ಸಾರಾಂಶ
ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡರಿಂದ ಸುದ್ದಿಗೋಷ್ಠಿ । ನೇಮಕಾತಿ ಅಧಿಕೃತ ಪತ್ರ ನೀಡಲು ಸಾಧ್ಯವಿಲ್ಲವೆಂದ ಅಧ್ಯಕ್ಷ
ಕನ್ನಡಪ್ರಭ ವಾರ್ತೆ ಕೋಲಾರಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದಲ್ಲಿ ಬಹುದಿನಗಳಿಂದ ಖಾಲಿ ಇದ್ದ ೨೭೩ ಹುದ್ದೆಗಳನ್ನು ಭರ್ತಿ ಮಾಡಲು ಅಗತ್ಯ ಕ್ರಮಗಳಿಗೆ ಮುಂದಾಗಿದ್ದ ಸಂದರ್ಭದಲ್ಲಿ ಕೆಲವರು ನ್ಯಾಯಾಲಯದಿಂದ ೧೯೨ ಹುದ್ದೆಗಳಿಗೆ ತಡೆಯಾಜ್ಞೆ ತಂದ ಹಿನ್ನಲೆ ಉಳಿದ ೮೧ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ನಿಯಮಾನುಸಾರ ಪಾರದರ್ಶಕವಾಗಿ ಆಹ್ವಾನಿಸಲಾಗಿತ್ತು. ಆದರೆ ೮೧ ಹುದ್ದೆಗಳ ಪೈಕಿ ೭೫ ಹುದ್ದೆಗಳಿಗೆ ನೇಮಕಾತಿ ಆದೇಶ ನೀಡಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಈಗಾಗಲೇ ತರಬೇತಿ ಪಡೆಯುತ್ತಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ತಾಲೂಕಿನ ಬೆಳಗಾನಗಳ್ಳಿ ಹಾಲು ಒಕ್ಕೂಟದ ಕಚೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ೧:೫ರ ಅನುಪಾತದಲ್ಲಿ ಸಂದರ್ಶನ ನಡೆಸಲಾಯಿತು, ಈ ಪೈಕಿ ೫೫ ಜನರು ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚಿನ ಅಂಕಗಳಿಸಿದ್ದು, ಸಂದರ್ಶನ ೧೫ ಅಂಕಗಳನ್ನು ಪಡೆಯದೆ ಆಯ್ಕೆಯಾಗಿದ್ದಾರೆ. ಉಳಿದಂತೆ ೨೬ ಜನರನ್ನು ಪಾರದರ್ಶಕವಾಗಿ ನಿಯಮಾನುಸಾರ ಆಯ್ಕೆ ಮಾಡಿ ನೇಮಕಾತಿಯ ಆದೇಶ ನೀಡಿದೆ ಎಂದು ಹೇಳಿದರು.ಆದರೆ, ಯಾರೋ ಕಿಡಿಗೇಡಿಗಳನ್ನು ನಕಲಿ ಆಯ್ಕೆಯ ಪಟ್ಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ, ಶಿಕ್ಷಣದ ಅರ್ಹತೆಗಿಂತ ಶಿಫಾರಸ್ಸು ಪತ್ರಗಳಿಗೆ ಮಾನ್ಯತೆ ನೀಡಿ ಆಯ್ಕೆ ಮಾಡಲಾಗಿದೆ ಎಂಬ ಅಪಪ್ರಚಾರ ಮಾಡಿದ್ದಾರೆ. ಇದಕ್ಕೆ ಕಾಕಾತಾಳೀಯ ಎಂಬಂತೆ ನೇಮಕಾತಿಗಳಲ್ಲಿ ಶಿಫಾರಸ್ಸು ಪತ್ರಗಳು ಸಾಮಾನ್ಯ ಸಂಗತಿಯಾಗಿದೆ, ಆದರೆ ನಾವು ಮಾಡಿರುವ ನೇಮಕಾತಿಯಲ್ಲಿ ಶಿಷ್ಟಾಚಾರ ಪಾಲನೆ ಮಾಡಲಾಗಿದೆ ಎಂದರು.
ನ.೧೪ ರಿಂದ ೧೮ ವರೆಗೆ, ೧:೫ ಅನುಪಾತದಲ್ಲಿ ಸಂದರ್ಶನಗಳು ನಡೆದವು, ನ.೧೯ರಂದು ಅದೇಶ ಪತ್ರ ನೀಡಲಾಗಿದೆ. ಇದರಲ್ಲಿ ಶಿಫಾರಸ್ಸು ಪತ್ರ ನೀಡಿದವರೂ ಸಹ ಹೆಚ್ಚಿನ ಅಂಕ ಪಡೆದು ಅಯ್ಕೆಯಾಗಿದ್ದಾರೆ, ಕಡಿಮೆ ಅಂಕಗಳಿಸಿದವರು ಆಯ್ಕೆಯಾಗಿಲ್ಲ, ಶಿಫಾರಸ್ಸಿನ ಪತ್ರಕ್ಕೆ ಮಾನ್ಯತೆ ನೀಡಿ ಆಯ್ಕೆ ಮಾಡಿರುವುದು ಸತ್ಯಕ್ಕೆ ದೂರದ ಸಂಗತಿಯಾಗಿದೆ ಎಂದು ಸ್ವಷ್ಟಪಡಿಸಿದರು.ಉಳಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ನೇಮಕಾತಿಯ ನಕಲಿ ಪಟ್ಟಿಯಲ್ಲಿ ೨೫ ರಿಂದ ೩೦ ಜನರು ಆಯ್ಕೆಯಾಗಿದ್ದಾರೆ, ಆದರೆ, ಯಥಾವತ್ತಾಗಿ ನೇಮಕಾತಿ ಪಟ್ಟಿಯು ಬಹಿರಂಗಗೊಂಡಿಲ್ಲ, ಸಂಭವನೀಯ ಪಟ್ಟಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ, ಬೇಕಾದರೆ ನಿಮ್ಮಲ್ಲಿರುವ ನೇಮಕಾತಿ ಪಟ್ಟಿ ಹಾಗೂ ನಮ್ಮ ಒಕ್ಕೂಟ ನೇಮಕಾತಿಯ ಪಟ್ಟಿ ತಾಳೆ ಮಾಡಿ ನೋಡಬಹುದು ಎಂದು ಹೇಳಿದರು.
ಪತ್ರಕರ್ತರು, ಶೇ.೯೦ರಷ್ಟು ಹೆಸರುಗಳನ್ನು ಜಾಲತಾಣದಲ್ಲಿ ಹರಿ ಬಿಡಲಾಗಿದೆ ಎಂದಾಗ, ಅಧ್ಯಕ್ಷ ನಂಜೇಗೌಡರು ಶೇ.೯೦ರಷ್ಟು ಇದ್ದರೆ ಈಗಲೂ ಒಕ್ಕೂಟದ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ ಎಂದು ಸವಾಲ್ ಹಾಕಿದರು, ಆಗ ಪತ್ರಕರ್ತರು, ನಿಮ್ಮ ನೇಮಕಾತಿ ಕೊಡಿ ಎಂದಾಗ ನೇಮಕಾತಿಯ ಪಟ್ಟಿ ನಿಮಗೆ ನೀಡುತ್ತೇನೆ ಎಂದು ಹೇಳಿಲ್ಲ, ಈ ಮೊದಲು ನೇಮಕಾತಿ ಪಟ್ಟಿ ಅಧಿಕೃತವಾಗಿ ನೋಟಿಸ್ ಬೋರ್ಡಿನಲ್ಲಿ ಹಾಕಲಾಗಿತ್ತು, ಈಗ ನಿಮ್ಮ ಮುಂದೆಯೇ ನೇಮಕಾತಿ ಪಟ್ಟಿ ವಾಚಿಸುವ ಮೂಲಕ ಬಿಡುಗಡೆ ಮಾಡಿದ್ದೇನೆ, ನೀವು ಇದನ್ನು ಧ್ವನಿ ಮುದ್ರಣ ಹಾಗೂ ವಿಡೀಯೋ ಮಾಡಿಕೊಂಡಿದ್ದೀರಾ. ಹಾಗಾಗಿ ಅಧಿಕೃತ ನೇಮಕಾತಿ ಪಟ್ಟಿ ನೀಡಲು ಸಾಧ್ಯವಿಲ್ಲ ಎಂದರು.ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿರುವ ಪಟ್ಟಿಯಲ್ಲಿ ೨೫ ರಿಂದ ೩೦ ಜನರು ಆಯ್ಕೆಯಾಗಿರುವುದು ನಿಜ, ಆದರೆ ಶೇ.೯೦ರಷ್ಟು ಜನ ಆಯ್ಕೆಯಾಗಿರುವುದು ಸುಳ್ಳು, ಶೇ.೭೦ರಷ್ಟು ಆಯ್ಕೆಯಾಗಿದ್ದರೂ ಸಹ ನಾವು ರಾಜೀನಾಮೆ ನೀಡುತ್ತೇವೆ ಎಂದು ಪ್ರತಿಪಾದಿಸಿದಾಗ ಪತ್ರಕರ್ತರು ಮತ್ತು ಅಧ್ಯಕ್ಷ ನಂಜೇಗೌಡರ ನಡುವೆ ವಾಕ್ ಸಮರ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ನಂಜೇಗೌಡರ ನೆರವಿಗೆ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್, ಜಯಸಿಂಹ ಕೃಷ್ಣ ಧ್ವನಿಗೊಡಿಸಿದರು.
ಈಗಾಗಲೇ ಜಾಲತಾಣದಲ್ಲಿ ಶಿಫಾರಸ್ಸು ಪತ್ರಗಳಿಗೆ ಮಾನ್ಯತೆ ನೀಡಿ ಶಿಕ್ಷಣದ ಅರ್ಹತೆಯನ್ನು ಗಾಳಿಗೆ ತೂರಲಾಗಿದೆ. ಭಾರಿ ಭ್ರಷ್ಟಚಾರ ನಡೆದಿದೆ ಎಂದು ಅಪಪ್ರಚಾರ ಮಾಡಿ ಒಕ್ಕೂಟಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದವರ ವಿರುದ್ದ ದೂರು ನೀಡಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.ನಮ್ಮ ಒಕ್ಕೂಟವು ರಾಜ್ಯದಲ್ಲಿಯೇ ಮೊದಲನೇ ಸ್ಥಾನದಲ್ಲಿದೆ, ೧೯೮೭ರಲ್ಲಿ ನಮ್ಮ ಒಕ್ಕೂಟವು ಸ್ಥಾಪನೆಯಾಯಿತು. ನಂತರ ಈ ಒಕ್ಕೂಟವನ್ನು ಅನೇಕ ಮಹನೀಯರು ಆಡಳಿತ ನಡೆಸಿ ಅಭಿವೃದ್ದಿಪಡಿಸಿದ್ದಾರೆ, ಮೊದಲಿಗೆ ೪೬೦ ಸಂಘಗಳಿಂದ ಸ್ಥಾಪನೆಯಾಗಿತ್ತು, ಆದರೆ, ಇಂದು ೧೯೪೦ ಹಾಲಿನ ಸಂಘಗಳಾಗಿವೆ. ೧೦ ರಿಂದ ೧೧ ಲಕ್ಷದವರೆಗೆ ಹಾಲಿನ ಉತ್ಪಾದನೆಯಾಗುತ್ತಿದೆ, ಯಾವುದೇ ರೀತಿ ಯಾರಿಗೂ ತೊಂದರೆಯಾಗದಂತೆ ಒಕ್ಕೂಟದ ಆಡಳಿತವನ್ನು ನಿರ್ವಹಿಸಲಾಗುತ್ತಿದೆ ಎಂದರು.
೨೦೨೨ರಲ್ಲಿ ಒಕ್ಕೂಟದಿಂದ ಚಿಕ್ಕಬಳ್ಳಾಪುರದ ವಿಭಜನೆ ಪ್ರಸ್ತಾವನೆಯನ್ನು ಸರ್ಕಾರವು ಹಿಂಪಡೆದ ಹಿನ್ನಲೆ ಒಕ್ಕೂಟವು ಸಾಕಷ್ಟು ಅಭಿವೃದ್ದಿಗೆ ಮುನ್ನಡೆ ಹಾಡಿದಂತಾಗಿ ಅನೇಕ ಅಭಿವೃದ್ದಿ ಕಾರ್ಯಗಳಿಗೆ ಪೂರಕವಾಗಿದೆ ಎಂದು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್, ಜಯಸಿಂಹ ಕೃಷ್ಣಪ್ಪ, ಡಿ.ವಿ.ಹರೀಶ್, ಹನುಮೇಶ್, ರಾಜೇಂದ್ರ, ಕಾಂತಮ್ಮ, ವೆಂಕಟೇಶ್, ಊಲವಾಡಿ ಬಾಬು, ವ್ಯವಸ್ಥಾಪಕ ನಿರ್ದೇಶಕ ಗೋಪಾಲ್ ರೆಡ್ಡಿ ಇದ್ದರು.