ಸಾರಾಂಶ
ಕೌನ್ಸಿಲಿಂಗ್‌ನಲ್ಲಿ ಅಭ್ಯರ್ಥಿಗಳು ಸ್ಥಳ ಆಯ್ಕೆ, ಆದೇಶ ಪತ್ರ ಪಡೆದರು
ಕನ್ನಡಪ್ರಭ ವಾರ್ತೆ ರಾಯಚೂರು
ಪದವವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8) ನೇಮಕಾತಿಯ ಕೌನ್ಸಿಲಿಂಗ್ ಪ್ರಕ್ರಿಯೆ ಶನಿವಾರ ಆರಂಭಗೊಂಡಿತು.ಸ್ಥಳೀಯ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಕೌನ್ಸಿಲಿಂಗ್‌ನಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು ತಮಗೆ ಬೇಕಾದ ಸ್ಥಳ ಆಯ್ಕೆಯನ್ನು ಮಾಡಿಕೊಂಡರು. ಈ ವೇಳೆ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ನೀಡಲಾಯಿತು. ಕೆಲ ಕಾರಣಗಳಿಂದ ಪದವೀಧರ ಶಿಕ್ಷಕರ ನೇಮಕಾತಿ ವಿಳಂಬವಾಗಿತ್ತು. ಈಗ ಕೌನ್ಸಲಿಂಗ್ ಮೂಲಕ ಸ್ಥಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ಅಭ್ಯರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ನೇಮಕಾತಿ ಪ್ರಕ್ರಿಯೆ ನಡೆದಿರಲಿಲ್ಲ ಇದೀಗ ನ್ಯಾಯಾಲಯ ಸೂಚನೆಯಂತೆ ಶಿಕ್ಷಣ ಇಲಾಖೆ ಕೌನ್ಸಿಲಿಂಗ್ ನಡೆಸಿತು. ಜಿಲ್ಲೆಯಲ್ಲಿ 918 ಹುದ್ದೆಗಳ ಭರ್ತಿಯಾಗಿದ್ದು, ಆಯ್ಕೆಯಾದ ಶಿಕ್ಷಕರು ಕೌನ್ಸಿಲಿಂಗ್‌ನಲ್ಲಿ ಪಾಲ್ಗೊಂಡು ಸ್ಥಳವನ್ನು ಆಯ್ಕೆ ಮಾಡಿಕೊಂಡು ಆದೇಶ ಪತ್ರವನ್ನು ಪಡೆದರು. ಹಲವಾರು ವರ್ಷಗಳಿಂದ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದ್ದು ಅದನ್ನು ನಿವಾರಿಸುವ ನಿಟ್ಟಿನಲ್ಲಿ ಶಿಕ್ಷಕರ ಆಯ್ಕೆ ಕಾರ್ಯ ನಡೆದಿರುವುದು ಕೊಂಚಮಟ್ಟಿಗೆ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಿದೆ.ಈ ವೇಳೆ ಡಿಡಿಪಿಐ ಸುರೇಶ ಹುಗ್ಗಿ, ಯೋಜನಾಧಿಕಾರಿ ಇಂದಿರಾ ಆರ್, ತಾಲೂಕುಗಳ ಬಿಇಒ ಹಾಗೂ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರಪ್ಪ, ಜಿಲ್ಲಾ ಘಟಕದ ಕಾರ್ಯದರ್ಶಿ ಮಹಾಂತೇಶ ಬಿರಾದಾರ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗದವರು ಇದ್ದರು.