ಸಾರಾಂಶ
ಆನಂದ್ ಎಂ. ಸೌದಿ
ಕನ್ನಡಪ್ರಭ ವಾರ್ತೆ ಯಾದಗಿರಿಎಸ್ಸೆಸ್ಸೆಲ್ಸಿ ನಕಲಿ ಅಂಕಪಟ್ಟಿ ಒದಗಿಸಿ, ಆರೋಗ್ಯ ಇಲಾಖೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಕೌನ್ಸಲಿಂಗ್ ಮುಖಾಂತರ ಗ್ರೂಪ್ "ಡಿ " ಸಿಬ್ಬಂದಿಯಾಗಿ ನೌಕರಿ ಸೇರಿದ 9 ವರ್ಷಗಳ ಹಿಂದಿನ ನೇಮಕಾತಿ ಹಗರಣ ಇಲ್ಲೀಗ ಮರುಜೀವ ಪಡೆದಂತಿದೆ.
ಇದೇ ಜು.16 ರಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಪತ್ರ ಬರೆದಿರುವ ಆರೋಗ್ಯ ಇಲಾಖೆ ನಿರ್ದೇಶನಾಲಯ, ನಕಲಿ ಅಂಕಪಟ್ಟಿ ನೀಡಿ ಆಯ್ಕೆಯಾದವರ ಹೆಸರುಗಳ ಸಮೇತ ಮಾಹಿತಿ ನೀಡಿದ್ದು, ವಿಚಾರಣೆ ಕೈಗೊಳ್ಳುವಂತೆ ಸೂಚಿಸಿದೆ.ಏನಿದು ನೇಮಕಾತಿ ಹಗರಣ?:
2015 ರಲ್ಲಿ ವಿಶೇಷ ನೇಮಕಾತಿಯಡಿ, ಆರೋಗ್ಯ ಇಲಾಖೆಯಲ್ಲಿ ಗ್ರೂಪ್ ‘ಡಿ’ ಹುದ್ದೆಗೆ ಕರೆ ನೀಡಿ, ಕೌನ್ಸಲಿಂಗ್ ಮುಖಾಂತರ ಸ್ಥಳ ನೇಮಕಾತಿ ಮಾಡಲಾಗಿತ್ತು. ಅಂತಿಮ ಪಟ್ಟಿಯಲ್ಲಿ ಆಯ್ಕೆಗೊಂಡ ಕೆಲವರು ನಕಲಿ ಎಸ್ಸೆಸ್ಸೆಲ್ಸಿ ನಕಲಿ ಅಂಕಪಟ್ಟಿಗಳ ನೀಡಿ ಸರ್ಕಾರಿ ಸೇವೆಗೆ ಸೇರಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆಯ ನಿರ್ದೇಶನಾಲಯ ಅಂಕಪಟ್ಟಿಗಳ ನೈಜ್ಯತೆ ಪರಿಶೀಲನೆಗಾಗಿ ಕರ್ನಾಟಕ ಶಾಲಾ ಪರೀಕ್ಷಾ ಮೌಲ್ಯ ನಿರ್ಣಯ ಮಂಡಳಿಗೆ ಕೋರಿತ್ತು.ಈ ಮೇರೆಗೆ, ಆಯ್ಕೆಗೊಂಡವರ ಅಂಕಪಟ್ಟಿಗಳಲ್ಲಿನ ಅಂಕಗಳನ್ನು ಪರಿಶೀಲಿಸಿದ ಮಂಡಳಿ, ಕಚೇರಿ ಸಂಪುಟದಲ್ಲಿನ ಅಂಕಗಳಿಗೆ ತಾಳೆಯಾಗುತ್ತಿಲ್ಲ ಹಾಗೂ ಸದರಿ ನೌಕರರಿಗೆ ನೈಜ್ಯತೆಯ ಪ್ರಮಾಣ ಪತ್ರವೇ ನೀಡಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶನಾಲಯಕ್ಕೆ ವರದಿ ನೀಡಿದ್ದರು.
ಈ ಕುರಿತು ಸದರಿ ಸಿಬ್ಬಂದಿಗಳ ವಿಚಾರಣೆ ಕ್ರಮ ಕೈಗೊಳ್ಳುವಂತೆ, ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ನಿರ್ದೇಶನಾಲಯ ಕಚೇರಿಯಿಂದ ಪತ್ರ ಬರೆದಿದ್ದಾರೆ. ಇನ್ನು, ಯಾದಗಿರಿ ಜಿಲ್ಲೆ ಮೂಲದ, ಕಲಬುರಗಿ ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿದ್ದರಿಂದ ಕಲಬುರಗಿಯಲ್ಲಿ ಇಲಾಖೆ ಅಧಿಕಾರಿಗಳಿಗೂ ಪತ್ರ ಬರೆದಿದ್ದಾರೆ. "ಕನ್ನಡಪ್ರಭ "ಕ್ಕೆ ಲಭ್ಯ ಈ ಪತ್ರದಲ್ಲಿ ನಕಲಿ ಅಂಕಪಟ್ಟಿ ನೀಡಿ ನೌಕರಿ ಸೇರಿದ ಸಿಬ್ಬಂದಿಗಳ ಹೆಸರು-ವಿವರಗಳ ಹೊಂದಿದೆ.ಇದು ಕೇವಲ ಯಾದಗಿರಿಯಷ್ಟೇ ಅಲ್ಲ, ರಾಜ್ಯದ ವಿವಿಧೆಡೆಯೂ ಈ ಅಕ್ರಮ ನಡೆದಿರುವ ಶಂಕೆ ಉಂಟಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನೂರಾರು ಜನರು ಇಂತಹ ವಂಚನೆ ಎಸಗಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ ಎಂಬ ಆರೋಪಗಳಿವೆ. ಹತ್ತಾರು ವರ್ಷಗಳ ಹಿಂದೆ, ಇದೇ ಯಾದಗಿರಿ ಜಿಲ್ಲೆಯಲ್ಲಿ ಮಾಜಿ ಸೈನಿಕರ ಕೋಟಾದಡಿ ನಕಲಿ ಪ್ರಮಾಣ ಪತ್ರಗಳನ್ನು ನೀಡಿ ಶಿಕ್ಷಕರ ಹುದ್ದೆಗೆ ಆಯ್ಕೆಗೊಂಡ ಪ್ರಕರಣ ಕಂಡು ಬಂದಿತ್ತು.
-ಹೌದು, ಈ ಕುರಿತ ದೂರಿನ ಮೇರೆಗೆ ಈಗಾಗಲೇ 11 ಜನರ ಮಾಹಿತಿ ಕಲೆ ಹಾಕಲಾಗಿದೆ. ಸಮಗ್ರ ಮಾಹಿತಿ ಬೆಂಗಳೂರು ಕಚೇರಿಗೆ ಸಲ್ಲಿಸುತ್ತೇವೆ.
- ಡಾ. ಎಂ.ಎಸ್. ಪಾಟೀಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಯಾದಗಿರಿ ಜಿಲ್ಲೆ.