ಆರಂಭ ಮತ್ತು ಮುಕ್ತಾಯದ ಸಮಯದಲ್ಲಿ ವಿಶೇಷ ಬೋಧನಾ ವರ್ಗಗಳನ್ನು ಶಿಕ್ಷಕರು ಕಟ್ಟುನಿಟ್ಟಾಗಿ ನಡೆಸುವಂತೆ ಶ್ರಮಿಸಿ ಮಕ್ಕಳಲ್ಲಿನ ಪ್ರತಿಭೆ ಹೆಚ್ಚಿಸಲು ಶ್ರಮ ವಹಿಸಿದ ಬಿಇಓ ಬಸನ್ನವರ ಹಾಗೂ ಶಿಕ್ಷಣ ಸಂಯೋಜಕ ಸಂಗಮೇಶ ವಿಜಾಪುರ ತಂಡ ಬಹುವಾಗಿ ಶ್ರಮಿಸಿದ್ದರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ತಾಲೂಕಲ್ಲಿ ಇಂಥ ಚರಿತ್ರಾರ್ಹ ಸಾಧನೆ ಸಾಧ್ಯವಾಗಿದೆ. -ರಾಜೇಂದ್ರ ಎಸ್.ಉಕ್ಕಲಿ, ಮುಖ್ಯಾಧ್ಯಾಪಕರು, ಎಸ್‌ಆರ್‌ಏ ಹೈಸ್ಕೂಲ್, ಬನಹಟ್ಟಿ.