ಸಾರಾಂಶ
ಕಾರ್ಖಾನೆಯಲ್ಲಿ ಕಬ್ಬು ನುರುಸುವಿಕೆ, ಕಟಾವು, ಹಣ ಪಾವತಿಯಲ್ಲಿ ಯಾವುದೇ ತೊಂದರೆಯಾಗಿಲ್ಲ. 163 ರೈತರು ಕಬ್ಬು ಪೂರೈಸಿದ 14 ದಿನಗಳ ಒಳಗೆ ಕಬ್ಬಿನ ಬಿಲ್ಲಿನ ಹಣ ಪಾವತಿಸಲಾಗಿದೆ. ಮುಂದಿನ ದಿನಗಳಲ್ಲಿ ಕಟ್ಟು ಸರಬರಾಜು ಮಾಡುವ ರೈತರಿಗೆ ನಿಗಧಿತ ಸಮಯದಲ್ಲಿ ಕಬ್ಬಿನ ಹಣವನ್ನು ಪಾವತಿಸಲು ಕಂಪನಿ ಬದ್ಧವಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಷುಗರ್ ಕಾರ್ಖಾನೆ ವ್ಯಾಪ್ತಿ ಕಬ್ಬು ಕಟಾವು ಮಾಡಲು ಮುಂದಿನ ದಿನಗಳಲ್ಲಿ ಹೆಚ್ಚಿನ ಕಾರ್ಮಿಕರನ್ನು ಒದಗಿಸಲಾಗುವುದು. ರೈತರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್.ನಾಗರಾಜು ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಈಗಾಗಲೇ ಕಾರ್ಖಾನೆಯಲ್ಲಿ 43,740 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ಕಬ್ಬು ಸರಬರಾಜು ಮಾಡಿದ 163 ರೈತರಿಗೆ ಈಗಾಗಲೇ 2,65,76,127 ರು. ಹಣ ಪಾವತಿಸಲಾಗಿದೆ. ಕಬ್ಬು ಕಟಾವು ಮಾಡಿರುವ ಮೇಸ್ತ್ರಿಗಳಿಗೆ 1.40 ಕೋಟಿ ರು., ಕಬ್ಬು ಸಾಗಾಣಿಕ ವೆಚ್ಚ 51.05 ಲಕ್ಷ ರು. ಹಣ ಪಾವತಿ ಸೇರಿ ಒಟ್ಟು 4,57,12,457 ರು. ಹಣ ಪಾವತಿಸಲಾಗಿದೆ ಹೇಳಿದ್ದಾರೆ.
ಕಾರ್ಖಾನೆಯಲ್ಲಿ ಕಬ್ಬು ನುರುಸುವಿಕೆ, ಕಟಾವು, ಹಣ ಪಾವತಿಯಲ್ಲಿ ಯಾವುದೇ ತೊಂದರೆಯಾಗಿಲ್ಲ. 163 ರೈತರು ಕಬ್ಬು ಪೂರೈಸಿದ 14 ದಿನಗಳ ಒಳಗೆ ಕಬ್ಬಿನ ಬಿಲ್ಲಿನ ಹಣ ಪಾವತಿಸಲಾಗಿದೆ. ಮುಂದಿನ ದಿನಗಳಲ್ಲಿ ಕಟ್ಟು ಸರಬರಾಜು ಮಾಡುವ ರೈತರಿಗೆ ನಿಗಧಿತ ಸಮಯದಲ್ಲಿ ಕಬ್ಬಿನ ಹಣವನ್ನು ಪಾವತಿಸಲು ಕಂಪನಿ ಬದ್ಧವಾಗಿದೆ.ಕಬ್ಬು ಕಟಾವು ಮೇಸ್ತ್ರಿಗಳು ಮುಂಗಡ ಹಣ ಪಡೆದು ಇಲ್ಲಿಯವರೆಗೆ ಬರದಿದ್ದ ಕಾರಣ ಈಗಾಗಲೇ 41 ಮೇಸ್ತ್ರಿಗಳಿಗೆ ನೋಟೀಸ್ ನೀಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತಿದೆ. 30 ಮೇಸ್ತ್ರಿಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮುಂಗಡ ಹಣ 3,28,75,000/- ಪಡೆದು ಇದರಲ್ಲಿ ಹಣ 2,07,04,897/- ಹಣವನ್ನು ಕಬ್ಬು ಕಟಾವು ಮಾಡಿ ಹಣ ತೀರಿಸಿದ್ದಾರೆ. ಉಳಿದ ಹಣ 1,21,70,103/- ಹಣ ವಸೂಲಿ ಮಾಡಲು ಕ್ರಮವಹಿಸಲಾಗಿದೆ.ಕೆಲವರು ಕಂಪನಿ ಅಧಿಕಾರಿಗಳ ಮೇಲೆ ಸುಳ್ಳು ವದಂತಿ ಹರಡುತ್ತಿದ್ದಾರೆ. ಇಂದರಿಂದ ಅಧಿಕಾರಿಗಳಿಗೆ ಮಾನಸಿಕವಾಗಿ ಒತ್ತಡವಾಗಿದೆ. ರೈತರು ಯಾವುದೇ ವದಂತಿಗಳಿಗೆ ಕಿವಿಕೊಡಬಾರದು ಎಂದು ತಿಳಿಸಿದ್ದಾರೆ.