ಸಾರಾಂಶ
ಹಾವೇರಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಕ್ಕೆ ಮೀಸಲಿರುವ ಸ್ಥಾನಗಳಿಗೆ ಆಯಾ ವರ್ಗದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಳಗನಾಥ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ ಬಿಸಿಯೂಟ ಅಡುಗೆ ಸಿಬ್ಬಂದಿಯನ್ನು ಮೀಸಲಾತಿ ಅನ್ವಯ ಭರ್ತಿ ಮಾಡಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕಳ್ಳಿಹಾಳ ಗ್ರಾಮದಲ್ಲಿ ಪರಿಶಿಷ್ಟ ಜನಾಂಗದವರ ಸ್ಮಶಾನ ಭೂಮಿಗೆ ದಾರಿ ನೀಡಲು ಜಮೀನು ಮಾಲೀಕರ ಮನವೊಲಿಸಿ ಹಾಗೂ ಸರ್ಕಾರದ ನಿಯಮಾವಳಿ ಅನುಸಾರ ಪರಿಹಾರ ನೀಡಲಾಗುವುದು. ರಾಣಿಬೆನ್ನೂರು ತಾಲೂಕು ಬೇಲೂರ ಗ್ರಾಮದ ನಿವಾಸಿಗೆ ನಿವೇಶನ ಹಕ್ಕು ಪತ್ರ ಹಂಚಿಕೆ ಪ್ರಕರಣದಲ್ಲಿ ಪರ್ಯಾಯವಾಗಿ ಗಾಂವಠಾಣಾ ಪ್ರದೇಶದಲ್ಲಿರುವ ಹಾಗೂ ಯಾವುದೇ ವ್ಯಾಜ್ಯವಿರದ ನಿವೇಶನ ಹಂಚಿಕೆ ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ಶಿಗ್ಗಾಂವ ತಾಲೂಕು ನಿಡಗುಂದಿ ಗ್ರಾಮದ ಪ್ರಕರಣ ಹಾಗೂ ಶಿಗ್ಗಾಂವ ಡಿವೈಎಸ್‌ಪಿ ಅವರ ಹಣದ ಬೇಡಿಕೆ ಕುರಿತು ಸೂಕ್ತ ಕ್ರಮವಹಿಸುವಂತೆ ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ, ಜಿಲ್ಲಾಧಿಕಾರಿಗಳು ಸೂಕ್ತ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು ಹಾಗೂ ನಿಡಗುಂದಿ ಗ್ರಾಮದಲ್ಲಿ ಶಾಂತಿ ಸಭೆ ಆಯೋಜಿಸುವಂತೆ ತಿಳಿಸಿದರು.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರೇಷ್ಮಾ ಕೌಸರ್ ಮಾತನಾಡಿ, ಕಳೆದ ಜನವರಿಯಿಂದ ಮೇವರೆಗೆ ಅಂತರ್ಜಾತಿ ವಿವಾಹದ ೩೧ ಪ್ರಕರಣಗಳಲ್ಲಿ ರು.೩೦.೭೧ ಲಕ್ಷ ಪರಿಹಾರ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, , ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ, ಡಿವೈ.ಎಸ್.ಪಿ. ಪಾಟೀಲ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ತಹಶೀಲ್ದಾರ ಶಂಕರ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರಾದ ರಮೇಶ ಆನವಟ್ಟಿ, ಮುತ್ತುರಾಜ ಮಾದರ ಹಾಗೂ ಎನ್.ಎಂ.ಗಾಳೆಮ್ಮನವರ ಉಪಸ್ಥಿತರಿದ್ದರು.