ಸಾರಾಂಶ
ಗಜೇಂದ್ರಗಡ: ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕಾದ ಅಧಿಕಾರಿಗಳೇ ₹೫೦೦ ವಸೂಲಿ ಮಾಡಲು ಮುಂದಾದರೆ, ಗ್ಯಾರಂಟಿ ಯೋಜನೆಗಳ ಉದ್ದೇಶ ಈಡೇರಲು ಸಾಧ್ಯವೇ ಎಂದು ಗ್ಯಾರಂಟಿ ಸಮಿತಿ ಸದಸ್ಯ ಮಲಿಕಾರ್ಜುನ ಗಾರಗಿ ಹೇಳಿದರು.
ಪಟ್ಟಣದ ತಾಪಂ ಚಿಂತನ ಸಭಾಂಗಣದಲ್ಲಿ ಸೋಮವಾರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶರಣಪ್ಪ ಬೆಟಗೇರಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ರಾಜ್ಯದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಎಲ್ಲ ಸಮುದಾಯಗಳ ಜನರನ್ನು ಬಡತನ ರೇಖೆಯಿಂದ ಹೊರತಲು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಈ ಯೋಜನೆ ಲಾಭ ಪಡೆಯಲು ಕೆಲವರಿಗೆ ರೇಷನ್ ಕಾರ್ಡ್ ಸಿಕ್ಕಿಲ್ಲ. ಗೋಗೇರಿ ಗ್ರಾಮದಲ್ಲಿ 2020ರಲ್ಲಿ ರೇಶನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ ಮೂವರಲ್ಲಿ ಒಬ್ಬರಿಗೆ ಇನ್ನೂ ಕಾರ್ಡ್ ಸಿಕ್ಕಿಲ್ಲ. ಆಹಾರ ಇಲಾಖೆ ಅಧಿಕಾರಿ ಪ್ರತಿ ಅರ್ಜಿದಾರರಿಂದ ₹500 ವಸೂಲಿ ಮಾಡಿದ್ದಾರೆ. ಈ ವ್ಯಕ್ತಿ ಹಣ ನೀಡದ ಕಾರಣಕ್ಕೆ ರೇಶನ್ ಕಾರ್ಡ್ ನೀಡಿಲ್ಲ ಎಂದರು. ಅರ್ಜಿದಾರರು ₹೫೦೦ ನೀಡಬೇಕಿದ್ದರೆ ಗ್ಯಾರಂಟಿ ಸಮಿತಿ ಸದಸ್ಯರಿಗೆ ತಿಳಿಸಿ, ಯಾರ ಸಮ್ಮುಖದಲ್ಲಿ ಕೊಡಿಸಬೇಕು ಎಂಬುದನ್ನು ಹೇಳಿ, ಸಂಗ್ರಹಿಸಿ ಕೊಡುತ್ತೇವೆ ಎಂದು ಕಿಡಿಕಾರಿದರು. ಇನ್ನುಳಿದ ಕೆಲವು ಸದಸ್ಯರು ಸಹ ಧ್ವನಿಗೂಡಿಸಿ, ಅರ್ಹ ಫಲಾನುಭವಿಗಳಿಂದ ಹಣ ವಸೂಲಿ ಮಾಡುವ ಆಹಾರ ಅಧಿಕಾರಿ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗಜೇಂದ್ರಗಡ ತಾಲೂಕಿನ ಕೆಲವು ಗ್ರಾಮಗಳ ನ್ಯಾಯಬೆಲೆ ಅಂಗಡಿಗಳಲ್ಲಿ ಎಲ್ಲ ಫಲಾನುಭವಿಗಳಿಗೆ ಪಡಿತರ ಸಿಗುತ್ತಿಲ್ಲ. ಜತೆಗೆ ಗುಣಮಟ್ಟ ಪಡಿತರ ಪೂರೈಕೆಗೆ ಆದ್ಯತೆ ನೀಡಬೇಕು. ನಾಗೇಂದ್ರಗಡ ಗ್ರಾಮದಲ್ಲಿ ೨೦ರಿಂದ ೨೫ ಜನರಿಗೆ ಪ್ರತಿ ತಿಂಗಳು ರೇಷನ್ ಇಲ್ಲ ಎನ್ನುತ್ತಾರೆ. ಸರ್ಕಾರದಿಂದ ಕಡಿಮೆ ಬರುತ್ತದೆಯೇ? ಅಥವಾ ನ್ಯಾಯಬೆಲೆ ಅಂಗಡಿಯವರ ಕರಾಮತ್ತಿದೆಯಾ? ಎಂಬುದು ತಿಳಿಯಬೇಕಿದೆ. ನಿಡಗುಂದಿ ಗ್ರಾಮದಲ್ಲಿ ಪಡಿತರ ತರುವ ಮುಂಚೆಯೇ ಕೆಲವರಿಗೆ ಹಣ ಜಮೆ ಆಗುತ್ತದೆ. ಈ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ನ್ಯಾಯಬೆಲೆ ಅಂಗಡಿಕಾರರು ಹಾಗೂ ಸಂಬಂಧಿಸಿದವರ ಜತೆಗೆ ಗ್ಯಾರಂಟಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಸಭೆ ನಡೆಸಬೇಕು ಎಂದು ನಿಂಗಪ್ಪ ಹಂಡಿ, ಪ್ರೇಮಾ ಇಟಗಿ ಹಾಗೂ ಶರಣು ಪೂಜಾರ ಒತ್ತಾಯಿಸಿದರು.ಗಜೇಂದ್ರಗಡ ತಾಲೂಕಿನಲ್ಲಿ ಕೆಲವು ತಾಂತ್ರಿಕ ತೊಂದರೆ ಬಿಟ್ಟರೆ ಶಕ್ತಿ ಯೋಜನೆ, ಯುವನಿಧಿ, ಗೃಹಜ್ಯೋತಿ ಭಾಗಶಃ ಯಶಸ್ವಿಯಾಗಿದೆ. ಆದರೆ ಅನ್ನಭಾಗ್ಯ ಮತ್ತು ಗೃಹಲಕ್ಷ್ಮೀ ಯೋಜನೆಗಳ ಜಾರಿಗೆ ಒತ್ತು ನೀಡಬೇಕಿದೆ ಎಂದು ಸಭೆಯಲ್ಲಿ ಅಭಿಪ್ರಾಯ ಕೇಳಿಬಂತು.
ತಾಪಂ ಇಒ ಬಸವರಾಜ ಬಡಿಗೇರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಶರಣಪ್ಪ ಉಪ್ಪಿನಬೆಟಗೇರಿ, ಸದಸ್ಯರಾದ ಇಮಾಮ್‌ಸಾಬ್ ಬಾಗವಾನ, ಸದಾಶಿವ ಅಚ್ಚಲಕರ, ಶರಣಯ್ಯ ಕಾರಡಗಿಮಠ, ಭೀಮಪ್ಪ ಮೇಟಿ, ಅಲ್ಲಾಸಾಬ್ ಮುಜಾವರ, ಯಮನೂರಪ್ಪ ತಳವಾರ, ಬಸವರಾಜ ಬಿದರೂರ, ಯಲ್ಲಪ್ಪ ಕುದರಿ ಇದ್ದರು.ಸರ್ಕಾರದ ೫ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಸಣ್ಣಪುಟ್ಟ ವ್ಯಾಪಾರದ ಜತೆಗೆ ಆರ್ಥಿಕ ಚೇತರಿಕೆಗೆ ಸಹಕಾರಿಯಾಗಿದೆ. ಆದರೆ ಕೆಲವರು ಯೋಜನೆ ಲಾಭ ಪಡೆದು ಸರ್ಕಾರವನ್ನು ಟೀಕಿಸುತ್ತಿರುವುದು ವಿಪರ್ಯಾಸ. ಸರ್ಕಾರದ ಯೋಜನೆಗಳಿಂದಾಗಿ ಸಾವಿರಾರು ಕುಟುಂಬಗಳು ನೆಮ್ಮದಿಯ ಜೀವನಕ್ಕೆ ನಾಂದಿ ಹಾಡಿದ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಬಡಜನರ ಬೆಂಬಲವಿದ್ದು, ಟೀಕೆಗಳನ್ನು ಬದಿಗೊತ್ತಿ ಯೋಜನೆಗಳನ್ನು ಸರ್ಕಾರ ಮುಂದುವರಿಸಲಿ ಎಂದು
ಗ್ಯಾರಂಟಿ ಸಮಿತಿ ಅಧ್ಯಕ್ಷ ಶರಣಪ್ಪ ಬೆಟಗೇರಿ ತಿಳಿಸಿದ್ದಾರೆ.